ಮಂಗಳೂರು: ಮಂಗಳೂರಿನಲ್ಲಿಯೂ ಕೊಚ್ಚಿನ್ ಮಾದರಿಯಲ್ಲಿ ವಾಟರ್ ಮೆಟ್ರೋ ವ್ಯವಸ್ಥೆ (ಎಂಡಬ್ಲ್ಯುಎಂಪಿ) ಕಲ್ಪಿಸುವುದಕ್ಕಾಗಿ ಕರ್ನಾಟಕ ಮೆರಿಟೈಂ ಮಂಡಳಿ (ಕೆಎಂಬಿ)ಯು ಯೋಜನೆ ರೂಪಿಸಲು ಮುಂದಾಗಿದೆ.
ಈ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧ ಪಡಿಸಲು ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ನೇತ್ರಾವತಿ, ಫಲ್ಗುಣಿ ನದಿಗಳನ್ನು ಬೆಸೆದು ಬಜಾಲ್‌ನಿಂದ ಮರವೂರಿನವರೆಗೆ ಈ ವಾಟರ್ ಮೆಟ್ರೋ ಜಾಲವನ್ನು ರೂಪಿಸು ವುದು ಯೋಜನೆಯ ಸಾರ.
ಹಂತಹಂತವಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಆರಂಭದಲ್ಲಿ ನೇತ್ರಾವತಿ, ಫಲ್ಗುಣಿ ನದಿಗಳ ಹಿನ್ನೀರನ್ನು ಬಳಸಿ ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಈ ಜಾಲವನ್ನು ರೂಪಿಸಲಾಗುತ್ತದೆ. ಇದರಲ್ಲಿ 17ರಷ್ಟು ಮೆಟ್ರೋ ಸ್ಟೇಷನ್‌ಗಳು ಇರುತ್ತವೆ.
2024-25ರ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಈ ಯೋಜನೆಯನ್ನು ಪ್ರಕಟಿಸಿದ್ದರು. ವಿಸ್ತೃತ ಯೋಜನಾ ವರದಿ (ಡಿಪಿಆರ್)ನಲ್ಲಿ ಮೆಟ್ರೋ ಸ್ಟೇಷನ್‌ಗಳ ಬೇಡಿಕೆಯ ತಾಣಗಳು, ಭೂಮಿಯ ಲಭ್ಯತೆ, ಸಂಪರ್ಕ ಜಾಲ ಇತ್ಯಾದಿಗಳನ್ನು ಅಧ್ಯಯನ ಮಾಡಲಾಗುವುದು. ಮಂಗಳೂರಿನ ಹಳೆ ಬಂದರು ಪ್ರದೇಶದಲ್ಲಿ ಇರುವ ದಟ್ಟಣೆಯನ್ನು ಹಗುರಗೊಳಿಸುವುದಕ್ಕೆ ರೋಲ್ ಆನ್-ರೋಲ್ ಆಫ್ ಮಾದರಿಯಲ್ಲಿ ವಾಹನಗಳ ಸಾಗಾಟದ ಬಗ್ಗೆಯೂ ಇದರಲ್ಲಿ ಸಾಧ್ಯತೆಯ ಅಧ್ಯಯನ ಇರಲಿದೆ.
ದೇಶದ ಮೊದಲ ವಾಟರ್ ಮಟ್ರೋ ಆಗಿ ಕೊಚ್ಚಿನ್ ವಾಟರ್ ಮೆಟ್ರೋ ಕಳೆದ ವರ್ಷವಷ್ಟೇ ಉದ್ಘಾಟನೆಗೊಂಡಿತ್ತು. 78 ದೋಣಿಗಳು, 38 ಜೆಟ್ಟಿಗಳನ್ನು ಒಳಗೊಂಡು 10 ದ್ವೀಪಗಳನ್ನು ಸಂಪರ್ಕಿಸುವ ವ್ಯವಸ್ಥೆ ಇದಾಗಿದೆ. ಹವಾನಿಯಂತ್ರಿತ ದೋಣಿಗಳು ಜನರಿಗೆ ಕಡಿಮೆ ಖರ್ಚಿನ ಸುರಕ್ಷಿತ ಸಾರಿಗೆ ವ್ಯವಸ್ಥೆಯಾಗಿ ಮೆಚ್ಚುಗೆ ಪಡೆದಿವೆ.
ವಾಟರ್‌ವೇ ಯೋಜನೆ
ಮಂಗಳೂರಿನಲ್ಲಿ ರಾಷ್ಟ್ರೀಯ ಜಲಮಾರ್ಗ 43 (ಗುರುಪುರ) ಮತ್ತು 74 (ನೇತ್ರಾವತಿ)ಗಳನ್ನು ಘೋಷಿಸಿದ್ದು, ಇವುಗಳಲ್ಲಿ ಸರಕು ಸಾಗಣೆ, ಪ್ರಯಾಣಿಕರ ಸಂಚಾರಕ್ಕಾಗಿ ಬಾರ್ಜ್ ಯೋಜನೆಯನ್ನು ಮೆರಿಟೈಂ ಮಂಡಳಿ ಎರಡು ವರ್ಷಗಳ ಹಿಂದೆ ರೂಪಿಸಿತ್ತು. ಹೊಯ್ಗೆ ಬಜಾರ್ ಮತ್ತು ಕೂಳೂರನ್ನು ಸಂಪರ್ಕಿಸುವ ಈ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಮಾರ್ಗ ಮತ್ತು ಪ್ರಸ್ತಾವಿತ ನಿಲ್ದಾಣಗಳು
ಬಜಾಲ್, ಸೋಮೇಶ್ವರ ದೇಗುಲ, ಜೆಪ್ಪಿನಮೊಗರು, ಬೋಳಾರ, ಉಳ್ಳಾಲ, ಹೊಯ್ಗೆಬಜಾರ್, ಬೆಂಗ್ರೆ, ಹಳೆ ಬಂದರು, ಬೋಳೂರು-ಬೊಕ್ಕಪಟ್ಣ, ತಣ್ಣೀರುಬಾವಿ, ಸುಲ್ತಾನ್ ಬತ್ತೇರಿ, ನವಮಂಗಳೂರು ಬಂದರು, ಬಂಗ್ರ ಕೂಳೂರು, ಕೂಳೂರು ಸೇತುವೆ, ಬೈಕಂಪಾಡಿ ಕೈಗಾರಿಕಾ ಪ್ರಾಂಗಣ, ಕುಂಜತ್ತಬೈಲು, ಮರವೂರು ಸೇತುವೆ.