Advertisement

ಟ್ಯಾಂಕರ್‌ಗಳು ಬರದಿದ್ದರೆ ಇಲ್ಲಿ ನೀರಿಲ್ಲ

11:54 AM Apr 10, 2017 | |

ಬೆಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರ ಎನಿಸಿಕೊಳ್ಳುತ್ತಿರುವ ಕೃಷ್ಣರಾಜಪುರದ ಕೆಲ ಭಾಗಕ್ಕೆ ಜಲಮಂಡಳಿಯ ಸಂಪರ್ಕವಿದೆ. ಇಲ್ಲಿ ವಾರಕ್ಕೊಮ್ಮೆ ನೀರು ಬರುತ್ತದೆ. ಉಳಿದಂತೆ ಬೋರ್‌ವೆಲ್‌ಗ‌ಳೇ ಆಧಾರ. ಇನ್ನು, ಗ್ರಾಮೀಣ ಭಾಗಕ್ಕೆ ನೀರಿನ ಸಂಪರ್ಕವಿಲ್ಲ. ಹೀಗಾಗಿ ನೀರಿಗೆ ಅಂತರ್ಜಲವೇ ಮೂಲ. ಬೇಸಿಗೆಯಾದ್ದರಿಂದ ಬೋರ್‌ವೆಲ್‌ಗ‌ಳು ಬರಿದಾಗಿ ಕುಳಿತಿವೆ. ಜನರು ನೀರಿಲ್ಲದೆ ಒದ್ದಾಡುವಂತಾಗಿದೆ. ಈ ನಡುವೆ ಟ್ಯಾಂಕರ್‌ ಮಾಲೀಕರು ನೀರು ಪೂರೈಸುತ್ತಿದ್ದಾರೆ. ಆದರೆ, ದುಭಾರಿ ಬೆಲೆ. ಆದರೂ ಅದೇ ಅನಿವಾರ್ಯ.  ಟ್ಯಾಂಕರ್‌ ಸೇವೆ ಇಲ್ಲದೇ ಹೋಗಿದ್ದರೆ… ಇಲ್ಲಿನವರ ಪರಿಸ್ಥಿತಿ ಊಹಿಸಿಕೊಳ್ಳುವುದೂ ಕಷ್ಟ. 

Advertisement

ಬೆಂಗಳೂರು: ಜಲಮಂಡಲಿ ಸಂಪರ್ಕ ಇದ್ದರೂ ವಾರಕ್ಕೊಮ್ಮೆ ನೀರು, ಅಂತರ್ಜಲ ಖಾಲಿಯಾಗಿ ಬೋರ್‌ವೆಲ್‌ಗ‌ಳೂ ಬರಿದು ಹೀಗಾಗಿ, ಬಿಂದಿಗೆಗೆ ಐದು ರೂ. ಕೊಟ್ಟು ಟ್ಯಾಂಕರ್‌ಗಳು, ಬೋರ್‌ವೆಲ್‌ ಮಾಲೀಕರಿಂದ ನೀರು ಖರೀದಿಸಬೇಕಾದ ಅನಿವಾರ್ಯತೆ. ಇದು, ಕೆ.ಆರ್‌.ಪುರಂ ಸುತ್ತಮುತ್ತಲ ಪ್ರದೇಶಗಳಲ್ಲಿನ ಪರಿಸ್ಥಿತಿ. ರಾಜಧಾನಿಯ ಪ್ರಮುಖ ವಾಣಿಜ್ಯ ಕೇಂದ್ರ ಎಂದೇ ಕರೆಸಿಕೊಳ್ಳುವ ಹಾಗೂ ಅತಿಹೆಚ್ಚು ಜನಸಂದಣಿ ಹೊಂದಿರುವ ಕೃಷ್ಣರಾಜಪುರ ಭಾಗದಲ್ಲಿ ಬೇಸಿಗೆಯಲ್ಲಿ ಮಾತ್ರವಲ್ಲ ನಿತ್ಯವೂ ಇದೇ ಕಥೆ.  

