Advertisement
ಹೌದು, ಇಲ್ಲಿ “ನಲ್ಲಿ’ ಸಂಪರ್ಕಗಳು ಲೆಕ್ಕಕ್ಕುಂಟು, ನೀರಿಗಿಲ್ಲ. ಬಡಾವಣೆ ಉದ್ದಕ್ಕೂ ಮನೆಗಳ ಮುಂದೆ ತಲಾ ಮೂರು ನಲ್ಲಿಗಳಿವೆ. ಆ ಪೈಕಿ ಯಾವೊಂದರಲ್ಲೂ ನೀರು ಬರುವುದಿಲ್ಲ. ಇದು ದಿನ ಅಥವಾ ವಾರದ ಕತೆ ಅಲ್ಲ; ಕಳೆದ ಒಂದು ತಿಂಗಳಿಂದ ಇರುವ ಗೋಳು. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಫಲಿತಾಂಶ ಶೂನ್ಯ.
Related Articles
Advertisement
ಇನ್ನು ಕುಡಿಯಲಿಕ್ಕೆ 5 ರೂ. ಕಾಯಿನ್ ಹಾಕಿ ಬಿಂದಿಗೆ ನೀರು ತರಬೇಕು ಎಂದು ಲಕ್ಷ್ಮಮ್ಮ ಅಲವತ್ತುಕೊಳ್ಳುತ್ತದೆ. 8ನೇ ಕ್ರಾಸ್‌ನ ಕತೆ ಹೀಗಾದರೆ, ಇಡೀ ಬಂಗಾರಪ್ಪನಗರದಲ್ಲಿ ಪ್ರತಿ ಮನೆಗಳಿಗೆ ಎರಡು ನೀರಿನ ಸಂಪರ್ಕಗಳಿವೆ. ಆದರೂ, ಅದರಲ್ಲಿ ಕೆಲಸ ಮಾಡುವುದು ಒಂದೇ. ಕರೆಂಟ್ ಇದ್ದರೆ ನೀರು; ಇಲ್ಲದಿದ್ದರೆ ಇಲ್ಲ. ಬೇಸಿಗೆ ಇರುವುದರಿಂದ ನಿತ್ಯ ವಿದ್ಯುತ್ ಕಡಿತ ಬೇರೆ ಶುರುವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಇರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ ಎಂದು ನಿವಾಸಿ ರಾಮಚಂದ್ರ ತಿಳಿಸುತ್ತಾರೆ.
ಸಮಸ್ಯೆ ನೀರಿಂದಲ್ಲ; ನೀರುಗಂಟಿಯದು!: “ಕಳೆದ ಎಂಟು-ಒಂಬತ್ತು ತಿಂಗಳಲ್ಲಿ ಶಾಸಕರು ಸುಮಾರು 9 ಕೊಳವೆಬಾವಿ ಕೊರೆಸಿದ್ದಾರೆ. ಎಲ್ಲದರಲ್ಲೂ ನೀರು ಚಿಮ್ಮಿದೆ. ದಿನದ 24 ಗಂಟೆ ಕರೆಂಟ್ ಇದ್ದರೆ, 24 ಗಂಟೆಯೂ ನೀರು ಲಭ್ಯ. ಆದರೆ, ಸಮಸ್ಯೆ ಇರುವುದು ನೀರುಗಂಟಿಯದ್ದು. ಇಡೀ ನಗರಕ್ಕೆ ಇರುವುದೊಬ್ಬನೇ ನೀರುಗಂಟಿ.
ಅಕಸ್ಮಾತ್ ಆತ ಅನಾರೋಗ್ಯದಿಂದ ರಜೆ ಹಾಕಿದರೆ ಅಥವಾ ಊರಿಗೆ ಹೋದರೆ, ಆತ ವಾಪಸ್ ಬರುವವರೆಗೆ ನೀರಿಗೆ ತತ್ವಾರ ಉಂಟಾಗುತ್ತದೆ,’ ಎಂದು ಚಿಕನ್ ವ್ಯಾಪಾರಿ ಕೆ.ಪಿ. ಲಕ್ಷ್ಮಣ್‌ಗೌಡ ಹೇಳುತ್ತಾರೆ. ಬಂಗಾರಪ್ಪನಗರ ಮಾತ್ರವಲ್ಲ, ಕೃಷ್ಣಪ್ಪ ಲೇಔಟ್, ಮಾರಪ್ಪ ಲೇಔಟ್, ಉಲ್ಲಾಳು ಮತ್ತಿತರ ಕಡೆಗಳಲ್ಲೂ ನೀರಿನ ಸಮಸ್ಯೆ ಇದಕ್ಕಿಂತ ಭಿನ್ನವಾಗಿಲ್ಲ.
