Advertisement
ಗುಲ್ಬರ್ಗ ಜಿಲ್ಲೆಯಲ್ಲಿ ರೈತರು ತಲೆ ಎತ್ತಿ ಬದುಕೋಕೆ ಆಗೋಲ್ಲ. ಆ ರೀತಿ ಇದೆ ಸುಡುವ ಬಿಸಿಲು. ಇಂಥ ಕಡೆ ಎಂಥ ಬೆಳೆ ಬೆಳೆಯಬೇಕು? ಅನ್ನೋದೇ ದೊಡ್ಡ ತಲೆನೋವು. ಇದೆಲ್ಲವನ್ನೂ ಪಕ್ಕಕ್ಕೆ ಇಟ್ಟು, ಹೀಗೆ ಬೆಳೆಯಬಹುದು ನೋಡಿ ಅಂತ ತೋರಿಸಿದ್ದಾರೆ. ದಸ್ತಪುರದ ಜೈವಂತ್ ಕಲ್ಲಂಗಡಿ .
ಈ ಹಿಂದೆ ಜೈವಂತ ಎಕರೆಗಟ್ಟಲೆ ಮೆಣಸು ಬೆಳೆಯುತ್ತಿದ್ದರು. ಅವುಗಳಿಂದ ಪಡೆಯುತ್ತಿದ್ದ ಲಾಭ ಅಷ್ಟಕಷ್ಟೇ. ಬೇಡಿಕೆ, ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿ ನಷ್ಟವನ್ನು ಅನುಭವಿಸಿದ್ದೂ ಇದೆ. ರೋಗಗಳು ಬಾಧಿಸುವುದು ಅಧಿಕ. ಇದೀಗ ಮೆಣಸು ಬೆಳೆಯುವುದನ್ನು ಬಿಟ್ಟು ಇವರು ಕಲ್ಲಂಗಡಿಯ ಮೊರೆ ಹೋಗಿದ್ದಾರೆ. ಮೊದಲು ಗದ್ದೆಯನ್ನು ಉಳುಮೆ ಮಾಡಿ, ಹದಗೊಳಿಸಿ, ಮಲಿcಂಗ್ ವಿಧಾನದಲ್ಲಿ ಸಸಿಯಿಂದ ಸಸಿಗೆ ಒಂದು ಅಡಿ, ಸಾಲಿನಿಂದ ಸಾಲಿಗೆ ಆರು ಅಡಿ ಅಂತರ ಬಿಟ್ಟು ಎರಡು ಎಕರೆಗೆ ಹನ್ನೆರಡು ಸಾವಿರ ಸಸಿಗಳನ್ನು ನಾಟಿ ಮಾಡಿದ್ದಾರೆ.
Related Articles
ನೀರಿಗಾಗಿ ಕೊಳವೆ ಬಾವಿ ಇದೆ. ಆರಂಭದಲ್ಲಿ ನಿತ್ಯ ಅರ್ಧ ತಾಸು, ಬಳ್ಳಿ ದೊಡ್ಡದಾದಂತೆ ಒಂದು, ಎರಡು ತಾಸುಗಳ ಕಾಲ ಹನಿ ನೀರಾವರಿ ವಿಧಾನದ ಮೂಲಕ ನೀರುಹಾಯಿಸುತ್ತಾರೆ. ರಾಸಾಯನಿಕ ಗೊಬ್ಬರಗಳನ್ನು ಹನಿ ನೀರಾವರಿ ವಿಧಾನದ ಮೂಲಕವೇ ನೀಡುತ್ತಾರೆ. ಗೊಬ್ಬರ, ಔಷಧಕ್ಕೆ ಸೇರಿ ಎರಡು ಎಕರೆಯ ಒಂದು ಬೆಳೆಗೆ ಒಂದು ಲಕ್ಷ ರೂಪಾಯಿ ಖರ್ಚು ತಗುಲಿದೆ. ಬಳ್ಳಿಗಳ ಮಧ್ಯೆ ಬೆಳೆದ ಕಳೆಗಳನ್ನು ಆಗಾಗ ತೆಗೆಯುತ್ತಿರಬೇಕು. ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಿದರೆ ಹೂವು, ಕಾಯಿ ಉದುರುವ ಸಾಧ್ಯತೆಗಳಿರುತ್ತವೆ. ಬಿಸಿಲು ಬೀಳುವ ಜಾಗ ಉತ್ತಮ. ಅತಿಯಾದ ಬಿಸಿಲಿರುವ ಪ್ರದೇಶದಲ್ಲಿ ಹೆಚ್ಚಿನ ಇಳುವರಿ ನಿರೀಕ್ಷಿಸುವಂತಿಲ್ಲ. ಕಲ್ಲಂಗಡಿಯಲ್ಲಿ ಹಲವಾರು ತಳಿಗಳಿದ್ದು ಇವರು ಕಡು ಹಸಿರು ಬಣ್ಣದ ತೈವಾನ್ ಕಲ್ಲಂಗಡಿಯನ್ನು ಬೆಳೆದಿದ್ದಾರೆ. ಇದು ರುಚಿಯಲ್ಲಿ ಭಿನ್ನ. ಹೆಚ್ಚು ಸಿಹಿಯಾಗಿದ್ದು ಬೇಡಿಕೆಯು ಅಧಿಕ. ಬೀಜ ಬಿತ್ತಿ ಗಿಡ ತಯಾರಿಸುವ ಬದಲು ಸಸಿ ನಾಟಿ ಉತ್ತಮ. ಮೆಣಸಿಗೆ ಹೋಲಿಸಿದರೆ ಕಲ್ಲಂಗಡಿ ನಿರ್ವಹಣೆ ಸುಲಭ.
Advertisement
ಇಳುವರಿ ಕಲ್ಲಂಗಡಿ ಎರಡು ತಿಂಗಳ ಬೆಳೆ. ಎರಡು ಎಕರೆಯಲ್ಲಿ 50 ಟನ್ ಇಳುವರಿ ಪಡೆದಿದ್ದಾರೆ. ಗ್ರಾಹಕರು, ಕೆ.ಜಿಗೆ ಏಳೂವರೆ ರೂಪಾಯಿಯಂತೆ ಖರೀದಿಸಿದ್ದಾರೆ. ತೈವಾನ್ ಕಲ್ಲಂಗಡಿಗೆ ಬೇಸಿಗೆ ಕಾಲದಲ್ಲಿ ಅಧಿಕ ಬೇಡಿಕೆಯಿದೆ. ಅದರಲ್ಲೂ ಬಿಸಿಲಿನ ತಾಪಮಾನವನ್ನು ತಡೆದುಕೊಳ್ಳಲು ಅಸಾಧ್ಯವಾಗುವ ಗುಲ್ಬರ್ಗಾದಲ್ಲಿ ಪ್ರತಿನಿತ್ಯ ಸಾವಿರಾರು ಟನ್ ಕಲ್ಲಂಗಡಿ ಮಾರಾಟವಾಗುತ್ತದೆ. ಬೆಳೆಗೆ ಹಂದಿಗಳ ಕಾಟ ಇದೆ. ಗದ್ದೆಯ ಸುತ್ತಲೂ ಸರಿಗೆ ಕಟ್ಟುವ ಮೂಲಕ ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಬಹುದಾಗಿದೆ. ನೀರಾವರಿ ವ್ಯವಸ್ಥೆಯಿದ್ದ ಕಡೆಗಳಲ್ಲಿ ಬೆಳೆಯಬಹುದಾದ ಬೆಳೆಯಿದು. ನೆಟ್ಟು 40 ದಿನಕ್ಕೆ ಕಾಯಿ ಬರುತ್ತದೆ. ನಂತರ 30 ದಿನಗಳ ಕಾಲ ಗಿಡಗಳನ್ನು ಚೆನ್ನಾಗಿ ಪೋಷಿಸಬೇಕು. ನೀರಾವರಿ ವ್ಯವಸ್ಥೆಯಿದ್ದರೆ ಉತ್ತರಕರ್ನಾಟಕದಲ್ಲೂ ಕಲ್ಲಂಗಡಿ ಬೆಳೆಯಬಹುದೆಂಬುದನ್ನು ಜೈವಂತರು ತೋರಿಸಿಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅವರ ಸಂಪರ್ಕಕಕ್ಕೆ ಅವರ ಮೊಬೈಲ್ ನಂಬರ್ : 9741123831.
ಚಂದ್ರಹಾಸ ಚಾರ್ಮಾಡಿ