Advertisement

ನೀರಿನ ಟ್ಯಾಂಕ್‌ಗೆ ವಿಷ: ಮಠಕ್ಕೆ ಜನಪ್ರತಿನಿಧಿಗಳ ಭೇಟಿ

09:12 PM Jun 18, 2019 | Lakshmi GovindaRaj |

ಹುಣಸೂರು: ತಾಲೂಕಿನ ಗಾವಡಗೆರೆ ವಸತಿ ಶಾಲೆಯ ಓವರ್‌ ಹೆಡ್‌ ಟ್ಯಾಂಕ್‌ ನೀರಿಗೆ ಕಿಡಿಗೇಡಿಗಳು ವಿಷ ಬೆರೆಸಿದ ಪ್ರಕರಣ ತಿಳಿದು ಜಿಪಂ ಉಪಾಧ್ಯಕ್ಷೆ ಗೌರಮ್ಮ ಮತ್ತಿತರ ಜನಪ್ರತಿನಿಧಿಗಳು ಮಠಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

Advertisement

ಗಾವಡಗೆರೆಯ ಗುರುಲಿಂಗ ಜಂಗಮ ದೇವರ ಮಠದ ಮಠದಲ್ಲಿ ನಟರಾಜಸ್ವಾಮೀಜಿ ಅವರನ್ನು ಭೇಟಿ ಮಾಡಿದ ಅವರು, ಮಠದಲ್ಲಿನ ಘಟನಾ ಸ್ಥಳಗಳಲ್ಲಿ ಅಡ್ಡಾಡಿ ಮಾಹಿತಿ ಪಡೆದ ನಂತರ ನಿಮ್ಮೊಂದಿಗೆ ನಾವಿದ್ದೇವೆ, ಹೆದರಬೇಡಿ ಎಂದು ಧೈರ್ಯ ತುಂಬಿದರು.

ಮಠದಲ್ಲಿ 3ನೇ ಪ್ರಕರಣ: ಕಳೆದ ಹತ್ತು ವರ್ಷಗಳಿಂದೀಚೆಗೆ ಮೊದಲು ಹುಲ್ಲಿನ ಮೆದೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದರೆ, ಐದು ವರ್ಷಗಳ ಹಿಂದೆ ವಿದ್ಯಾರ್ಥಿಗಳು ಮಲಗುವ ಕೊಠಡಿಯೊಳಕ್ಕೆ ಬಟ್ಟೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಎಸೆದಿದ್ದರು. ಇದೀಗ ಟ್ಯಾಕ್‌ ನೀರಿಗೆ ವಿಷ ಬೆರೆಸಿರುವ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಬೇಕೆಂದು ಮಠದ ಅಭಿಮಾನಿಗಳು ಆಗ್ರಹಿಸಿದ್ದಾರೆ.

ಕುಡಿಯಲು ಯೋಗ್ಯವಲ್ಲ: ಗಾವಡಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೀರಿನ ಪರೀಕ್ಷೆ ನಡೆಸಿದ್ದು, ಕುಡಿಯಲು ಯೋಗ್ಯವಲ್ಲವೆಂಬ ಪ್ರಾಥಮಿಕ ವರದಿ ಬಂದಿದೆ. ಅಲ್ಲದೇ ಪೊಲೀಸರು ಸಹ ಪ್ರತ್ಯೇಕವಾಗಿ ನೀರಿನ ಸ್ಯಾಂಪಲ್‌ ಸಂಗ್ರಹಿಸಿದ್ದಾರೆ. ಮೈಸೂರಿನ ಫೊರೆನ್ಸಿಕ್‌ ಲ್ಯಾಬ್‌ಗೂ ಸಹ ನೀರಿನ ಸ್ಯಾಂಪಲ್‌ ಕಳುಹಿಸಲಾಗಿದ್ದು, ಇನ್ನೂ ವರದಿ ಬರಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್‌ ತಿಳಿಸಿದ್ದಾರೆ. ತಾಲೂಕು ಆಹಾರ ನಿರೀಕ್ಷಕ ಸುರೇಶ್‌, ಸಂಪೂರ್ಣ ವರದಿ ಬರುವವರೆಗೂ ಪ್ರತ್ಯೇಕವಾಗಿ ಅಡುಗೆ ತಯಾರಿಸಲು ಸೂಚಿಸಿದ್ದಾರೆ.

ಇಂದು ಗ್ರಾಪಂ ವಿಶೇಷ ಸಭೆ: ಮಠದಲ್ಲಿ ನಡೆದಿರುವ ಘಟನೆಯಿಂದ ಎಚ್ಚೆತ್ತುಕೊಂಡಿರುವ ಗಾವಡಗೆರೆ ಗ್ರಾಮ ಪಂಚಾಯ್ತಿ ಬುಧವಾರ ಮಧ್ಯಾಹ್ನ 3ಕ್ಕೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ ಪ್ರಕಾಶ್‌ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಕರೆದು ಚರ್ಚಿಸಿ, ಸ್ವಾಮಿಜಿಯವರ ನೆರವಿಗೆ ನಿಲ್ಲುವುದಾಗಿ ತಾಪಂ ಇಒ ಕೃಷ್ಣಕುಮಾರ್‌ ತಿಳಿಸಿದ್ದಾರೆ.

Advertisement

ಉಪಾಧ್ಯಕ್ಷರೊಂದಿಗೆ ಮಾಜಿ ಸದಸ್ಯ ದೇವರಾಜ್‌, ತಾಪಂ ಅಧ್ಯಕ್ಷೆ ಪದ್ಮಮ್ಮ, ಸದಸ್ಯ ಗಣಪತಿರಾವ್‌ ಇಂಡೋಲ್ಕರ್‌, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಪ್ರಕಾಶ್‌, ಪಿಡಿಒ ಲೋಕೇಶ್‌, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶೋಧಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next