Advertisement

ಡಿಸೆಂಬರ್‌ ಒಳಗೆ ಭರಮಸಾಗರ ಹೋಬಳಿಯ 43 ಕೆರೆಗಳಿಗೆ ನೀರು

03:53 PM Aug 08, 2020 | mahesh |

ಚಿತ್ರದುರ್ಗ: ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯ ಭರಮಸಾಗರ ಹೋಬಳಿಯ 43 ಕೆರೆಗಳಿಗೆ ಡಿಸೆಂಬರ್‌ ಒಳಗೆ ರಾಜನಹಳ್ಳಿ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಹಾಗೂ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.

Advertisement

ಭರಮಸಾಗರ ಸಮೀಪದ ಹೆಬ್ಟಾಳ್‌ ಟೋಲ್‌ ಬಳಿ ಶುಕ್ರವಾರ ರಾಜನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು. ಭರಮಸಾಗರ ಹೋಬಳಿಯ 43 ಕೆರೆಗಳಿಗೆ ನೀರು ತುಂಬಿಸುವ ರಾಜನಹಳ್ಳಿ ಏತ ನೀರಾವರಿ ಯೋಜನೆ ಮಂಜೂರಾಗಿ ಐದು ತಿಂಗಳಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಈ ಯೋಜನೆಯ ಕಾಮಗಾರಿ ಉತ್ತಮವಾಗಿ ನಡೆಯುತ್ತಿದೆ. ಈಗಾಗಲೇ ಜಾಕ್‌ವೆಲ್‌ ಕೆಲಸ ಮುಕ್ತಾಯವಾಗಿದ್ದು, ಮುಂದಿನ 2 ರಿಂದ 3 ತಿಂಗಳಲ್ಲಿ ಮಳೆಗಾಲ ಮುಗಿಯುವುದರೊಳಗೆ ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು. ಈ ಯೋಜನೆಗೆ ಕೆಲ ಸಣ್ಣಪುಟ್ಟ ಸಮಸ್ಯೆಗಳಿವೆ. ಎಲ್ಲಾ ಆಡಚಣೆಗಳನ್ನು ನಿವಾರಿಸಿ, ಆದಷ್ಟು ಶೀಘ್ರದಲ್ಲಿ ಭರಮಸಾಗರ ಹೋಬಳಿಯ ಕೆರೆಗಳಿಗೆ ನೀರು ಹರಿಸಲಾಗುವುದು.

ಸಿರಿಗೆರೆ ಡಾ| ಶ್ರೀ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಆಶೀರ್ವಾದ ಹಾಗೂ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ದೂರದೃಷ್ಟಿಯಿಂದಾಗಿ ಭರಮಸಾಗರ ಹೋಬಳಿಯ ಕೆರೆಗಳಿಗೆ ರಾಜನಹಳ್ಳಿ ಯೋಜನೆ ಮೂಲಕ ನೀರು ತುಂಬಿಸುವ ಯೋಜನೆಗಾಗಿ ರೂ. 565 ಕೋಟಿ ರೂ.ಗಳನ್ನು ಮಂಜೂರು ಮಾಡಿ, ಈಗಾಗಲೇ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು. ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಕಳೆದ ವರ್ಷ 3 ಸಾವಿರ ಟಿಎಂಸಿ ನೀರು ಸಮುದ್ರ ಪಾಲಾಗಿದೆ. ಅದಕ್ಕಾಗಿ ಇಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲು ಕೆರೆಗಳಿಗೆ ತುಂಬಿಸಲಾಗುತ್ತಿದೆ ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆಯು ನೂರು ವರ್ಷದ ಇತಿಹಾಸದಲ್ಲಿ 76 ವರ್ಷ ಬರಗಾಲವನ್ನು ಅನುಭವಿಸಿದ್ದೇವೆ. ಇಂತಹ ಸಂದರ್ಭದಲ್ಲಿ ರೈತರು ಜೀವನ ನಡೆಸುವುದು ಬಹಳ ಕಷ್ಟ. ಈಗ ಕೊರೊನಾ
ಸಂಕಷ್ಟದ ನಡುವೆಯೂ ಈ ಭಾಗದ ರೈತರಿಗಾಗಿ ಸರ್ಕಾರ ಅಗತ್ಯ ನೆರವು ನೀಡಿದೆ ಎಂದರು. ಜಿಪಂ ಸದಸ್ಯ ಡಿ.ವಿ.ಶರಣಪ್ಪ, ರಾಜನಹಳ್ಳಿ ಏತ ನೀರಾವರಿ ಯೋಜನೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next