Advertisement

ಸಂಕಷ್ಟದಲ್ಲಿದ್ದ ಕಲ್ಲಂಗಡಿ ಬೆಳೆಗಾರನ ಕೈ ಹಿಡಿಯಿತು

04:17 AM Apr 08, 2020 | Sriram |

ಕೋಟ: ಲಾಕ್‌ಡೌನ್‌ನಿಂದಾಗಿ ರೈತರು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗದೆ ಗದ್ದೆಯಲ್ಲೇ ಕೊಳೆಯುವ ಸಂಕಷ್ಟ ಎದುರಾಗಿದೆ. ಗ್ರಾಹಕರನ್ನು ಸಂಪರ್ಕಿ ಸುವ ಎಲ್ಲ ಮಾರ್ಗಗಳೂ ಬಂದ್‌ ಆಗಿದೆ. ಈ ಸಂದಿಗ್ಧ ಕಾಲಘಟ್ಟದಲ್ಲಿ ರೈತ/ಬೆಳೆಗಾರರು ಹಾಗೂ ಗ್ರಾಹಕರಿಗೆ ಸಂಪರ್ಕ ಕಲ್ಪಿಸಲು ಉದಯವಾಣಿ ರೈತ ಸೇತು ಅಂಕಣವನ್ನು ಆರಂಭಿಸಿದೆ.

Advertisement

ರೈತರು ಅತ್ಯುತ್ತಮವಾಗಿ ಪ್ರತಿಕ್ರಿಯಿ ಸಿದ್ದು, ಮಂದಿ ತಮ್ಮ ಬೆಳೆ ಹಾಗೂ ಇತ್ಯಾದಿ ವಿವರಗಳನ್ನು ಕಳಿಸಿದ್ದರು. ಅದನ್ನು ಪ್ರಕಟಿಸಿದ ಮೊದಲ ದಿನವೇ ಹಲವು ಗ್ರಾಹಕರು ಬೆಳೆಗಾರರನ್ನು ಸಂಪರ್ಕಿಸಿದ್ದಾರೆ. ಕೆಲವರಲ್ಲಿ ಸಾಮಗ್ರಿ ಕುರಿತು ವಿಚಾರಣೆ ಮಾಡಿದ್ದರೆ, ಇನ್ನು ಕೆಲವರಿಂದ ಖರೀದಿಯೂ ನಡೆದಿದೆ.

ಹನ್ನೆರಡು ಟನ್‌ ಮಾರಾಟ
ಟನ್‌ಗಟ್ಟಲೆ ಕಲ್ಲಂಗಡಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ್ದ ಬನ್ನಾಡಿ ಸಮೀಪ ಉಪ್ಲಾಡಿಯ ರೈತ ಸದಾನಂದ ಪೂಜಾರಿಯವರ ಪಾಲಿಗೆ ಈ ಅಂಕಣ ಸಂಜೀವಿನಿಯಾಗಿದೆ.

ಪ್ರಗತಿಪರ ಕೃಷಿಕರಾದ ಸದಾನಂದ ಪೂಜಾರಿಯವರು ತಮ್ಮ ಸ್ನೇಹಿತ ರಮೇಶ್‌ ಪೂಜಾರಿ ಅವರೊಂದಿಗೆ ಸೇರಿ ಉಪ್ಲಾಡಿ ಯಲ್ಲಿ ಪ್ರತಿ ವರ್ಷ ಟನ್‌ಗಟ್ಟಲೆ ಕಲ್ಲಂಗಡಿ ಬೆಳೆಯುತ್ತಿದ್ದರು. ಬಾಡಿ ಗೆಗೂ ಗದ್ದೆ ವಹಿಸಿಕೊಂಡು ಬೆಳೆಯುತ್ತಿದ್ದರು. ಜಿಲ್ಲೆ, ಹೊರರಾಜ್ಯ ಗಳಿಗೂ ಕಲ್ಲಂಗಡಿಯನ್ನು ಮಾರ ಲಾಗುತ್ತಿತ್ತು. ಅದೇ ರೀತಿ ಈ ಬಾರಿ ಕಷ್ಟಪಟ್ಟು ಕಪ್ಪು ಕಲ್ಲಂಗಡಿ ಬೆಳೆದಿದ್ದು,10 ಎಕರೆ ಪ್ರದೇಶ ಕೊಯ್ಲಿಗೆ ಸಿದ್ಧವಾಗಿತ್ತು. ಫ‌ಸಲೂ ಉತ್ತಮವಾಗಿತ್ತು ಅಷ್ಟರಲ್ಲೇ ಕೋವಿಡ್‌-19 ಉಪಟಳದಿಂದ ದೇಶ ವ್ಯಾಪಿ ಲಾಕ್‌ಡೌನ್‌ ಘೋಷಣೆಯಾಯಿತು. ಹಬ್ಬ ಜಾತ್ರೆ, ಸಂತೆಗಳು ಸ್ಥಗಿತಗೊಂಡ ಪರಿಣಾಮ ಹಣ್ಣಿಗೆ ಇದ್ದಕ್ಕಿದ್ದಂತೆ ಬೇಡಿಕೆ ಕುಸಿಯಿತು. ಹೊರ ರಾಜ್ಯಕ್ಕೆ ರಫ್ತು ಮಾಡುವ ಆಸೆಯಂತೂ ಕೈ ಬಿಟ್ಟಿತು. ಕಳೆದ ಬಾರಿ ಕೆ.ಜಿ.ಗೆ 12-18 ರೂ. ಇದ್ದ ಧಾರಣೆ ಈ ಬಾರಿ 3-4 ರೂ.ಗೂ ಕೇಳುವವರಿಲ್ಲ. ಸ್ಥಳೀಯ ಹಲವು ವರ್ತಕ ರನ್ನು ಸಂಪರ್ಕಿಸಿದರೂ ಮಾರುಕಟ್ಟೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಅಸಹಾ ಯಕರಾಗಿ ಹಣ್ಣನ್ನು ಕಟಾವು ಮಾಡದೆ ಗದ್ದೆ ಯಲ್ಲೇ ಬಿಟ್ಟಿದ್ದರು.

