Advertisement

ಜಲ ಪರೀಕ್ಷಾ ಪ್ರಯೋಗಾಲಯ ಉದ್ಘಾಟನೆ

11:55 AM Dec 08, 2018 | Team Udayavani |

ಬೆಂಗಳೂರು: ನಗರದ ಕೆರೆಗಳ ನೀರಿನ ಗುಣಮಟ್ಟ ನಿರ್ಧರಿಸುವ ನೂತನ ಜಲ ಪರೀಕ್ಷಾ ಪ್ರಯೋಗಾಲಯ ಶುಕ್ರವಾರ ಕಾರ್ಯಾರಂಭ ಮಾಡಿತು. ಬಸವೇಶ್ವರ ನಗರದ ನಿಸರ್ಗ ಭವನದಲ್ಲಿ ತೆರೆಯಲಾದ “ಬಿ.ಬಸವಲಿಂಗಪ್ಪ ಜಲ ಪರೀಕ್ಷಾ ಪ್ರಯೋಗಾಲಯ’ವನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ಉದ್ಘಾಟಿಸಿದರು.

Advertisement

ಉದ್ದೇಶಿತ ಈ ಅತ್ಯಾಧುನಿಕ ಪ್ರಯೋಗಾಲಯವು ವಾರ್ಷಿಕ 25 ಸಾವಿರ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಪರಿಕ್ಷಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ 185 ಕೆರೆಗಳ ಪೈಕಿ ಕೇವಲ 57 ಕೆರೆಗಳ ನೀರು ಪರೀಕ್ಷೆ ಮಾಡಲಾಗಿದೆ. ನೂತನ ಪ್ರಯೋಗಾಲಯದಿಂದ ಉಳಿದ 128 ಕೆರೆಗಳ ನೀರಿನ ಪರೀಕ್ಷೆ ಸಾಧ್ಯವಾಗುತ್ತದೆ. ಇದನ್ನು ಆಧರಿಸಿ ಆ ನೀರು ಕುಡಿಯಲು ಯೋಗ್ಯವಾಗಿವೆಯೇ ಎಂಬುದನ್ನು ನಿರ್ಧರಿಸಬಹುದು ಎಂದು ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ.ಬಿ.ಆರ್‌.ಬಾಲಗಂಗಾಧರ್‌ ಮಾಹಿತಿ ನೀಡಿದರು.

ಈ ಪ್ರಯೋಗಾಲಯದಲ್ಲಿ ನದಿ, ಕೆರೆಗಳು, ಕೊಳವೆಬಾವಿಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಗುಣಮಟ್ಟ ಪರೀಕ್ಷೆ ಮಾಡಲಾಗುತ್ತದೆ. ಇದೂ ಸೇರಿದಂತೆ ರಾಜ್ಯದಲ್ಲಿ ಈಗ ಪ್ರಯೋಗಾಲಯಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಸ್ವತಃ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ ಪ್ರತಿ ತಿಂಗಳು ಸ್ಥಳಕ್ಕೆ ಭೇಟಿ ನೀಡಿ, ಮಾದರಿ ಸಂಗ್ರಹಿಸುತ್ತಾರೆ. ಒಂದು ಲಕ್ಷ ಮಾದರಿ ಪರೀಕ್ಷಾ ಸಾಮರ್ಥ್ಯ ಹೊಂದಿದ್ದೇವೆ ಎಂದರು. 

ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಡಾ.ಪರಮೇಶ್ವರ್‌, ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ಈ ಪ್ರಯೋಗಾಲಯದಿಂದ ಜಲ ಮಾಲಿನ್ಯ ತಪ್ಪಿಸಲು ಅನುಕೂಲ ಆಗಲಿದೆ. ಜನರಿಗೂ ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಬಿ.ಬಸವಲಿಂಗಪ್ಪ ಅವರು ಪರಿಸರ ಇಲಾಖೆಯ ಮೊದಲ ಸಚಿವ ರಾಗಿದ್ದರು. ಹಾಗಾಗಿ, ಪ್ರಯೋಗಾಲಯಕ್ಕೆ ಅವರ ಹೆಸರೇ ಇಡಲಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಸಚಿವ ಶಂಕರ್‌, ಶಾಸಕ ಎಸ್‌.ಸುರೇಶ್‌ ಕುಮಾರ್‌, ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್‌, ಸದಸ್ಯ ಕಾರ್ಯದರ್ಶಿ ಮನೋಜ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು. 

Advertisement

40 ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲ: ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದ 57 ಕೆರೆಗಳ ನೀರಿನ ಮಾದರಿಗಳನ್ನು ನಿಯಮಿತವಾಗಿ ಸಂಗ್ರಹಿಸಿ ಅದರ ಗುಣಮಟ್ಟ ಪರೀಕ್ಷೆ ಮಾಡುತ್ತದೆ. ಹೀಗೆ ಪರಿಕ್ಷೆಗೊಳಪಡಿಸಿದ 57 ಕೆರೆಗಳ ಪೈಕಿ 40 ಕೆರೆಗಳ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದು ತಿಳಿದುಬಂದಿದೆ. ಮಂಡಳಿಯ ವೆಬ್‌ಸೈಟ್‌ನಲ್ಲಿ ಇದನ್ನು ಜನ ವೀಕ್ಷಿಸಬಹುದು.

ಅಷ್ಟೇ ಅಲ್ಲ, ಈ ವರದಿ ಬಗ್ಗೆ ಬಿಡಿಎ, ನಗರ ಜಿಲ್ಲಾ ಪಂಚಾಯ್ತಿ, ರಾಜ್ಯ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಎಲ್‌ಡಿಸಿಎ) ಗಮನಕ್ಕೂ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಮಂಡಳಿಯು ನೀರಿನ ಗುಣಮಟ್ಟವನ್ನು ಐದು ಪ್ರಕಾರಗಳಲ್ಲಿ ವರ್ಗೀಕರಿಸುತ್ತದೆ. ಸಾಂಪ್ರದಾಯಿಕ ಸಂಸ್ಕರಣೆಗೆ ಒಳಪಡದ, ಕ್ರಿಮಿನಾಶಕಕ್ಕೆ ಒಳಪಡಿಸಿದ ನಂತರ ಕುಡಿಯಲು ಯೋಗ್ಯವಿರುವ

ನೀರಿನ ಮೂಲವನ್ನು “ಎ’, ಹೊರಾಂಗಣ ಸ್ನಾನಕ್ಕೆ ಯೋಗ್ಯವಾದ ನೀರನ್ನು “ಬಿ’, ಸಾಂಪ್ರದಾಯಿಕ ಸಂಸ್ಕರಣೆಯಾದ ಕ್ರಿಮಿನಾಶಕ ನಂತರದ ನೀರನ್ನು “ಸಿ’, ವನ್ಯಜೀವಿ, ಮೀನುಗಾರಿಕೆಗೆ ಯೋಗ್ಯವಾದ ನೀರನ್ನು “ಡಿ’ ಹಾಗೂ ನೀರಾವರಿ ಮತ್ತು ಕೈಗಾರಿಕೆ ಶಿತಲೀಕರಣಕ್ಕೆ ಬಳಸಬಹುದಾದ ನೀರನ್ನು “ಇ’ ಎಂದು ವಿಂಗಡಿಸಲಾಗಿದೆ. ನಗರದ ಬಹುತೇಕ ಕೆರೆಗಳ ನೀರು ಕೊನೆಯ ಎರಡು ವರ್ಗಗಳಿಗೆ ಸೇರಿವೆ!

Advertisement

Udayavani is now on Telegram. Click here to join our channel and stay updated with the latest news.

Next