Advertisement

ಮಾರುಕಟ್ಟೆಗೆ ಬಂದಿದೆ ನೀರಿನಲ್ಲಿ ಕರಗುವ ಪ್ಲಾಸ್ಟಿಕ್‌ ಬ್ಯಾಗ್‌ಗಳು!

04:50 PM Mar 06, 2023 | Team Udayavani |

ಹುಬ್ಬಳ್ಳಿ: ಏಕಬಳಕೆ ಪ್ಲಾಸ್ಟಿಕ್‌ ರಾಕ್ಷಸನ ಹಾವಳಿ-ಅಬ್ಬರದ ನಡುವೆಯೇ ನೀರಿನಲ್ಲಿ ಕರಗುವ, ಪರಿಸರಸ್ನೇಹಿ, ಪ್ಲಾಸ್ಟಿಕ್‌ಗೆ ಪರ್ಯಾಯವಾಗುವ ಉತ್ಪನ್ನವನ್ನು ಮುಂಬೈ ಮೂಲದ ಕಂಪೆನಿಯೊಂದು ಬಿಡುಗಡೆ ಮಾಡಿದೆ. ಪರಿಸರ, ಜನ-ಜಾನುವಾರುಗಳ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆ ಎನ್ನಬಹುದಾಗಿದೆ.

Advertisement

ಮುಂಬೈನ ವ್ಯಾಲ್ಯುವೇಬಲ್‌ ಎನರ್ಜಿ ಕಂಪೆನಿ ಏಕಬಳಕೆ ಪ್ಲಾಸ್ಟಿಕ್‌ಗೆ ಪರ್ಯಾಯ ಉತ್ಪನ್ನ ತಯಾರಿಸಿದ್ದು, ಇದು ನಾನ್‌ ಪ್ಲಾಸ್ಟಿಕ್‌ ಆಗಿದ್ದು, ಪ್ಲಾಸ್ಟಿಕ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪರಿಸರಸ್ನೇಹಿ ಎರಡು ಉತ್ಪನ್ನಗಳನ್ನು ಕಂಪೆನಿ ಹೊರತಂದಿದೆ. ನೂತನ ಉತ್ಪನ್ನ ದುಬಾರಿ ಎನ್ನಿಸಿದರೂ ಪರಿಸರ, ಆರೋಗ್ಯ ದೃಷ್ಟಿಯಿಂದ ಮಹತ್ವ ಪಡೆದಿದೆ. ಉತ್ಪನ್ನಗಳ ಮಹತ್ವ, ಸರಕಾರದಿಂದ ನಿರೀಕ್ಷೆ ಕುರಿತಾಗಿ ವ್ಯಾಲ್ಯುವೇಬಲ್‌ ಎನರ್ಜಿ ಕಂಪೆನಿಯ ಸಂಜಯ ಪೀರ್‌ ಅವರು “ಉದಯವಾಣಿ’ಯೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡರು.

ಹತ್ತೇ ಸೆಕೆಂಡ್‌ನ‌ಲ್ಲಿ ಕರಗಿಹೋಗುತ್ತೆ!
ಏಕಬಳಕೆ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಏಕಬಳಕೆ ನಾನ್‌ ಪ್ಲಾಸ್ಟಿಕ್‌ ಬ್ಯಾಗ್‌ ಹಾಗೂ ಬಹುಪಯೋಗಿ ಫ್ಯಾಬ್ರಿಕ್‌ ಬ್ಯಾಗ್‌ಗಳನ್ನು ಕಂಪನಿ ಉತ್ಪಾದನೆ ಮಾಡುತ್ತಿದೆ. ಇವು ಪಾಸ್ಟಿಕ್‌ ಪರಿಸರಸ್ನೇಹಿ, ಶೇ.100 ನಾನ್‌ ಪ್ಲಾಸ್ಟಿಕ್‌ ಉತ್ಪನ್ನವಾಗಿದೆ. ಪಾಲಿಮಾರ್‌, ಅಲ್ಕೋಹಾಲ್‌ ಆಧಾರಿತವಾಗಿದ್ದು, ಶೇ.100 ವಿಷರಹಿತವಾಗಿದೆ. ಯುರೋಪಿಯನ್‌ ಸ್ಟ್ಯಾಂಡರ್ಡ್‌ ಮಟ್ಟದ ಉತ್ಪನ್ನವಾಗಿದ್ದು, ಯುಎಸ್‌-21 ಮಾನ್ಯತೆ ಪಡೆದುಕೊಂಡಿದೆ.

