ಉಡುಪಿ: ನಗರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆ ಗಂಭೀರ ಸಮಸ್ಯೆ ಏನೂ ಇಲ್ಲ. ಆದರೆ ಕೆಲವೆಡೆ ತಾಂತ್ರಿಕ ಸಮಸ್ಯೆಯಿಂದಾಗಿ ನಗರದ ಎಲ್ಲ ಭಾಗಗಳಿಗೆ ಸರಿಯಾಗಿ ನೀರು ಪೂರೈಕೆಯಾಗದೆ ಸಮಸ್ಯೆಯಾಗಿದೆ.
ನಗರದಲ್ಲಿ ಜನವರಿಯಿಂದಲೇ ನೀರು ಪೂರೈಕೆಯನ್ನು 3 ವಲಯಗಳಾಗಿ ವಿಂಗಡಿಸಿ ಪೂರೈಸಲಾಗುತ್ತಿದೆ. ಸರಳೇಬೆಟ್ಟಿನ ಎತ್ತರದ ಪ್ರದೇಶದ ಕೆಲವಡೆ, ಪರ್ಕಳ ಪರಿಸರ, ಈಶ್ವರ ನಗರದ ಎಂಐಸಿ ಪ್ರದೇಶಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎನ್ನುವ ದೂರು ಗಳು ಕೇಳಿ ಬಂದಿವೆ.
ಹಿರಿಯಡಕ ಸ್ವರ್ಣಾ ನದಿ ಬಜೆ ಡ್ಯಾಂನಲ್ಲಿ 24 ಗಂಟೆ ಪಂಪಿಂಗ್ ಕಾರ್ಯ ನಡೆಯುತ್ತಿದೆ. ಬಜೆ ಡ್ಯಾಂನಲ್ಲಿ 5.40 ಅಡಿ ನೀರಿನ ಸಂಗ್ರಹವಿದೆ. ಕಳೆದ ಬಾರಿ ಇದೇ ಸಮಯಕ್ಕೆ ನೀರಿನ ಸಂಗ್ರಹ 5.14 ಅಡಿ ಇತ್ತು. ಈ ಬಾರಿ ನೀರಿಗೆ ಸಮಸ್ಯೆ ಆಗುವುದಿಲ್ಲ. ಪವರ್ ಬ್ಯಾಕಪ್, ಲೀಕೇಜ್ ಸಮಸ್ಯೆ ಇದ್ದಲ್ಲಿ ಒಂದು ವಾರ್ಡ್‌ನಲ್ಲಿ ಏಳೆಂಟು ಮನೆಗಳಿಗೆ ನೀರಿನ ಪೂರೈಕೆ ಸಮಸ್ಯೆ ಆಗಬಹುದು. ಇನ್ನು ಕೆಲವೆಡೆ ಪೈಪ್‌ಲೈನ್ ಬದಲಾವಣೆಯಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಈ ಸಮಸ್ಯೆ ಶೀಘ್ರದಲ್ಲಿ ಪರಿಹಾರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಪರಿಹಾರಕ್ಕೆ ಯತ್ನಿಸಲಾಗುತ್ತಿದೆ ಎಂದು ಈಶ್ವರ ನಗರ ವಾರ್ಡ್ ಸದಸ್ಯ ಮಂಜುನಾಥ್ ಮತ್ತು ಸರಳೇಬೆಟ್ಟು ವಾರ್ಡ್ ಸದಸ್ಯೆ ವಿಜಯಲಕ್ಷ್ಮೀ ತಿಳಿಸಿದ್ದಾರೆ.
60 ದಿನಕ್ಕೆ ಬೇಕಾಗುವಷ್ಟು ನೀರು
ಸ್ವರ್ಣಾ ನದಿ ಬಜೆ ಮತ್ತು ಶಿರೂರು ಡ್ಯಾಂಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ಮುಂದಿನ 60 ದಿನಗಳವರೆಗೆ ನಗರಕ್ಕೆ ಬೇಕಾಗುವಷ್ಟು ನೀರಿದೆ. ಜೂನ್ ಮೊದಲ ವಾರದಲ್ಲಿ ಮಳೆ ಬಾರದೆ ಹೋದರೆ ಬಜೆ ಸಮೀಪದ ಗುಂಡಿಯಲ್ಲಿರುವ ನೀರು ಎತ್ತಲು ಅಗತ್ಯವಿರುವ ಸಿದ್ಧತೆ ಮಾಡಲಾಗಿದೆ. ಪೂರೈಕೆ ವ್ಯತ್ಯಯ ಇದ್ದಲ್ಲಿ ತತ್‌ಕ್ಷಣ ಸ್ಪಂದಿಸಿ ಪರಿಹರಿಸುವತ್ತ ಗಮನ ಹರಿಸಲಾಗುತ್ತಿದೆ.
-ಮೋಹನ್ ರಾಜ್, ಎಇಇ ನಗರಸಭೆ. ಉಡುಪಿ.