Advertisement

ನೀರಿನ ಟ್ಯಾಂಕರ್‌ಗಳು ಪರವಾನಗಿ ಪಡೆಯುವುದು ಕಡ್ಡಾಯ

06:33 AM Mar 16, 2019 | |

ಬೆಂಗಳೂರು: ನಗರದಲ್ಲಿನ ಟ್ಯಾಂಕರ್‌ ನೀರಿನ ಮಾಫಿಯಾಗೆ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದ್ದು, ಮುಂದಿನ ಎರಡು ವಾರಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುವವರು ಕಡ್ಡಾಯವಾಗಿ ಉದ್ದಿಮೆ ಪರವಾನಗಿ ಪಡೆಯುವುದು ಕಡ್ಡಾಯವಾಗಲಿದೆ. 

Advertisement

ಬೇಸಿಗೆ ಹಿನ್ನೆಲೆಯಲ್ಲಿ ನಗರದ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಉಂಟಾಗಿರುವುದರಿಂದ  ಅದನ್ನೇ ಲಾಭವಾಗಿಸಿಕೊಳ್ಳಲು ಮುಂದಾಗಿರುವ ನೀರಿನ ಟ್ಯಾಂಕರ್‌ಗಳು ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿಗೆ ಮುಂದಾಗುತ್ತಾರೆ. ಅದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಟ್ಯಾಂಕರ್‌ ನೀರು ಪೂರೈಕೆಗೆ ಪರವಾನಗಿ ನೀಡಲು ಪಾಲಿಕೆ ಮುಂದಾಗಿದೆ.

ಪಾಲಿಕೆಯಿಂದ ರೂಪಿಸುವ ಹೊಸ ನಿಯಮಗಳಂತೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುವವರು ಕಡ್ಡಾಯವಾಗಿ ಬಿಬಿಎಂಪಿಯಿಂದ ಉದ್ದಿಮೆ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ. ಪಾಲಿಕೆಯ ವ್ಯಾಪ್ತಿಯಲ್ಲಿ 4 ಸಾವಿರಕ್ಕೂ ಹೆಚ್ಚಿನ ನೀರು ಪೂರೈಕೆ ಟ್ಯಾಂಕರ್‌ಗಳಿವೆ ಎಂದು ಅಂದಾಜಿಸಲಾಗಿದೆ. ಆದರೆ, ಬಿಬಿಎಂಪಿಯಾಗಲಿ, ಜಲಮಂಡಳಿಯ ಬಳಿಯಾಗಲಿ ನಿಖರ ಮಾಹಿತಿ ಲಭ್ಯವಿಲ್ಲ.  

ಆ ಹಿನ್ನೆಲೆಯಲ್ಲಿ ಟ್ಯಾಂಕರ್‌ ಮಾಲೀಕರು ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಸಾರ್ವಜನಿಕರಿಗೆ ನೀರು ಪೂರೈಕೆ ಮಾಡುತ್ತಿದ್ದಾರೆ. ಜತೆಗೆ ಬೇಸಿಗೆಯ ಹಿನ್ನೆಲೆಯಲ್ಲಿ ಜನರ ಸುಲಿಗೆಗೆ ಇಳಿದಿದ್ದಾರೆ. ಈ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಪರವಾನಗಿ ಪಡೆಯುವ ನಿಯಮ ಜಾರಿಗೆ ತರಲು ಪಾಲಿಕೆ ಮುಂದಾಗಿದ್ದು, ಪರವಾನಗಿ ಪಡೆಯದ ಟ್ಯಾಂಕರ್‌ಗಳನ್ನು ಜಪ್ತಿ ಮಾಡಲು ನಿರ್ಧರಿಸಿದೆ. ಹೀಗಾಗಿ, ವಾರ್ಡ್‌ವಾರು ಟ್ಯಾಂಕರ್‌ಗಳ ಮಾಹಿತಿ ಸಂಗ್ರಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ನೀರಿನ ಮೂಲ ತೋರಿಸಬೇಕು: ನಗರದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡುವವರು ತಾವು ನೀರನ್ನು ಎಲ್ಲಿಂದ ತರುತ್ತಿದ್ದೇವೆ ಎಂಬ ಮಾಹಿತಿಯನ್ನು ವಾಣಿಜ್ಯ ಪರವಾನಗಿ ಪಡೆಯುವ ವೇಳೆ ಪಾಲಿಕೆಗೆ ತಿಳಿಸಬೇಕು. ಜತೆಗೆ ಆ ನೀರಿನ ಗುಣಮಟ್ಟವನ್ನು ಕೂಡ ಪ್ರಮಾಣೀಕರಿಸಿ ಪ್ರಮಾಣಪತ್ರ ಸಲ್ಲಿಸಬೇಕಿದೆ. ಒಂದು ವೇಳೆ ನೀರಿನ ಮೂಲ ಮತ್ತು ಗುಣಮಟ್ಟ ತೋರಿಸದಿದ್ದರೆ ಅಂತಹ ಟ್ಯಾಂಕರ್‌ಗಳಿಗೆ ನೀರು ಪೂರೈಕೆಗೆ ಅವಕಾಶ ನೀಡದಿರಲು ಪಾಲಿಕೆ ತೀರ್ಮಾನ ಕೈಗೊಂಡಿದೆ. 