ಏಕಬಳಕೆ ಬ್ಯಾಗ್‌
ಒಣ ಆಹಾರ ಪದಾರ್ಥಗಳನ್ನು, ಇತರೆ ಒಣ ಪದಾರ್ಥಗಳನ್ನು ಪ್ಯಾಕ್‌ ಮಾಡಿ ಇರಿಸಬಹುದಾಗಿದೆ. ಕೈಯಿಂದ ಜಗ್ಗಿದರೂ ಇದು ಹರಿಯುವುದಿಲ್ಲ. 5 ಕೆಜಿವರೆಗೂ ಭಾರ ತಡೆಯಬಲ್ಲದು. ಬಳಕೆ ನಂತರ ತಣ್ಣಗಿನ ನೀರಿನಲ್ಲಿ ಹಾಕಿದರೆ 10 ಸೆಕೆಂಡ್‌ಗಳಲ್ಲಿ ಕರಗಿಬಿಡುತ್ತದೆ. ನೀರನ್ನು ಗಿಡಗಳಿಗೆ ಹಾಕಬಹುದು, ಶುದ್ಧೀಕರಿಸಿ ಕುಡಿಯಲೂಬಹುದು. ಆದರೆ, ಹಸಿ ಉತ್ಪನ್ನಗಳಿಗೆ ಬ್ಯಾಗ್‌ ಬಳಕೆ ಮಾಡುವಂತಿಲ್ಲ.

ಬಹುಬಳಕೆ ಬ್ಯಾಗ್‌
ಫ್ಯಾಬ್ರಿಕ್‌ನ ಬ್ಯಾಗ್‌ 10 ಕೆಜಿ ತೂಕ ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೆಲವು ಬಾರಿ ಬಳಕೆ ಮಾಡಿದ ನಂತರ ಸುಮಾರು 55ರಿಂದ 80 ಡಿಗ್ರಿ ಉಷ್ಣಾಂಶದ ಬಿಸಿನೀರಿಗೆ ಹಾಕಿದರೆ ಸಾಕು ಕೇವಲ 3 ಸೆಕೆಂಡ್‌ಗಳಲ್ಲಿ ಕರಗಿಬಿಡುತ್ತದೆ. ಆ ನೀರನ್ನು ಸಹ ಗಿಡಗಳಿಗೆ ಬಳಕೆ ಮಾಡಬಹುದಾಗಿದೆ. ತಣ್ಣನೆ ನೀರು ಬಿದ್ದರೂ ಇದು ಏನು ಆಗದು. ಆದರೆ, ಬಿಸಿನೀರಿನಲ್ಲಿ ಮಾತ್ರ ಇದು ಕರಗಲಿದೆ.

Advertisement

ಸಾಮಾನ್ಯ ಯಂತ್ರಗಳಲ್ಲೇ ಇವುಗಳ ಉತ್ಪಾದನೆ ಸಾಧ್ಯ
ಕಚ್ಚಾ ಸಾಮಗ್ರಿಗಳನ್ನು ವಿದೇಶಗಳಿಂದ ಹಾಗೂ ದೇಶಿಯವಾಗಿ ಪಡೆಯಲಾಗುತ್ತಿದೆ. ಮುಂಬೈನಲ್ಲಿ ಬ್ಯಾಗ್‌ ಉತ್ಪಾದನೆ ಮಾಡಲಾಗುತ್ತದೆ. ಸಾಮಾನ್ಯ ಪ್ಲಾಸ್ಟಿಕ್‌ ಉತ್ಪಾದನೆಯ ಯಂತ್ರಗಳಲ್ಲೇ ಈ ಬ್ಯಾಗ್‌ಗಳನ್ನು ಉತ್ಪಾದನೆ ಮಾಡಬಹುದಾಗಿದೆ. ಸರಕಾರ ಕಚ್ಚಾ ಸಾಮಗ್ರಿಗಳಿಗೆ ರಿಯಾಯ್ತಿ ಘೋಷಣೆ ಮಾಡಿ ಪ್ರೋತ್ಸಾಹಕ್ಕೆ ಮುಂದಾದರೆ ಹೆಚ್ಚಿನ ಪ್ರಮಾಣದ ಉತ್ಪನ್ನವಾದರೆ ವೆಚ್ಚ ಕುಗ್ಗಿ ಬ್ಯಾಗ್‌ಗಳ ಬೆಲೆಯೂ ಇಳಿಕೆಯಾಗಲಿದೆ.

