ಬೆಂಗಳೂರು: ಮಳೆ ಕೈಕೊಟ್ಟಿದ್ದರಿಂದ ಅಥಣಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಅಥಣಿ ತಾಲೂಕಿನ ಕೃಷ್ಣಾ ನದಿ ಹೋರಾಟ ಸಮಿತಿ ಸದಸ್ಯರ ನಿಯೋಗವು ಶಾಸಕ ಮಹೇಶ್ ಕಮಠಳ್ಳಿ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಈ ಸಂಬಂಧ ಶುಕ್ರವಾರ ಗೃಹ ಕಚೇರಿ “ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾದ ನಿಯೋಗ, ಕಳೆದೆರಡು ತಿಂಗಳಿನಿಂದ ಉತ್ತರ ಕರ್ನಾಟಕದ ಜಲಮೂಲ ಕೃಷ್ಣಾ ನದಿ ಬತ್ತಿದೆ. ಇದರಿಂದ ವಿಜಯಪುರ, ಬಾಗಲಕೋಟೆಯ 800 ಗ್ರಾಮಗಳು, ನಗರ ಮತ್ತು ಪಟ್ಟಣಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ.
ಹಗಲು-ರಾತ್ರಿ ಎನ್ನದೆ ಮಹಿಳೆ, ಮಕ್ಕಳು, ವೃದ್ಧರು ಟ್ಯಾಂಕರ್ ನೀರಿಗೆ ಚಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಉಂಟಾಗಿದೆ. ಕೊಳವೆಬಾವಿಗಳು ಬತ್ತಿದ್ದರಿಂದ ಟ್ಯಾಂಕರ್ ನೀರು ಕೂಡ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಆದ್ದರಿಂದ ತಕ್ಷಣ ಕೊಯ್ನಾ ಜಲಾಶಯದಿಂದ ಕೃಷ್ಣಾಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿತು.
ಪ್ರತಿ ವರ್ಷ ಜನವರಿಯಿಂದ ಜೂನ್ ಅಂತ್ಯದವರೆಗೆ ಹಂತ-ಹಂತವಾಗಿ ಮಹಾರಾಷ್ಟ್ರದ ಕೊಯ್ನಾ ಹಾಗೂ ವಿವಿಧ ಜಲಾಶಯಗಳಿಂದ 4 ಟಿಎಂಸಿ ನೀರು ಬಿಡಿಸುವ ಸಂಬಂಧ ಜಲ ಸಂಪನ್ಮೂಲ ಇಲಾಖೆ ಮೂಲಕ ಮಹಾರಾಷ್ಟ್ರ ಸರ್ಕಾರದೊಂದಿಗೆ ಲಿಖೀತ ಒಪ್ಪಂದ ಮಾಡಿಕೊಳ್ಳಬೇಕು. ಕೃಷ್ಣಾ ನದಿಯಲ್ಲಿ ಚಿಕ್ಕ ತಡೆಗೋಡೆಗಳನ್ನು ನಿರ್ಮಿಸಿ, ಬೇಸಿಗೆ ಅವಧಿಯಲ್ಲಿ ನದಿಯಲ್ಲಿ ನೀರು ನಿಲ್ಲುವಂತೆ ಮಾಡುವ ಮೂಲಕ ತಾತ್ಕಾಲಿಕ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿತು.
ಅಥಣಿ ತಾಲೂಕಿನ ಬರಪೀಡಿತ 30ಕ್ಕೂ ಹೆಚ್ಚು ಗ್ರಾಮಗಳಿಗೆ ಏಕೈಕ ಜಲಮೂಲ ಅಗ್ರಹಾರಿಣಿ. ಇದಕ್ಕೆ ಮಹಾರಾಷ್ಟ್ರದ ಮಹಿಶಾಳಾ, ತಾಕಾರಿ, ಕೆನಾಲ್ ಮೂಲಕ ನೀರು ಹರಿಸಿದಲ್ಲಿ ಆ ಭಾಗಕ್ಕೆ ಶಾಶ್ವತ ಪರಿಹಾರ ದೊರೆತಂತಾಗಲಿದೆ. ಹೀಗಾಗಿ ನೀರು ಬಿಡಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಚರ್ಚಿಸಬೇಕು ಎಂದು ಆಗ್ರಹಿಸಿತು. ನಂತರ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೂ ಸಮಿತಿ ಮನವಿ ಸಲ್ಲಿಸಿತು. ನಿಯೋಗದಲ್ಲಿ ವಿಜಯಕುಮಾರ್, ಪ್ರಕಾಶ್ ಕಾಂಬ್ಳೆ, ಎಸ್.ಎಚ್. ಪೂಜಾರಿ ಇದ್ದರು.