ಮಸ್ಕಿ: ಪ್ರಸಕ್ತ ವರ್ಷ ಮುಂಗಾರಿನಲ್ಲಿ ಸತತ ಮಳೆಯಿಂದಾಗಿ ಮಸ್ಕಿ ನಾಲಾ ಯೋಜನೆಯ (ಎಂಎನ್‌ಪಿ) ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದ ಸಾಮರ್ಥ್ಯ ಮೀರಿಯೂ ಒಳಹರಿವು ಹೆಚ್ಚಿದ್ದರಿಂದ ಹೊರಹರಿವಿನ ಪ್ರಮಾಣವೂ ಏರಿಸಲಾಗಿದೆ.
ಮಸ್ಕಿ ಹಿರೇಹಳ್ಳಕ್ಕೆ ಹರಿದು ಬರುವ ಹೆಚ್ಚುವರಿ ನೀರನ್ನು ಮಾರಲದಿನ್ನಿ ಬಳಿ ನಿರ್ಮಿಸಲಾದ ಜಲಾಶಯದ ಬಳಿ ಸಂಗ್ರಹಿಸಿ ಕೃಷಿ ಚಟುವಟಿಕೆಗೆ ಹರಿಸುವ ಯೋಜನೆ ಇದಾಗಿದೆ. 0.5 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಈ ಮಸ್ಕಿ ನಾಲಾ ಜಲಾಶಯಕ್ಕೆ ಸಿಡಬ್ಲೂಸಿಯಿಂದ ವಾರ್ಷಿಕ 0.78ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಕಳೆದ ಕೆಲ ವರ್ಷಗಳಿಂದ ಮಳೆ ಕೊರತೆಯಿಂದಾಗಿ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದ ನೀರು ಹರಿದು ಬಂದಿಲ್ಲ. ಆದರೆ ಈ ಬಾರಿ ಜಲಾಶಯದಲ್ಲಿ ಭರಪೂರ ನೀರು ಸಂಗ್ರಹವಾಗಿದೆ.
ಮುಂಗಾರು ಆರಂಭದಿಂದಲೂ ಮಳೆ ಅಬ್ಬರ ಜೋರಾಗಿದೆ. ಹೀಗಾಗಿ ಅವಧಿ ಪೂರ್ವವೇ ಮಸ್ಕಿ ಜಲಾಶಯ ತುಂಬಿದೆ. ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಈಗಾಗಲೇ ನೀರು ಕೂಡ ಹರಿಸಲಾಗಿದೆ. ಆದರೂ ನಿರಂತರ ಮಳೆಯಿಂದಾಗಿ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ.
1200 ಕ್ಯೂಸೆಕ್ ಹೊರಕ್ಕೆ: ಮಸ್ಕಿ ನಾಲಾ ಯೋಜನೆಯ ಸಂಗ್ರಹ ಸಾಮರ್ಥ್ಯ 0.5 ಟಿಎಂಸಿ ಅಡಿ ಇದೆ. ಈಗ ಅಷ್ಟು ನೀರು ಸಂಗ್ರಹವಾಗಿದೆ. ಕೃಷಿ ಚಟುವಟಿಕೆಗಾಗಿ ಎಂಎನ್‌ಪಿ ಎಡ ಮತ್ತು ಬಲ ಭಾಗದಕಾಲುವೆಗಳ ಮೂಲಕ ನೀರು ಹರಿಸಲಾಗುತ್ತಿದೆ. ಆದರೂ ಗುರುವಾರ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ 1500 ಕ್ಯೂಸೆಕ್ ಗಡಿ ದಾಟಿದೆ. ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಒಳಹರಿವಿನಲ್ಲಿ ಚೇತರಿಕೆಯಾಗಿದೆ. ಹೀಗಾಗಿ ಜಲಾಶಯದ ಸಂರಕ್ಷಣೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಗುರುವಾರ 1200 ಕ್ಯೂಸೆಕ್ ನೀರನ್ನು ಜಲಾಶಯದಿಂದ ಮಸ್ಕಿ ಹಳ್ಳಕ್ಕೆ ಹರಿಬಿಡಲಾಗಿದೆ.