*1945ರಲ್ಲಿ ದೇಶದಲ್ಲಿ ಪ್ಲಾಸ್ಟಿಕ್‌ ಉದ್ಯಮ ಆರಂಭ
*0.9 ಮಿಲಿಯನ್‌ ಟನ್‌ನಿಂದ ಆರಂಭವಾಗಿದ್ದ ಉದ್ಯಮ ಇಂದು ರಾಕ್ಷಸರೂಪ
*ಒಟ್ಟು ಪ್ಲಾಸ್ಟಿಕ್‌ನಲ್ಲಿ ಶೇ.24 ಪ್ಯಾಕೇಜಿಂಗ್‌, ಶೇ.23 ಕೃಷಿ, ಶೇ.10 ಗೃಹಬಳಕೆಗೆ ವಿನಿಯೋಗ
*ತಲಾವಾರು 700ಗ್ರಾಂನಿಂದ 2,500 ಗ್ರಾಂವರೆಗೆ ಬಳಕೆ
*ಬಳಕೆಯಾದ ಏಕಬಳಕೆ ಪ್ಲಾಸ್ಟಿಕ್‌ನಲ್ಲಿ ಶೇ.60 ಮಾತ್ರ ಸಂಗ್ರಹ
*ದೇಶದಲ್ಲಿ 30 ಸಾವಿರಕ್ಕೂ ಅಧಿಕ ಪ್ಲಾಸ್ಟಿಕ್‌ ಉತ್ಪನ್ನ ಉತ್ಪಾದನಾ ಘಟಕ
*ವಾರ್ಷಿಕ 3.4 ಮಿಲಿಯನ್‌ ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದನೆ
*ಗೋವಾ, ದೆಹಲಿ, ಕೇರಳಗಳಲ್ಲಿ ತಲಾವಾರು ಅತ್ಯಧಿಕ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದನೆ
*ನಾಗಾಲ್ಯಾಂಡ್‌, ಸಿಕ್ಕಿಂ, ತ್ರಿಪುರಾಗಳಲ್ಲಿ ಕಡಿಮೆ ಪ್ಲಾಸ್ಟಿಕ್‌ ತ್ಯಾಜ್ಯ
*2050ರ ವೇಳೆಗೆ 12,000 ಮೆಟ್ರಿಕ್‌ ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ

ನಮ್ಮದು ಜಾಗತಿಕ ಮಟ್ಟದ ಉತ್ಪನ್ನವಾಗಿದ್ದು, ದೇಶಿಯ ಮಾರುಕಟ್ಟೆ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಮಾರಾಟಕ್ಕೆ ಮುಂದಾಗಿದ್ದೇವೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಬಿಡುಗಡೆ ಮಾಡಿದ್ದು, ಆದಷ್ಟು ಶೀಘ್ರ ವಿವಿಧ ಕಡೆಯ ಮಾರುಕಟ್ಟೆಗೆ ಇದನ್ನು ನೀಡಲಾಗುತ್ತದೆ.
*ಸಂಜಯ ಪೀರ್‌,
ವ್ಯಾಲ್ಯುವೇಬಲ್‌ ಎನರ್ಜಿ ಕಂಪೆನಿ

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next