Advertisement

ತುಂಗಭದ್ರಾ ಕಾಲುವೆಗಳಿಗೆ ನೀರು ಹರಿಸಿ

02:17 PM Aug 17, 2017 | Team Udayavani |

ಬಳ್ಳಾರಿ: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ತುಂಗಭದ್ರಾ ಜಲಾಶಯ ವ್ಯಾಪ್ತಿಯ ಬಲದಂಡೆ ಅಚ್ಚುಕಟ್ಟು ಪ್ರದೇಶದ ಮೇಲ್ಮಟ್ಟ ಹಾಗೂ ಕೆಳಮಟ್ಟದ ಕಾಲುವೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿ ಆರ್‌ಕೆಎಸ್‌ ಹಾಗೂ ಎಸ್‌ಯುಸಿಐಸಿ ನೇತೃತ್ವದಲ್ಲಿ ತಾಲೂಕಿನ ನೂರಾರು ರೈತರು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಕಾಲುವೆಗೆ ನೀರು ಹರಿಸಲು ಒತ್ತಾಯಿಸಿದರು. ನಂತರ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಎಸ್‌ಯುಸಿಐಸಿ ಜಿಲ್ಲಾ ಕಾರ್ಯದರ್ಶಿ ಕೆ.ಸೋಮಶೇಖರ್‌, 
ಕಳೆದ ಮೂರು ವರ್ಷಗಳಿಂದ ಸತತ ಬರ ಆವರಿಸಿದ್ದು, ಬೆಳೆ ಬೆಳೆಯಲು ಸಾಧ್ಯವಾಗದೆ ರೈತರು ಒದ್ದಾಡುತ್ತಿದ್ದಾರೆ. ಈ ಬಾರಿ ಕೃಷಿ ಚಟುವಟಿಕೆಗಳಿಗೆ ಅಗತ್ಯದಷ್ಟು ನೀರು ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಈಚೆಗೆ ನಡೆದ ಐಸಿಸಿ ಸಭೆಯಲ್ಲಿ ಸದ್ಯಕ್ಕೆ ಕಾಲುವೆಗಳಿಗೆ ನೀರು ಬಿಡದಿರಲು ನಿರ್ಣಯಿಸಲಾಗಿದೆ. ಜಲಾಶಯದಲ್ಲಿ ನೀರಿಲ್ಲ ಎಂಬ ನೆಪ ಹೇಳದೆ, ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿಗೆ ನೀರು ಹರಿಸಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹಾಗೂ ಜಿಲ್ಲಾಡಳಿತ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಹೆಚ್ಚು ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ ಪ್ರಸ್ತುತ 53 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು, 10500 ಕ್ಯೂಸೆಕ್‌ ಗೂ ಅಧಿಕ ಒಳ ಹರಿವು ಇದೆ. ಕಳೆದ ವರ್ಷ ಜುಲೈನಲ್ಲಿ ಕಾಲುವೆಗಳಿಗೆ ನೀರು ಬಿಡಲಾಗಿತ್ತು. ಈ ಬಾರಿ ಆ.15 ಕಳೆದರೂ ನೀರು ಬಿಡುವ ನಿರ್ಧಾರ ಕೈಗೊಂಡಿಲ್ಲ ಎಂದು ಆರೋಪಿಸಿದರು. ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಎ.ದೇವದಾಸ್‌, ಕಾರ್ಯದರ್ಶಿ ಈ.ಹನುಮಂತಪ್ಪ ಸೇರಿದಂತೆ ರೈತರು ಪ್ರತಿಭಟನೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next