ಹಾವೇರಿ: ಜಲಾನಯನ ಯೋಜನೆ ರೈತರಿಗೆ ವರದಾನವಾಗಿದ್ದು, ಬದು ನಿರ್ಮಾಣದಿಂದ ಮಣ್ಣಿನ ಸವಕಳಿ ತಡೆಗಟ್ಟಬಹುದು ಮತ್ತು ಅಂತರ್ಜಲ ಮಟ್ಟ ಹೆಚ್ಚಳವಾಗಿ ನೀರಾವರಿ ಕ್ಷೇತ್ರ ಹೆಚ್ಚಳವಾಗುತ್ತದೆ ಎಂದು ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಹಾಗೂ ಶಾಸಕ ನೆಹರು ಓಲೇಕಾರ ಹೇಳಿದರು.
ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಲಾನಯನ ಅಭಿವೃದ್ಧಿ ಘಟಕ ಯೋಜನೆಯ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಮೀನಿನಲ್ಲಿ ತೋಟಗಾರಿಕೆ ಗಿಡಗಳನ್ನು ನೆಡುವುದರಿಂದ ಆರ್ಥಿಕವಾಗಿ ಸಬಲರಾಗುವರು ಮತ್ತು ಸುಸ್ಥಿರ, ನಿರಂತರ ಆದಾಯ ಕೂಡ ಪಡೆಯಬಹುದು. ಬದುವಿನಲ್ಲಿ ಅರಣ್ಯ ಗಿಡಗಳನ್ನು ನೆಡುವುದರಿಂದ ಶುದ್ಧವಾದ ಗಾಳಿ ಮತ್ತು ಬೆಳಕು ಸಿಗುವುದರಿಂದ ದಿಧೀರ್ಘ ಕಾಲದಲ್ಲಿ ಇದರ ಉಪಯೋಗ ಪಡೆಯಬಹುದು. ಅಲ್ಲದೇ, ಕೃಷಿ ಇಲಾಖೆಯಲ್ಲಿ ರೈತರಿಗೆ ಅನೇಕ ಅನುಕೂಲಗಳಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ಮಾತನಾಡಿ, ಜಲಾನಯನ ಯೋಜನೆ ಈ ಭಾಗಕ್ಕೆ ಬಂದಿರುವುದು ನಿಮ್ಮ ಭಾಗ್ಯ. ಈ ಯೋಜನೆಯಡಿ ಮುಖ್ಯವಾಗಿ ರೈತರಿಗೆ ಮಣ್ಣಿನ ಬದು, ತಡೆ ಅಣೆ, ತೋಟಗಾರಿಕೆ, ಕೃಷಿ ಅರಣ್ಯ, ಪಶು ಸಂಗೋಪನೆ ಮತ್ತು ಆಸ್ತಿ ರಹಿತರಿಗೆ ಜೀವನೋಪಾಯಕ್ಕಾಗಿ ಕೂಲಿ ಕೆಲಸದ ಜೊತೆಗೆ ಮಹಿಳೆಯರಿಗೆ ಸ್ವ-ಉದ್ಯೋಗ ಮಾಡಲು ಕೌಶಲ್ಯ ತರಬೇತಿ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು. ಮಣ್ಣು ಮತ್ತು ನೀರು ಸಂರಕ್ಷಣೆ, ಅಂತರ್ಜಲ ಮಟ್ಟ ಹೆಚ್ಚಳ ಮತ್ತು ರೈತರ ಆದಾಯ ದ್ವಿಗುಣಗೊಳಿಸಲು ಈ ಯೋಜನೆಯಲ್ಲಿ ಅವಕಾಶವಿದೆ ಎಂದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಹಾದಿಮನಿ ಮಾತನಾಡಿ, ಮಣ್ಣಿನ ಸವಕಳಿ ತಡೆಯುವುದು ಹಾಗೂ ಫಲವತ್ತತೆ ಕಾಪಾಡಿಕೊಳ್ಳಲು ರೈತರು ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಸೂಕ್ತ ಪೋಷಕಾಂಶಗಳನ್ನು ನೀಡಬೇಕೆಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಅಧ್ಯಕ್ಷತೆ ವಹಿಸಿದ್ದರು. ಉಪ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಡಿ.ಕೆ., ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ ಡಿ.ಎಂ., ಕೃಷಿ ಅಧಿಕಾರಿ ಪುಟ್ಟರಾಜ ಹಾವನೂರು ಮತ್ತು ಬಸನಗೌಡ ಪಾಟೀಲ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಂಭುಲಿಂಗಪ್ಪ ಗೋಪಾಳಿ, ಹೊಸರಿತ್ತಿ ಹಾಗೂ ಅಕ್ಕೂರು ಗ್ರಾಮ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮೃತ್ಯುಂಜಯ ವಗ್ಗಣ್ಣನವರ, ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಹಂದ್ರಾಳ, ನಾಗರಾಜ ವಿಭೂತಿ, ಬಸವರಾಜ ಡೊಂಕಣ್ಣವರ, ಚನ್ನಬಸಪ್ಪ ಅರಳಿ, ಕೆ.ಸಿ.ಕೋರಿ, ರಾಜಣ್ಣ ಕಲ್ಲೇದೇವರು, ನರೇಶ ಮಂತಟ್ಟಿ ಹಾಗೂ ಗ್ರಾಮದ ರೈತ ಮುಖಂಡರು ಇದ್ದರು. ಕೃಷಿ ಅಧಿಕಾರಿ ಪುಟ್ಟರಾಜ ಹಾವನೂರು ನಿರೂಪಿಸಿ, ಜಿ.ಪಿ.ಸಾಲಿಮಠ ವಂದಿಸಿದರು.
ಬದುವಿನಲ್ಲಿ ಅರಣ್ಯ ಗಿಡಗಳನ್ನು ನೆಡುವುದರಿಂದ ಶುದ್ಧ ಗಾಳಿ ಮತ್ತು ಬೆಳಕು ಸಿಗುತ್ತದೆ. ದೀರ್ಘ ಕಾಲದಲ್ಲಿ ಇದರ ಉಪಯೋಗ ಪಡೆಯಬಹುದು. ಅಲ್ಲದೇ, ಕೃಷಿ ಇಲಾಖೆಯಲ್ಲಿ ರೈತರಿಗೆ ಅನೇಕ ಅನುಕೂಲಗಳಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು. –
ನೆಹರು ಓಲೇಕಾರ, ಶಾಸಕರು, ಹಾವೇರಿ