Advertisement

ವಾರಕ್ಕೆ ಎರಡು ಬಾರಿ ನೀರು ಕೊಡಿ

04:49 PM Jun 30, 2018 | Team Udayavani |

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರಕ್ಕೆ ಎರಡು ದಿನ ನೀರು ಪೂರೈಸಲು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Advertisement

ಶುಕ್ರವಾರ, ತಮ್ಮ ಗೃಹಕಚೇರಿಯಲ್ಲಿ ಮಹಾನಗರ ಪಾಲಿಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಪೂರೈಸುವ ಉದ್ದೇಶದಿಂದ ಪ್ರಥಮ ಹಂತವಾಗಿ 30 ಓವರ್‌ ಹೆಡ್‌ ಟ್ಯಾಂಕ್‌ಗಳಲ್ಲಿ ನೀರು ಶೇಖರಿಸಿ, ವಾರಕ್ಕೆ ಎರಡು ದಿನ ನೀರು ಸರಬರಾಜು ಮಾಡುವಂತಾಗಬೇಕು ಎಂದರು. 

ಮಳೆಗಾಲದಲ್ಲೂ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಿ ಎಂದು ನೀರು ಸರಬರಾಜು ಶಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿದೆ. ಜುಲೈ ತಿಂಗಳಲ್ಲೇ ಜಲಾಶಯ ಭರ್ತಿಯಾಗುವ ಮುನ್ಸೂಚನೆ ಇರುವುದರಿಂದ ಕಾಡಾ ಸಮಿತಿ, ಅಧಿಕಾರಿಗಳಿಗೆ ಒತ್ತಡ ಹಾಕಿ ಭದ್ರಾ ನಾಲೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಭದ್ರಾ ನಾಲೆಯಲ್ಲಿ ನೀರು ಹರಿದ ನಂತರ ಕುಂದವಾಡ ಮತ್ತು ಟಿ.ವಿ. ಸ್ಟೇಷನ್‌ ಕೆರೆಗಳಲ್ಲಿ ತುಂಬಿಸಿಕೊಳ್ಳಬೇಕು. ತುಂಗಭದ್ರಾ ನದಿಯ ಹರಿವು ಪ್ರಮಾಣವೂ ಸಹ ಹೆಚ್ಚಿರುವುದರಿಂದ ರಾಜನಹಳ್ಳಿ ಬಳಿ ಇರುವ ನೀರು ಸರಬರಾಜು ಕೇಂದ್ರದಿಂದ ತುಂಗಭದ್ರಾ ನದಿ ನೀರು ಬಳಸಿಕೊಳ್ಳಬೇಕು ಶಾಸಕರು ಸೂಚಿಸಿದರು. ಈಗ ಕುಂದವಾಡ ಮತ್ತು ಟಿ.ವಿ. ಸ್ಟೇಷನ್‌ ಕೆರೆಗಳಲ್ಲಿ ಇರುವ ನೀರು ಬಳಸಿಕೊಂಡು ವಾರಕ್ಕೆರಡು ದಿನ ಮೊದಲ ಹಂತವಾಗಿ ನೀರು ಕೊಡಿ. ನಂತರ ಜಲಸಿರಿ ಯೋಜನೆ ಅನುಷ್ಠಾನ ಆಗುವುದರೊಳಗೆ ದಿನಕ್ಕೊಮ್ಮೆ ನೀರು ಪೂರೈಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಈಗ ಕುಂದವಾಡ ಕೆರೆಯಲ್ಲಿ 1.2 ಮೀಟರ್‌ ಹಾಗೂ ಟಿ.ವಿ. ಸ್ಟೇಷನ್‌ ಕೆರೆಯಲ್ಲಿ 5.50 ಮೀಟರ್‌ ನೀರು ಸಂಗ್ರಹಣೆ ಇದೆ. 2 ದಿನಕ್ಕೊಮ್ಮೆ ನೀರು ಪೂರೈಸಿದರೆ 40 ದಿನಗಳ ಕಾಲ ನೀರು ಕೊಡಬಹುದು. ಮುಂದಿನ ದಿನಗಳಲ್ಲೂ ಸಹ ನೀರಿನ ಸಮಸ್ಯೆ ಉಂಟಾಗದಂತೆಯೂ ಸಹ ಅಧಿಕಾರಿಗಳು ಗಮನ ಹರಿಸಬೇಕು ಎಂದರು. 

Advertisement

ನಗರದಲ್ಲಿರುವ 31 ಓವರ್‌ ಹೆಡ್‌ ಟ್ಯಾಂಕ್‌ಗಳಲ್ಲಿ 30 ಟ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಜಲಸಿರಿ
ಯೋಜನೆಯಲ್ಲಿ 19 ಟ್ಯಾಂಕ್‌ಗಳು ನಿರ್ಮಾಣವಾಗಲಿವೆ. ಒಟ್ಟು 50 ಟ್ಯಾಂಕ್‌ ಗಳಲ್ಲಿ ನೀರು ಶೇಖರಣೆ ಮಾಡಿದ ನಂತರದ ದಿನಗಳಲ್ಲಿ 24 ಗಂಟೆ ನೀರು ಕೊಡಲಾಗುವುದು ಎಂದು ತಿಳಿಸಿದರು. ಮೇಯರ್‌ ಶೋಭಾ ಪಲ್ಲಾಗಟ್ಟೆ, ಡೆಪ್ಯುಟಿ ಮೇಯರ್‌ ಕೆ.ಚಮನ್‌ಸಾಬ್‌, ಸದಸ್ಯರಾದ ದಿನೇಶ್‌ ಕೆ. ಶೆಟ್ಟಿ, ಎಂ. ಹಾಲೇಶ್‌, ಎಲ್‌.ಎಂ. ಹನುಮಂತಪ್ಪ, ಉಮೇಶ್‌, ಡೂಡಾ ಮಾಜಿ ಅಧ್ಯಕ್ಷ ಅಯೂಬ್‌ ಪೈಲ್ವಾನ್‌, ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎಂ. ಮಂಜುನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next