ಕೃಷ್ಣರಾಜಪುರದ ಪ್ರಮುಖ ಭಾಗ ಗಳಿಗೆ ಜಲಮಂಡಳಿಯಿಂದ ಕುಡಿ ಯುವ ನೀರಿನ ಸಂಪರ್ಕ ನೀಡಲಾಗಿದೆ. ಅಲ್ಲಿ ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿ ರುವ ಹಳ್ಳಿಗಳಿಗೆ ಈವರೆಗೆ ಜಲ ಮಂಡಳಿ ನೀರು ಕೊಡಲು ಮನಸ್ಸು ಮಾಡಿಲ್ಲ. ಇನ್ನು ಈ ಭಾಗಗಳಲ್ಲಿ ಕುಡಿಯುವ ನೀರಿಗೆ ಕೊಳವೆಬಾವಿಗ ಳನ್ನೇ ಆಶ್ರಯಿಸಿದ್ದು, ಬಿರು ಬೇಸಿಗೆಯ ಪರಿಣಾಮ ಬಹುತೇಕ ಕೊಳವೆಬಾವಿಗಳು ಬತ್ತಿವೆ. 

ಶುದ್ಧ ಕುಡಿಯುವ ನೀರಿನ ಘಟಕ ಗಳೂ ಹೆಚ್ಚಾಗಿ ಇಲ್ಲದ ಕಾರಣ ಖಾಸಗಿ ಟ್ಯಾಂಕರ್‌ಗಳಿಗೆ ಮೊರೆ ಹೋಗಬೇಕಾದ ಸ್ಥಿತಿ. ಪರಿಸ್ಥಿತಿಯ ಲಾಭ ಪಡೆದ ಖಾಸಗಿ ಟ್ಯಾಂಕರ್‌ ಮಾಲೀಕರು ಬಿಂದಿಗೆಗಿಷ್ಟು ಎಂದು ದರ ನಿಗದಿ ಮಾಡಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಬಾರಿಯ ಬೇಸಿಗೆಯಲ್ಲಿ ಕಲ್ಕೆರೆ, ಜಯಂತಿನಗರ, ಆನಂದಪುರ, ಭಟ್ಟರಹಳ್ಳಿ, ಬಸವನಪುರ, ಪ್ರಿಯಾಂಕ ನಗರ, ಹೊರಮಾವು, ಚನ್ನಸಂದ್ರ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿದ್ದ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹೀಗಾಗಿ, ಕೊಳವೆ ಬಾವಿ ನೀರನ್ನು ಪೂರೈಕೆ ಮಾಡಲು ಜಲಮಂಡಳಿಗೆ ಸಾಧ್ಯವಾಗುತ್ತಿಲ್ಲ. 

ಸ್ಥಳೀಯ ಪಾಲಿಕೆ ಸದಸ್ಯರು ಅಥವಾ ಶಾಸಕರು ಕುಡಿಯುವ ನೀರು ಪೂರೈಕೆ ಮಾಡಲು ವ್ಯವಸ್ಥೆ ಮಾಡಿರುವ ಟ್ಯಾಂಕರ್‌ಗಳು ಬರುವ ಹಾದಿ ಕಾದು ಕುಳಿತುಕೊಳ್ಳುವ ಸ್ಥಿತಿ ಇಲ್ಲಿನ ನಾಗರಿಕರದು. ಆ ಟ್ಯಾಂಕರ್‌ಗಳು ಪ್ರತಿದಿನ ದರ್ಶನ ಕೊಡುವುದಿಲ್ಲ, ಬಂದರೆ ಬಂತು, ಇಲ್ಲದಿದ್ದರೆ ಇಲ್ಲ ಎಂಬ ಸ್ಥಿತಿ. ಉಳಿದ ಮಾರ್ಗ ಎಂದರೆ ಹಣ ನೀಡಿ ಖಾಸಗಿ ಟ್ಯಾಂಕರ್‌ ಮೂಲಕ ನೀರು ಪಡೆದುಕೊಳ್ಳುವುದೊಂದೇ .