ಕಾವೇರಿ ನೀರು ಈ ಭಾಗಕ್ಕೆ ಮರೀಚಿಕೆಯಾಗಿದೆ. ಇಡೀ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 500ಕ್ಕೂ ಅಧಿಕ ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಅದರ ಜತೆಗೇ ವಾರ್ಡಿಗೊಂದು ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಗಿದೆ. ಅಂದರೆ, ಒಂದು ವೇಳೆ ಕೊಳವೆಬಾವಿ ಕೈಕೊಟ್ಟರೆ ಘಟಕಗಳು ಕೊರತೆ ಸರಿದೂಗಿಸುತ್ತವೆ ಎಂದು ವಲಯದ ಎಂಜಿನಿಯರೊಬ್ಬರು ಮಾಹಿತಿ ನೀಡುತ್ತಾರೆ.
ಕುಡಿಯಲು ಶುದ್ಧ ನೀರು: ಕುಡಿಯುವ ನೀರಿಗೆ ಶುದ್ಧ ನೀರಿನ ಘಟಕಗಳೇ ಗತಿ. ಬಳಕೆಗೆ ಮಾತ್ರ ಎರಡು-ಮೂರು ದಿನಕ್ಕೊಮ್ಮೆ ಬರುವ ಕೊಳವೆಬಾವಿ ನೀರು ಪೂರೈಕೆ ಆಗುತ್ತದೆ. ಆದರೆ, ಕರೆಂಟ್ ಕೈಕೊಟ್ಟಿತು ಅಥವಾ ಮೋಟಾರು ಸುಟ್ಟಿದೆ ಎಂಬ ನೆಪದಲ್ಲಿ ನೀರು ಪೂರೈಕೆ ವಾರಕ್ಕೊಮ್ಮೆ ವಿಸ್ತರಣೆ ಆಗುತ್ತದೆ ಎಂದು ಕೃಷ್ಣಪ್ಪ ಲೇಔಟ್ ಮಹೇಶ್ ತಿಳಿಸುತ್ತಾರೆ.
ಎರಡು-ಮೂರು ಕೊಳವೆಬಾವಿಗಳನ್ನು ಒಂದಕ್ಕೊಂದು “ಲಿಂಕ್’ ಮಾಡಿಕೊಂಡು ನೀರನ್ನು ಒಂದೆಡೆ ಸಂಗ್ರಹಿಸಿಡಲಾಗುತ್ತದೆ. ಆದರೆ, ಈ ಪೈಕಿ ಯಾವುದಾದರೂ ಕೊಳವೆಬಾವಿ ಬತ್ತಿದ್ದರೆ, ಗೊತ್ತಾಗುವುದೇ ಇಲ್ಲ. ಆಗ, ಮೋಟಾರು ಸುಟ್ಟುಹೋಗುವ ಸಾಧ್ಯತೆಗಳು ಹೆಚ್ಚು. ಇನ್ನು ಈ ಮಧ್ಯೆ ಬೇಸಿಗೆಯಲ್ಲಿ ಕೊಳವೆಬಾವಿಗಳು ಬತ್ತುವ ಸಂಖ್ಯೆ ಹೆಚ್ಚು. ಇದರಿಂದ ಅಲ್ಲಲ್ಲಿ ಸಮಸ್ಯೆ ಕಾಣಿಸಿಕೊಂಡಿರಬಹುದು ಎಂದು ಆರ್.ಆರ್. ನಗರ ವಲಯದ ಕಾರ್ಯನಿರ್ವಾಹಕ ಎಂಜಿನಿಯರೊಬ್ಬರು ತಿಳಿಸುತ್ತಾರೆ.
* ವಿಜಯಕುಮಾರ ಚಂದರಗಿ