Advertisement

ಮೇಲುಕೋಟೆ: ತಂಗಿಯ ಕೊಳದ ನೀರು ಕಲುಷಿತ

06:12 PM Nov 03, 2021 | Team Udayavani |

ಮೇಲುಕೋಟೆ: ಕ್ಷೇತ್ರದ ಪವಿತ್ರ ತೀರ್ಥಗಳೆಂದೇ ಪ್ರಖ್ಯಾತವಾಗಿರುವ ಅಕ್ಕತಂಗಿ ಕೊಳಗಳ ಪೈಕಿ ಚೆಲುವ ನಾರಾಯಣನ ಅಭಿಷೇಕಕ್ಕೆ ಬಳಸುತ್ತಿದ್ದ ತಂಗಿಯ ಕೊಳದ ಪವಿತ್ರ ತೀರ್ಥ ಸಗಣಿ ಬಣ್ಣಕ್ಕೆ ಬದಲಾಗಿ ಕಲುಷಿತವಾಗಿದ್ದು, ಸ್ವತ್ಛತೆಯ ಕಾಯಕಲ್ಪಕ್ಕೆ ಕಾದಿದೆ. ತಮಿಳು ಚಲನಚಿತ್ರ ತಂಡವೊಂದು ಕಳೆದ 30 ದಿನಗಳ ಹಿಂದೆ ನೀರಿಗೆ ಬಣ್ಣ ಹಾಗೂ ಹೂ ಹಾಕಿ ಸಂಜೆಯ ವೇಳೆ ಚಿತ್ರೀಕರಣ ಮಾಡಿ ಹೋಗಿದ್ದು, ಮರುದಿನವೇ ತಂಗಿಯ ಕೊಳದ ನೀರು ಕಲುಷಿತವಾಗಿ ಸಗಣಿ ಬಣ್ಣಕ್ಕೆ ತಿರುಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

Advertisement

 ಗಡುಸಾದ ಬಣ್ಣದಲ್ಲೇ ಇದೆ ನೀರು: ಚಿತ್ರೀಕರಣದ ವೇಳೆ ಬಣ್ಣ ಬಳಸಿದ ಫೋಟೋ/ವಿಡಿಯೋ ಲಭ್ಯವಾಗಿಲ್ಲವಾದರೂ ತನಿಖೆಯಿಂದ ಸತ್ಯ ಹೊರ ಬರಬೇಕಿದೆ. ಆದರೆ ಪವಿತ್ರವಾದ ತೀರ್ಥವಂತೂ ಕಲುಷಿತವಾಗಿರುವುದು ಸ್ಪಷ್ಟವಾಗಿದೆ. ಒಂದು ತಿಂಗಳೇ ಕಳೆದು ಹಲವು ಸಲ ಭಾರೀ ಮಳೆ ಬಂದರೂ ನೀರು ಹಿಂದಿನಂತೆ ತಿಳಿಯಾಗದೆ ಗಡುಸಾದ ಬಣ್ಣದಲ್ಲೇ ಇದೆ. ಸಂರಕ್ಷಿತ ಪವಿತ್ರ ತೀರ್ಥವೂ ಆದ ಅಕ್ಕತಂಗಿಕೊಳ ಭವ್ಯ ಸ್ಮಾರಕವಾಗಿದ್ದು, ಭಕ್ತರು ನೀರಿನಲ್ಲಿ ಕಾಲಿಡಲೂ ಸಹ ಅವಕಾಶವಿಲ್ಲ.

