ಮುಂಬೈ: ಮುಂಬೈನ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ (ಜುಲೈ 01) ಘೋಷಿಸಿದೆ. ಮಳೆಯಿಂದಾಗಿ ನಗರದಲ್ಲಿ ರೈಲು ಮತ್ತು ಬಸ್ ಸಂಚಾರದ ಮೇಲೂ ಪರಿಣಾಮ ಬೀರಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸಿಸಿಟಿವಿಯಲ್ಲಿ ಸೆರೆ: ಕೇರಳ- ಆಡಳಿತಾರೂಢ ಸಿಪಿಐಎಂ ಕೇಂದ್ರ ಕಚೇರಿ ಮೇಲೆ ಬಾಂಬ್ ದಾಳಿ
ಭಾರೀ ಮಳೆಯಿಂದಾಗಿ ಮುಂಬೈನ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಧಾರಾಕಾರ ಮಳೆಯ ಪರಿಣಾಮ ಸೈಯನ್- ಬಾಂದ್ರಾ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ ಎಂದು ವರದಿ ವಿವರಿಸಿದೆ.
ಮುಂಬೈ ಸೇರಿದಂತೆ ಕುರ್ಲಾ, ಚೆಂಬೂರ್, ಸೈಯನ್, ದಾದರ್ ಮತ್ತು ಅಂಧೇರಿ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಮುಂದಿನ ಎರಡು ದಿನಗಳ ಕಾಲ ನಗರದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ.
ಭಾರೀ ಪ್ರಮಾಣದ ನೀರಿನಿಂದಾಗಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಅಂಧೇರಿ ಸಬ್ ವೇಯನ್ನು ಬಂದ್ ಮಾಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಪಾದಚಾರಿಗಳು ಕೂಡಾ ನಡೆದಾಡಲು ಹರಸಾಹಸಪಡುವಂತಾಗಿದೆ ಎಂದು ವರದಿ ತಿಳಿಸಿದೆ.