ಹುಮನಾಬಾದ: ಮಳೆ ಅಭಾವ ಕಾರಣ ಈ ಬಾರಿ ಎಲೆಡೆ ಜನಜಾನುವಾರು ನೀರಿಗಾಗಿ ಹಾಹಾಕಾರ ಎದ್ದಿರುವಾಗ ಹುಮನಾಬಾದ, ಚಿಟಗುಪ್ಪ ಸೇರಿ ತಾಲೂಕಿನ ಒಟ್ಟು 14 ಗ್ರಾಮಗಳಿಗೆ ಕಲ್ಪಿಸಲಾದ ಕಾರಂಜಾ ಜಲಾಶಯ ಶಾಶ್ವತ ಕುಡಿಯುವ ನೀರಿನ ಯೋಜನೆ ಸಂಬಂಧಿತ ತಾಲೂಕಿನ ಹುಡಗಿ ಹತ್ತಿರದ ಸಂಗ್ರಹಾರ ಬಳಿ ಯಾರೊಬ್ಬರಿಗೂ ಬಳಕೆಯಾಗದೇ ಸಹಸ್ರಾರು ಲೀಟರ್ ನಿತ್ಯ ಪೋಲಾಗುತ್ತಿದೆ.
ಈ ಹಿಂದೆ ಕುಡಿಯುವ ನೀರು, ಬಟ್ಟೆ ಸ್ವತ್ಛಗೊಳಿಸಲು ಕಿಮೀಗಟ್ಟಲೇ ತೋಟ ಅಥವಾ ಹಳ್ಳಗಳ ಮೊರೆ ಹೋಗುವುದು ಅನಿವಾರ್ಯವಿತ್ತು. ಒಂದೂವರೆ ದಶಕ ಹಿಂದೆ ಹಳ್ಳಿಖೇಡ(ಕೆ) ಗ್ರಾಮದಿಂದ ಕೊಳವೆಬಾವಿ ಮೂಲಕ ನೀರು ಪೂರೈಕೆ ಆರಂಭಿಸಿದ ನಂತರ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿದಿತ್ತು. ಕೆಲ ವರ್ಷಗಳ ನಂತರ ಮತ್ತೆ ಯಥಾ ಸ್ಥಿತಿ ಮುಂದುವರಿಯಿತು. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 2008ರಲ್ಲಿ 20 ಕೋಟಿ ರೂ. ಮೊತ್ತದಲ್ಲಿ ಕಾರಂಜಾ ಜಲಾಶಯದ ಶಾಶ್ವತ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡ ನಂತರ ಹುಮನಾಬಾದ- ಚಿಟಗುಪ್ಪ ಪಟ್ಟಣ ಮಾತ್ರವಲ್ಲದೇ ವ್ಯಾಪ್ತಿಯ 14 ಗ್ರಾಮಗಳ ಜನರು ಈ ಯೋಜನೆ ಲಾಭ ಪಡೆಯುತ್ತಿದ್ದಾರೆ.
2017ರಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯದಲ್ಲಿ ತಕ್ಕ ಮಟ್ಟಿಗೆ ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ಸಮಸ್ಯೆ ಅಷ್ಟಾಗಿ ಕಾಡಲಿಲ್ಲ. ಈ ಮಧ್ಯ ಇದೇ ಜಲಾಶಯದಿಂದ ಬೀದರ, ಭಾಲ್ಕಿ ಪಟ್ಟಣಕ್ಕೂ ಪೂರೈಕೆ ಆಗುತ್ತಿರುವ ಕಾರಣ ಅವಧಿಗಿಂತ ಮುಂಚೆಯೇ ಕಾರಂಜಾ ಜಲಾಶಯ ನೀರು ಬಹುತೇಕ ಬತ್ತಿದೆ. ಇಂತಹ ಗಂಭೀರ ಪರಿಸ್ಥಿತಿ ಮಧ್ಯದಲ್ಲೇ ತಾಲೂಕಿನ ಹುಡಗಿ ಹತ್ತಿರದ ವೆಂಕಮ್ಮ ದೇವಸ್ಥಾನ ಸಮೀಪದ ನೀರು ಸಂಗ್ರಹಾರ ಬಳಿ ಮುಖ್ಯಪೈಪ್ ಹಾಳಾದ ಕಾರಣ ನಿತ್ಯ ಸಹಸ್ರಾರು ಲೀಟರ್ ನೀರು ಪೋಲಾಗುತ್ತಿದೆ.