ಎಚ್ಚರಿಕೆಯಿಂದಿರಲು ಸೂಚನೆ: ಮಸ್ಕಿ ಜಲಾಶಯದಿಂದ ಹಳ್ಳಕ್ಕೆ 1200 ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ಮಸ್ಕಿ ಹಳ್ಳವೂ ತುಂಬಿ ಹರಿಯುತ್ತಿದೆ. ಮಸ್ಕಿ ಹಳ್ಳದ ದಂಡೆಗೆ ಹೊಂದಿಕೊಳ್ಳುವ ಮಸ್ಕಿ, ಸಿಂಧನೂರು ಹಾಗೂ ಮಾನ್ವಿ ತಾಲೂಕಿನ ಹಳ್ಳಿಗರಿಗೆ ಮುನ್ಸೂಚನೆ ನೀಡಲಾಗಿದೆ. ಜಲಾಶಯಕ್ಕೆ ಒಳಹರಿವು ನಿರಂತರ ಏರಿಕೆಯಾಗುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ಹೊರ ಹರಿವು ಏರುವ ಸಾಧ್ಯತೆಇದೆ ಹೀಗಾಗಿ ಜನ-ಜಾನುವಾರುಗಳನ್ನು ಹಳ್ಳಕ್ಕೆ ಬಿಡದಂತೆ ಸೂಚನೆ ನೀಡಲಾಗುತ್ತಿದೆ.
ಎರಡನೇ ಬೆಳೆಗೂ ಖಾತ್ರಿ : ಮಸ್ಕಿ ನಾಲಾ ಜಲಾಶಯ ವ್ಯಾಪ್ತಿಯಲ್ಲಿ ಮಾರಲದಿನ್ನಿ, ಉಸ್ಕಿಹಾಳ, ಕಾಟಗಲ್, ಮುದಬಾಳ, ವೆಂಕಟಾಪುರ, ದಿಗ್ಗನಾಯಕನಬಾವಿ, ಬೆಲ್ಲದಮರಡಿ, ಬೆನಕಟ್ಟಿ, ವೆಂಕಟಾಪುರ ತಾಂಡಾ ಸೇರಿ 10 ಹಳ್ಳಿಗಳ ಸುಮಾರು 7,416 ಎಕರೆ ಜಮೀನು ಅಚ್ಚುಕಟ್ಟು ಪ್ರದೇಶವಿದೆ. ಆಗಸ್ಟ್‌ನಲ್ಲಿಯೇ ಕಾಲುವೆಗಳ ಮೂಲಕ ನೀರು ಹರಿಸಿದ್ದರಿಂದ ಎಲ್ಲೆಡೆ ಭತ್ತದ ಬೆಳೆ ನಾಟಿ
ಮಾಡಿಕೊಳ್ಳಲಾಗಿದೆ. ಕೆಲವು ಕಡೆಗಳಲ್ಲಿ ಸೂರ್ಯಕಾಂತಿ, ಹೈಬ್ರಿಡ್ ಜೋಳ ಸೇರಿ ಇತರೆ ಬೆಳೆಯನ್ನು ಹಾಕಿಕೊಳ್ಳಲಾಗಿದೆ. ಈ ಬಾರಿ ಜಲಾಶಯದಿಂದ ಸಕಾಲಕ್ಕೆ ನೀರು ಹರಿಬಿಟ್ಟಿದ್ದಕ್ಕೆ ಎಲ್ಲೆಡೆ ಬೆಳೆಗಳು ನಳನಳಿಸುತ್ತಿವೆ. ನಿರಂತರ ಮಳೆಯೂ ಆಸರೆಯಾಗಿದ್ದರಿಂದ ಬೆಳೆಗಳಿಗೆ ಯಾವುದೇ ಚಿಂತೆ ಇಲ್ಲ. ಇನ್ನು ಈಗಲೂ ಜಲಾಶಯ ಭರ್ತಿ ಇರುವುದರಿಂದ ಈ ಬಾರಿ ಹಿಂಗಾರು ಎರಡನೇ ಬೆಳೆಗೂ ನೀರು ಖಾತ್ರಿಯಾದಂತಾಗಿದೆ
-ಮಲ್ಲಿಕಾರ್ಜುನ ಚಿಲ್ಕರಾಗಿ