ಮಹಾರಾಷ್ಟ್ರ: ಮುಂಬೈಗೆ ಭೇಟಿ ನೀಡುವ ಪ್ರವಾಸಿಗರಿಗೆ, ಮುಂಬೈ ನಿವಾಸಿಗಳಿಗೊಂದು ಸಿಹಿ ಸುದ್ದಿ ಹೊರಬಿದ್ದಿದೆ. ಹೌದು ಅದೇನೆಂದರೆ ನವಿ ಮುಂಬೈನ ಬೇಲಾಪುರ್ ಜೆಟ್ಟಿಯಿಂದ ಗೇಟ್ ವೇ ಆಫ್ ಇಂಡಿಯಾಗೆ ಮಂಗಳವಾರ (ಫೆ.07)ದಿಂದ ವಾಟರ್ ಟ್ಯಾಕ್ಸಿ ಸೇವೆ ಆರಂಭಗೊಂಡಿದೆ.
ಇದನ್ನೂ ಓದಿ:ಹೊಸ ಫೋನ್ ಕಳೆದುಕೊಂಡ ಕೊಹ್ಲಿಗೆ ಝೊಮ್ಯಾಟೋ ನೀಡಿದ ಉಪಾಯ ಫುಲ್ ವೈರಲ್
ಈ ವಾಟರ್ ಟ್ಯಾಕ್ಸಿ ಸೇವೆಯಿಂದ ಮುಂಬೈಗೆ ಪ್ರಯಾಣಿಸುವ ಸಮಯವನ್ನು ಇನ್ನಷ್ಟು ಕಡಿಮೆ ಮಾಡಲಿದೆ ಎಂದು ವರದಿ ತಿಳಿಸಿದೆ.ಮಂಗಳವಾರ ಬೇಲಾಪುರ್ ಜೆಟ್ಟಿಯಲ್ಲಿ ಮಹಾರಾಷ್ಟ್ರದ ಬಂದರು ಅಭಿವೃದ್ಧಿ ಸಚಿವ ದಾದಾಜಿ ಭೂಸೆ ವಾಟರ್ ಟ್ಯಾಕ್ಸಿ ಸೇವೆಯನ್ನು ಉದ್ಘಾಟಿಸಿದ್ದರು. ವಾಟರ್ ಟ್ಯಾಕ್ಸಿ “ನಯಾನ್ XI” ನಲ್ಲಿನ ಕೆಳಗಿನ ಬರ್ತ್ ನಲ್ಲಿ 140 ಪ್ರಯಾಣಿಕರು ಹಾಗೂ ಮೇಲ್ಗಡೆಯ ಬ್ಯುಸಿನೆಸ್ ಕ್ಲಾಸ್ ಡೆಕ್ ನಲ್ಲಿ 60 ಜನರು ಕುಳಿತು ಪ್ರಯಾಣಿಸಬಹುದಾಗಿದೆ ಎಂದು ವರದಿ ವಿವರಿಸಿದೆ.
ವಾಟರ್ ಟ್ಯಾಕ್ಸಿ ಬೇಲಾಪುರದಿಂದ ಬೆಳಗ್ಗೆ 8-30ಕ್ಕೆ ಹೊರಟು, 9-25ಕ್ಕೆ ಗೇಟ್ ವೇ ಆಫ್ ಇಂಡಿಯಾ ತಲುಪಲಿದೆ. ನಂತರ ವಾಟರ್ ಟ್ಯಾಕ್ಸಿ ಸಂಜೆ 6-30ಕ್ಕೆ ಗೇಟ್ ವೇ ಆಫ್ ಇಂಡಿಯಾದಿಂದ ಹೊರಟು ರಾತ್ರಿ 7-30ಕ್ಕೆ ಬೇಲಾಪುರ್ ಜೆಟ್ಟಿ ತಲುಪಲಿದೆ ಎಂದು ಭೂಸೆ ತಿಳಿಸಿದ್ದಾರೆ.
ಹೇಗಿರಲಿದೆ ವಾಟರ್ ಟ್ಯಾಕ್ಸಿ ಸೇವೆ:
*ಸೋಮವಾರದಿಂದ ಶುಕ್ರವಾರದವರೆಗೆ ವಾಟರ್ ಟ್ಯಾಕ್ಸಿ ಸೇವೆ ಲಭ್ಯ. ವಾರಾಂತ್ಯದಲ್ಲಿ ವಾಟರ್ ಟ್ಯಾಕ್ಸಿ ಸೇವೆ ಇರಲ್ಲ.
*ವಾಟರ್ ಟ್ಯಾಕ್ಸಿಯಲ್ಲಿ ತೆರಳುವವರಿಗೆ www.myboatride.com ನಲ್ಲಿ ಟಿಕೆಟ್ ಪಡೆಯಬಹುದಾಗಿದ್ದು, ಲೋವರ್ (ಕೆಳಗಿನ ಡೆಕ್) ಡೆಕ್ ಗೆ 250 ರೂಪಾಯಿ ಹಾಗೂ ಬ್ಯುಸಿನೆಸ್ ಕ್ಲಾಸ್ ಡೆಕ್ ಗೆ 350 ರೂಪಾಯಿ
ಈ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ್ದ ಸಚಿವ ಭೂಸೆ, ವಾಟರ್ ಟ್ಯಾಕ್ಸಿ ದರವನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಸಮಯದ ಉಳಿತಾಯಕ್ಕೆ ಮತ್ತು ಪರಿಸರ ಸ್ನೇಹಿಯಾಗಿರುವುದರಿಂದ ವಾಟರ್ ಟ್ಯಾಕ್ಸಿ ಸೇವೆ ತುಂಬಾ ಮುಖ್ಯವಾಗಿದೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜೆಟ್ಟಿಯ ಸಮೀಪ ಇರುವುದರಿಂದ ಈ ಸೇವೆ ಮುಖ್ಯವಾಗಿದೆ ಎಂದು ತಿಳಿಸಿದ್ದರು.