ಸುಂದರ ಸೋಪಾನಗಳೊಂದಿಗೆ ಅಕ್ಕಪಕ್ಕದಲ್ಲಿ ನಿರ್ಮಾಣವಾಗಿರುವ ಕೊಳಗಳ ಮುಂಭಾಗ ಆಂಜನೇಯನ ಗುಡಿ ಹಿಂಭಾಗ ಕುಲಶೇಖರಾಳ್ವಾರ್‌ ಸನ್ನಿಧಿ ಇದೆ. ಮೇಲುಕೋಟೆಯ ಪ್ರಮುಖ ಪ್ರವಾಸಿತಾಣವಾದ ಅತ್ಯಾಕರ್ಷಕವಾದ ಈ ಸ್ಥಳ ಚಲನಚಿತ್ರೀಕರಣ ಹಾಗೂ ಫೋಟೋಗ್ರಫರ್ ಗೆ ಅಚ್ಚುಮೆಚ್ಚಿನ ಸ್ಮಾರಕವಾಗಿದೆ. ತಂಗಿಯ ಕೊಳದ ನೀರು ಸ್ವಾಮಿಯ ಪವಿತ್ರ ತೀರ್ಥಕ್ಕೆ ಹಾಗೂ ಸಾರ್ವಜನಿಕರಿಗೆ ಕುಡಿಯಲು ಬಳಕೆಯಾಗುತ್ತದೆ.

ಇದನ್ನೂ ಓದಿ;- ಕೊಳಚೆಯ ಗೂಡಾದ ಆಲೂರು ಕಸಾಪ ಭವನ

ಕೊಳಗಳ ನಿರ್ಮಾಣದ ಹಿನ್ನೆಲೆ: ಮೈಸೂರಿನ ಅಕ್ಕತಂಗಿ ಅರಸಿಯರು ಅಕ್ಕಪಕ್ಕದಲ್ಲೇ ಕೊಳಗಳನ್ನು ಕಟ್ಟಿಸಿದ್ದಾರೆ. ಅಕ್ಕ ಕೊಳ ನಿರ್ಮಾಣಕ್ಕಾದ ವೆಚ್ಚಗಳ ಲೆಕ್ಕ ಇಟ್ಟರೆ, ತಂಗಿ ಧರ್ಮ ಕಾರ್ಯಕ್ಕೆ ಲೆಕ್ಕ ಹಾಕಬಾರದು. ಭಗವಂತ ಪ್ರತಿಫಲ ನೀಡುತ್ತಾನೆ ಎಂಬ ನಂಬಿಕೆಯಿಂದ ಲೆಕ್ಕಾಚಾರ ಮಾಡಿಲ್ಲ. ಮಳೆಬಂದ ನಂತರ ಕೊಳಗಳಲ್ಲಿ ಸಂಗ್ರಹವಾದ ನೀರು ಅವರ ಮನಸ್ಥಿತಿ ಬಿಂಬಿಸುತ್ತಿವೆ. ಹೀಗಾಗಿ ತಂಗಿಯಕೊಳದ ನೀರು ಸಟಿಕದಂತೆ ತಿಳಿಯಾಗಿದ್ದು, ಅಕ್ಕನ ಕೊಳದ ನೀರು ಗಡುಸಾಗಿದೆ ಎಂದು ಜನ ಜನಿತವಾಗಿದೆ.

Advertisement

ಅಕ್ಕನ ಕೊಳಕ್ಕೆ ಬರುವ ಮಳೆ ನೀರು ವಿಶೇಷವಾಗಿ ಮಾಡಿದ ರಂಧ್ರದ ಮೂಲಕ ಶುದ್ಧೀಕರಣವಾಗಿ ಅಕ್ಕನಕೊಳ ಸೇರುವ ವ್ಯವಸ್ಥೆ ಇದೆಯಾದರೂ ಅಲ್ಲಿ ಶೇಖರವಾಗುವ ನೀರು ಮಾತ್ರ ಗಡುಸಾಗಿಯೇ ಉಳಿಯುವ ಮೂಲಕ ಭಕ್ತರ ನಂಬಿಕೆಗೆ ಪುಷ್ಟಿ ನೀಡುತ್ತದೆ.