Advertisement

ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ: ನೀರಿನ ಸಮಸ್ಯೆಯಿರುವ ಕೆಲವು ವಾರ್ಡ್‌ಗಳಲ್ಲಿ ಜನಪ್ರತಿನಿಧಿಗಳು ಟ್ಯಾಂಕರ್‌ ಮೂಲಕ ಜನರಿಗೆ ನೀರು ಪೂರೈಕೆ ಮಾಡುತ್ತಿದ್ದಾರೆ. ಉಚಿತವಾಗಿ ನೀರು ಪೂರೈಕೆ ಮಾಡಲು ಅವಕಾಶವಿದ್ದರೂ, ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜನಪ್ರತಿನಿಧಿಗಳು ಟ್ಯಾಂಕರ್‌ ಮೇಲೆ ತಮ್ಮ ಹೆಸರು, ರಾಜಕೀಯ ಪಕ್ಷದ ಚಿಹ್ನೆ ಹಾಕಿ ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ. 

ಟ್ಯಾಂಕರ್‌ ನೀರಿಗೆ 2 ದಿನಗಳಲ್ಲಿ ದರ ನಿಗದಿ: ಟ್ಯಾಂಕರ್‌ ನೀರು ಪೂರೈಕೆ ಪರವಾನಗಿ ಕಡ್ಡಾಯಗೊಳಿಸಲು ಮುಂದಾಗಿರುವ ಪಾಲಿಕೆಯು, ನಗರದಾದ್ಯಂತ ಟ್ಯಾಂಕರ್‌ ನೀರಿಗೆ ಏಕರೂಪ ದರ ನಿಗದಿಪಡಿಸುವ ಮಹತ್ತರ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಅದರಂತೆ ಲೋಕೋಪಯೋಗಿ ಇಲಾಖೆಯಲ್ಲಿನ ಶೆಡ್ನೂಲ್‌ ದರ (ಎಸ್‌ಆರ್‌ ರೇಟ್‌) ಪಟ್ಟಿ ನೀಡುವಂತೆ ಇಲಾಖೆಯ ಅಧಿಕಾರಿಗಳನ್ನು ಕೋರಿದ್ದು, ನೀರಿನ ಪೂರೈಕೆ ಪ್ರಮಾಣ, ದೂರ ಸೇರಿ ಇನ್ನಿತರ ಅಂಶಗಳನ್ನು ಪರಿಶೀಲಿಸಿ ದರ ನಿಗದಿ ಮಾಡಲಾಗುತ್ತದೆ. ಅದಕ್ಕಿಂತ ಹೆಚ್ಚಿನ ದರ ವಸೂಲಿ ಮಾಡಿದವರಿಗೆ ಶಿಕ್ಷೆಯಾಗಲಿದೆ. 

ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವವರು ಸಾರ್ವಜನಿಕರ ಸುಲಿಗೆ ಮಾಡುವುದನ್ನು ತಡೆಯುವ  ಉದ್ದೇಶದಿಂದ ಟ್ಯಾಂಕರ್‌ ನೀರಿಗೆ ದರ ನಿಗದಿಪಡಿಸಲಾಗುವುದು. ಜತೆಗೆ ನಗರದಲ್ಲಿ ಎಲ್ಲಾ ಟ್ಯಾಂಕರ್‌ಗಳು ವಾಣಿಜ್ಯ ಪರವಾನಗಿ ಪಡೆಯುವುದು ಕಡ್ಡಾಯವಾಗಿದ್ದು, ಎರಡು ವಾರಗಳಲ್ಲಿ ಈ ಕುರಿತು ನಿಯಮಗಳನ್ನು ರೂಪಿಸಿ ಪ್ರಕಟಿಸಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next