ಉದಯವಾಣಿ ರೈತ ಸೇತು
ಈ ಸಂದರ್ಭದಲ್ಲಿ ಉದಯವಾಣಿಯ ರೈತ ಸೇತು ಪ್ರಕಟನೆಯನ್ನು ಕಂಡು, ತಮ್ಮ ಕಲ್ಲಂಗಡಿ ಬೆಳೆಯ ವಿವರವನ್ನು ಕಳುಹಿಸಿದರು. ಮಂಗಳವಾರದ ರೈತ ಸೇತು ಅಂಕಣದಲ್ಲಿ (ಸುದಿನ ಪುಟ 2) ಬೆಳೆಯ ವಿವರ ಪ್ರಕಟವಾಯಿತು.ಬೆಳಗ್ಗೆಯಿಂದಲೇ ಬ್ರಹ್ಮಾವರ, ಉಡುಪಿ, ಹಿರಿಯಡ್ಕ, ಕುಂದಾಪುರ ಮತ್ತಿತರ ಕಡೆಗಳಿಂದ 20ಕ್ಕೂ ಹೆಚ್ಚು ಗ್ರಾಹಕರು ಸದಾನಂದರಿಗೆ ಕರೆ ಮಾಡಿ, ಬೆಳೆ ಕುರಿತು ವಿಚಾರಿಸಿದರು. ಕೆಲವರು ಜಮೀನಿಗೂ ಭೇಟಿ ನೀಡಿ ಪರಿಶೀಲಿಸಿದರು.ಇದರ ಪರಿಣಾಮ ಪ್ರಥಮ ದಿನವೇ 12 ಟನ್‌ ಕಲ್ಲಂಗಡಿ ಹಣ್ಣು ಮಾರಾಟವಾಗಿದೆ.

Advertisement

ನಿಮ್ಮ ಬೆಳೆ ಮಾಹಿತಿ ನೀಡಿ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾವಿರಾರು ರೈತರು ತಾವು ಬೆಳೆದ ತರಕಾರಿ, ಹಣ್ಣು ಹಾಗೂ ಆಹಾರ ಬೆಳೆಗಳನ್ನು ಮಾರಲಾಗದೇ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿಯು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮುಂದಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ರೈತರು, ತರಕಾರಿ ಬೆಳೆಗಾರರು ಈ ಅಂಕಣದ ಪ್ರಯೋಜನ ಪಡೆಯಬಹುದು. ತಮ್ಮ ಬೆಳೆ ಹಾಗೂ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಾಪ್‌ಗೆ ಕಳಿಸಿದರೆ ಪ್ರಕಟಿಸಲಾಗುವುದು. ನೀಡಬೇಕಾದ ಮಾಹಿತಿ: ಹೆಸರು, ಉತ್ಪನ್ನದ ಹೆಸರು, ಲಭ್ಯವಿರುವ ಬೆಳೆ ಪ್ರಮಾಣ, ಊರಿನ ಹೆಸರು, ಸಂಪರ್ಕ ಸಂಖ್ಯೆ, ಉತ್ಪನ್ನದ ಬೆಲೆ.

ರೈತಸೇತುವಿಗೆ ಚಿರಋಣಿ
ನಾನು ಬೆಳೆದ ಕಪ್ಪು ಕಲ್ಲಂಗಡಿಗೆ ಮಾರುಕಟ್ಟೆ ಇಲ್ಲದೇ ಸಂಕಷ್ಟದಲ್ಲಿದ್ದೆ. ಕೊನೆಯ ಪ್ರಯತ್ನ ಎನ್ನುವಂತೆ ಉದಯವಾಣಿಯ ರೈತಸೇತು ಅಂಕಣಕ್ಕೆ ವಿವರ ಕಳುಹಿಸಿದೆ. ಬೆಳಗ್ಗೆಯಿಂದಲೇ ಸಾಕಷ್ಟು ಮಂದಿ ಕರೆ ಮಾಡಿ ಬೆಳೆ ಕುರಿತು ಕೇಳಿದರು. ಈಗಾಗಲೇ 12 ಟನ್‌ ಮಾರಾಟವಾಗಿದ್ದು, 10ಟನ್‌ಗೆ ಮಾತುಕತೆಯೂ ನಡೆದಿದೆ. ಉಳಿದ ಹಣ್ಣಿಗೂ ಬೇಡಿಕೆ ಬಂದಿದೆ. ಸಂಕಷ್ಟ ಕಾಲದಲ್ಲಿ ಕೈ ಹಿಡಿದ ಉದಯವಾಣಿಗೆ ಚಿರಋಣಿ.
– ಸದಾನಂದ ಪೂಜಾರಿ, ಕಲ್ಲಂಗಡಿ ಬೆಳೆಗಾರ

Advertisement

Udayavani is now on Telegram. Click here to join our channel and stay updated with the latest news.

Next