Advertisement

ಬಿಂದಿಗೆ ನೀರು ಐದು ರೂ.: ಕೃಷ್ಣರಾಜ ಪುರದ ಚನ್ನಸಂದ್ರ, ಕಲ್ಕೆರೆ, ಬಸವನ ಪುರ ಭಾಗಗಳಲ್ಲಿ ಸರ್ಕಾರಿ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹೀಗಾಗಿ, ಖಾಸಗಿ ಟ್ಯಾಂಕರ್‌ ಮೂಲಕ ಹಣ ಕೊಟ್ಟು ನೀರು ಖರೀದಿಸುವುದು ಅನಿ ವಾರ್ಯ. ಈ ಮೊದಲು ಬಿಂದಿಗೆಗೆ 1ರೂ., 2ರೂ. ಪಡೆಯುತ್ತಿದ್ದ ಖಾಸಗಿ ಕೊಳವೆ ಬಾವಿ ಅಥವಾ ಟ್ಯಾಂಕರ್‌ ಮಾಲೀಕರು ಇದೀಗ ಬೇಸಿಗೆಯಲ್ಲಿ ಡಿಮ್ಯಾಂಡ್‌ ಸೃಷ್ಟಿಯಾದ ಕಾರಣ ಬಿಂದಿಗೆ ನೀರಿಗೆ 5 ರೂ.ಗೆ  ನಿಗದಿ ಮಾಡಿದ್ದಾರೆ.

ಬೋರ್‌ವೆಲ್‌ಗ‌ಳಲ್ಲಿ ನೀರು ಸಿಕ್ಕರೆ ಸಮಾಧಾನ: ಕೆಲವೆಡೆ ಶಾಸಕರ ಅನು ದಾನ ಮತ್ತು ಬಿಬಿಎಂಪಿ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗ ಳನ್ನು ತೆರೆಯಲಾಗಿದೆ. ಆದರೆ, ಅವು ದೂರದಲ್ಲಿರುವುದರಿಂದ ಸಾರ್ವಜನಿ ಕರು ವಾಹನಗಳನ್ನು ಬಳಸಿ ಕ್ಯಾನ್‌ಗಳಲ್ಲಿ ನೀರು ತುಂಬಿಸಿಕೊಂಡು ಬರಬೇಕಿದೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಕೃಷ್ಣರಾಜಪುರದ ಹಲವು ಭಾಗಗಳಲ್ಲಿ ಬಿಬಿಎಂಪಿಯಿಂದ ಕಳೆದೆರಡು ದಿನಗಳಿಂದ ಕೊಳವೆಬಾವಿ ಕೊರೆಸಲಾಗುತ್ತಿದೆ. ಕೊಳವೆಬಾವಿಗಳಲ್ಲಿ ನೀರು ದೊರಕಿದರೆ ಸ್ವಲ್ಪ ಮಟ್ಟಿಗೆ ಜನ ನಿಟ್ಟುಸಿರು ಬಿಡುವಂತಾಗಬಹುದು.

ಟ್ಯಾಂಕರ್‌ ನೀರು ಎಷ್ಟು ಸೇಫ್?
ನಗರದಲ್ಲಿ ನೀರಿನ ಸಮಸ್ಯೆ ವಿಪರೀತವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಟ್ಯಾಂಕರ್‌ ನೀರಿನ ಮೊರೆ ಹೋಗುವುದು ಅನಿವಾರ್ಯ. ಆದರೆ, ಖಾಸಗಿ ಟ್ಯಾಂಕರ್‌ಗಳ ನೀರು ಕುಡಿಯಲು ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಎದುರಾಗಿದೆ. ಕಾರಣ ಬಹುತೇಕರು ಟ್ಯಾಂಕರ್‌ಗಳನ್ನು ಕಾಲಕಾಲಕ್ಕೆ ಸ್ವತ್ಛಗೊಳಿಸುವುದಿಲ್ಲ. ಹಳೆ ಟ್ಯಾಂಕರ್‌ಗಳ ಒಳಭಾಗ ತುಕ್ಕು ಹಿಡಿದಿದ್ದರೂ ಅವುಗಳಲ್ಲಿಯೇ ನೀರು ಪೂರೈಸುತ್ತಾರೆ. ಅಷ್ಟೇ ಅಲ್ಲದೇ ನೀರನ್ನು ಎಲ್ಲಿಂದ ತರಲಾಗುತ್ತದೆ ಎಂಬುದನ್ನು ಟ್ಯಾಂಕರ್‌ನವರು ತಿಳಿಸುವುದಿಲ್ಲ. ಹೀಗಾಗಿ ಟ್ಯಾಂಕರ್‌ ನೀರನ್ನು ಖರೀದಿಸಿ, ಕುಡಿಯುವ ಮುನ್ನ ಎರೆಡೆರಡು ಬಾರಿ ಯೋಚಿಸುವುವ ಅಗತ್ಯವಿದೆ ಎನ್ನುತ್ತಾರೆ ಕೆಲ ನಾಗರಿಕರು.