ವಸ್ತುಸ್ಥಿತಿ ಗೊತ್ತಿದ್ದರೂ ನಿರ್ವಹಣೆ ಜವಾಬ್ದಾರಿ ಹೊತ್ತ ಹುಮನಾಬಾದ ಪುರಸಭೆ ಆಡಳಿತ ನೀರು ಪೋಲಾಗುವುದನ್ನು ತಪ್ಪಿಸಲು ಯಾವುದೇ ದಿಟ್ಟ ಕ್ರಮ ಕೈಗೊಳ್ಳದೇ ಇನ್ನಿಲ್ಲದ ನೆಪ ಒಡ್ಡಿ ಕೈಕಟ್ಟಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜಲ ಅಮೂಲ್ಯ. ಅದನ್ನು ವ್ಯರ್ಥ ಪೋಲಾಗಿಸದೇ ಹಿತಮಿತವಾಗಿ ಬಳಸುವಂತೆ ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ಜಾಗೃತಿ ಮೂಡಿಸುತ್ತಿರುವ ಈ ಸಂದರ್ಭದಲ್ಲಿ ನೀರು ಪೂರೈಸುವ ಜವಾಬ್ದಾರಿ ಹೊತ್ತ ಅಧಿಕಾರಿಗಳು ಕರ್ತವ್ಯದಿಂದ ನುಣುಚಿಕೊಳ್ಳದೇ ನೀರು ಪೋಲಾಗುವುದನ್ನು ತಪ್ಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಾನು ಹುಡಗಿ ಗ್ರಾಮದ ರೈತ ನಮ್ಮ ಹೊಲಕ್ಕೆ ನಿತ್ಯ ಅದೇ ಮಾರ್ಗದಿಂದ ಹೋಗುತ್ತೇನೆ. ಕಳೆದ ಎರಡು ವರ್ಷಗಳಿಂದ ನೋಡುತ್ತಿದ್ದೇನೆ. ನೀರು ಜನ-ಜಾನುವಾರು ಸೇರಿದಂತೆ ಯಾರೊಬ್ಬರ ಉಪಯೋಗಕ್ಕೂ ಬಾರದೇ ನಿತ್ಯ ಸಹಸ್ರಾರು ಲೀಟರ್ ಪೋಲಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ಹರಸಾಹಸಪಟ್ಟು ಕೋಟ್ಯಂತರ ಮೊತ್ತದಲ್ಲಿ ಜನೋಪಯೋಗಿ ಕೆಲಸ ಮಾಡಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿ ಹೊರತಾಗಿ ಬೇರಾರು ಕಾರಣರಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಲಿ.
ವೈಜಿನಾಥ ಪಾಟೀಲ, ಹುಡಗಿ ಗ್ರಾಮಸ್ಥ
ನೀರು ಪೋಲಾಗುತ್ತಿರುವ ವಿಷಯ ಗಮನಕ್ಕಿದೆ. ಅದನ್ನು ನಿರ್ವಹಣೆ ಮಾಡುವ ಜವಾಬ್ದಾರಿಯೂ ನಮ್ಮ ಮೇಲಿದೆ. ಆದರೆ ಅಲ್ಲಿ ಖಾಯಂ ಇಂಜಿನಿಯರ್‌ಇಲ್ಲದ ಕಾರಣ ದುರುಸ್ತಿ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯ ವಾಗಿಲ್ಲ. ಸಾಧ್ಯವಾದಷ್ಟು ಶೀಘ್ರ ದುರುಸ್ತಿ ಕೈಗೊಳ್ಳುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ.
ಶಂಭುಲಿಂಗ ದೇಸಾಯಿ, ಮುಖ್ಯಾಧಿಕಾರಿ ಪುರಸಭೆ ಹುಮನಾಬಾದ
ಶಶಿಕಾಂತ ಕೆ. ಭಗೋಜಿ