ಸ್ವಾಮಿಯ ಪವಿತ್ರ ತೀರ್ಥ: ತಂಗಿಯ ಕೊಳದ ನೀರನ್ನು ಚೆಲುವನಾರಾಯಣಸ್ವಾಮಿಯ ಅಭಿಷೇಕ, ತೀರ್ಥಗಳಿಗೆ ಬಳಸಲಾಗುತ್ತಿದ್ದು, ಭಕ್ತಿಭಾವದಿಂದ ಅಕ್ಕತಂಗಿ ಕೊಳಗಳ ನೀರನ್ನು ಸಂರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಮಳೆ ನೀರು ಬಂದಾಗ ತಂಗಿಯ ಕೊಳದ ನೀರು ಮತ್ತಷ್ಟು ತಿಳಿಯಾಗಿ ನಳನಳಿಸುತ್ತದೆ. ನೋಡಲು ನಯನ ಮನೋಹರ ದೃಶ್ಯ ಪ್ರವಾಸಿಗರಿಗೆ ಮುದ ನೀಡುತ್ತದೆ. ಇಂತಹ ಮಹತ್ವದ ಪವಿತ್ರ ತೀರ್ಥವನ್ನು ಚಿತ್ರ ತಂಡ ಬಣ್ಣ ಹಾಕಿ ಕಲುಷಿತ ಮಾಡಿ ಹೋಗಿದೆ ಎಂಬುದು ನಾಗರಿಕರ ಆರೋಪವಾಗಿದೆ.

30 ದಿನದಲ್ಲಿ ಹಲವಾರು ದಿನ ಭಾರೀ ಮಳೆಯೇ ಸುರಿತಾದರೂ ತಂಗಿಯ ನೀರು ಕಲುಷಿತವಾಗಿಯೇ ಉಳಿದಿದ್ದು, ಗಾಢವಾದ ಕೆಟ್ಟಬಣ್ಣ ಮಾತ್ರ ಬದಲಾಗಿಲ್ಲ. ಮಳೆಯ ನೀರಿನಿಂದ ಕೊಳದ ನೀರು ಯಾವುದೇ ಕಾರಣಕ್ಕೂ ಕಲುಷಿತವಾಗುವುದಿಲ್ಲ. ಇಡೀ ಕೊಳದ ನೀರನ್ನೆ ಬದಲಿಸಬೇಕಾಗ ಬಹುದೇನೋ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಏನೇ ಇದ್ದರೂ ನೀರು ಕಲುಷಿತಕ್ಕೆ ಕಾರಣ ತನಿಖೆ ಮಾಡಿ ಬಹಿರಂಗಪಡಿಸಬೇಕು. ಇದಕ್ಕೆ ಸಂಬಂಧಿಸಿದ ಇಲಾಖೆಯವರು ನೀರಿನ ಸಂರಕ್ಷಣೆ ಹಾಗೂ ತೀರ್ಥದ ಪಾವಿತ್ರತೆಯ ರಕ್ಷಣೆಗೆ ಕ್ರಮ ಜರುಗಿಸಬೇಕಾಗಿದೆ.

“ಮೇಲುಕೋಟೆ ಪವಿತ್ರ ಕಲ್ಯಾಣಿ ಮತ್ತು ಅಕ್ಕತಂಗಿ ಕೊಳಗಳು ಸಂರಕ್ಷಿತ ಸ್ಮಾರಕಗಳು. ಇಲ್ಲಿ ನೀತಿ ನಿಯಮಗಳನ್ನು ಗಾಳಿಗೆ ತೂರಿ ಚಿತ್ರೀಕರಣ ಮಾಡುವುದನ್ನು ನಿಷೇಧಿಸಬೇಕು. ತಂಗಿಯ ಕೊಳದ ತೀರ್ಥದ ಪಾವಿತ್ರÂತೆಗೆ ಧಕ್ಕೆ ತಂದು ನೀರನ್ನು ಕಲುಷಿತಗೊಳಿಸ ಲಾಗಿದೆ ಎಂಬ ಸಾರ್ವಜನಿಕರ ಆರೋಪದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ತನಿಖೆಗೆ ಒತ್ತಾಯಿಸುವ ಜತೆಗೆ ಸ್ಮಾರಕಗಳ ಸಂರಕ್ಷಣೆಗೆ ಮನವಿ ಮಾಡಲಾಗುವುದು.” – ತೈಲೂರು ವೆಂಕಟಕೃಷ್ಣ, ಸಾಹಿತಿ ಮತ್ತು ಪುರಾತತ್ವ ಸಂಶೋಧಕರು, ಮಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next