ವಾರಕ್ಕೆ 2 ಬಾರಿ ಇಲ್ಲವೆ ಕನಿಷ್ಠ ಒಂದು ಬಾರಿ ಯಾದರೂ ನೀರು ಪೂರೈಸ ಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ, ಇತ್ತೀಚಿನ ದಿನಗ ಳಲ್ಲಿ ವಾರಕ್ಕೆ ಒಂದು ಬಾರಿ ನೀರು ಬಂದರೂ ಪುಣ್ಯ ಎನ್ನುವಂತಾಗಿದೆ. ಕೆಲವೊಮ್ಮೆ ತಿಂಗಳಾದರೂ ನೀರಿನ ದರ್ಶನವಾಗುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಟ್ಯಾಂಕರ್‌ಗಳ ಮೊರೆ ಹೋಗಬೇಕಾಗಿದೆ.
-ಅನಸೂಯ, ಕಲ್ಕೆರೆ 

ಸರ್ಕಾರದಿಂದ ಹಳ್ಳಿಗಳಲ್ಲಿನ ಟ್ಯಾಂಕ್‌ಗಳಿಗೆ ನೀರು ಹರಿಸುತ್ತಿದ್ದ ರಿಂದ ತೊಂದರೆ ಯಾಗುತ್ತಿರಲಿಲ್ಲ. ಇತ್ತೀಚಿಗೆ ಕೊಳವೆಬಾವಿಗಳು ಬತ್ತಿವೆ ಎಂಬ ಕಾರಣ ನೀಡಿ ಹತ್ತು ಹದಿನೈದು ದಿನಗಳಿಗೊಮ್ಮೆ ನೀರು ಪೂರೈಸುತ್ತಿದ್ದಾರೆ. ಹೀಗಾಗಿ ಜನರು ಕುಡಿಯುವ ನೀರಿಗಾಗಿ ಕಿಲೋ ಮೀಟರ್‌ಗಟ್ಟಲೇ ಅಲೆಯಬೇಕಾಗಿದೆ.
-ಅನಿಲ್‌ ಕುಮಾರ್‌, ಚನ್ನಸಂದ್ರ 

ಕಳೆದ ಹದಿನೈದು ದಿನಗ ಳಿಂದ ಟ್ಯಾಂಕ್‌ಗಳಿಗೆ ನೀರು ಬಂದಿಲ್ಲ. ಹೀಗಾಗಿ ಖಾಸಗಿ ಕೊಳವೆಬಾವಿಗಳನ್ನು ಹೊಂದಿರುವವರಿಗೆ ಹಣ ನೀಡಿ ನೀರು ಖರೀದಿಸಲಾಗುತ್ತಿದೆ. ಸರ್ಕಾರದಿಂದ ಕೊರೆಯುತ್ತಿ ರುವ ಕೊಳವೆಬಾವಿಗಳಲ್ಲಿ ನೀರು ಸಿಕ್ಕರೆ ಸಾಕು ಎನ್ನುವಂತಾಗಿದೆ.
-ನಾರಾಯಣ, ಜಯಂತಿ ನಗರ

ನೀರಿನ ಟ್ಯಾಂಕ್‌ಗಳಿಗೆ ವಾರಕ್ಕೆ ಇಲ್ಲವೆ, ಹದಿನೈದು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ನೀರು ಬರುವ ದಿನ ಕೆಲಸ ಕಾರ್ಯಗಳನ್ನು ಬಿಟ್ಟು ಹಿಡಿದಿಟ್ಟುಕೊಳ್ಳಬೇಕು. ತಿಂಗಳಿಗೆ ಸಾವಿರಾರು ರೂಪಾಯಿ ಕೊಟ್ಟು ಬಡವರು ಟ್ಯಾಂಕರ್‌ ನೀರು ಖರೀದಿಸಲು ಸಾಧ್ಯವೇ?
-ಮಂಜಪ್ಪ, ಆನಂದಪುರ

* ವೆಂ.ಸುನಿಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next