ಗೋಕಾಕ: ತಾಲೂಕಿನಲ್ಲಿ ಸತತ ಸುರಿಯುತ್ತಿರುವ ಮಳೆಯಿಂದ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಉಂಟಾಗಿದೆ.
ತಾಲೂಕಿನ ಕುಂದರಗಿ ಗ್ರಾಮದ ಅಡವಿ ಸಿದ್ಧೇಶ್ವರ ಮಠಕ್ಕೆ ಬಳ್ಳಾರಿ ಹಳ್ಳದ ನೀರು ಹೊಕ್ಕಿದ್ದರಿಂದ ಮಠದಲ್ಲಿ ಸಿಲುಕಿಕೊಂಡಿದ್ದ 19 ಜನರನ್ನು ಪೊಲೀಸ್ ಇಲಾಖೆ, ತಾಲೂಕಾಡಳಿತ, ಗೋಕಾಕದ ಅಯ್ಯುಬ ಖಾನ ತಂಡ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆ ತಂದಿದ್ದಾರೆ.
ತಡರಾತ್ರಿಯವರೆಗೆ ಹರಿವು ಕಡಿಮೆ ಆಗದೇ ಹೆಚ್ಚಾಗುತ್ತಿರುವುದನ್ನು ಮನಗಂಡ ಮಠದಲ್ಲಿ ವಾಸವಿದ್ದ ಸ್ವಾಮೀಜಿಯೊಬ್ಬರು ರವಿವಾರ ಬೆಳಗ್ಗೆ ಮೊಬೈಲ್ ಮೂಲಕ ಮಠದ ಸ್ವಾಮೀಜಿ ಅವರಿಗೆ ತಿಳಿಸಿದಾಗ ಅವರು ಹತ್ತಿರದ ಅಂಕಲಗಿ ಠಾಣೆಗೆ ವಿಷಯ ತಿಳಿಸಿದ್ದಾರೆ.
ನಂತರ ಕಾರ್ಯ ಪ್ರವೃತ್ತರಾದ ಪೊಲೀಸ್ ಇಲಾಖೆ ಆಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ಆಗಮಿಸಿ ಜಿಲ್ಲಾಡಳಿತಕ್ಕೆ ವಿಷಯ ತಿಳಿಸಿದ್ದಾರೆ. ನಂತರ ಗೋಕಾಕ ನಗರದ ಅಯ್ಯುಬ ಖಾನ ಅವರಿಗೆ ಮೊಬೈಲ್ ಮೂಲಕ ಕರೆ ಮಾಡಿ ಅವರನ್ನು ಕರೆಯಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ 14 ಜನರ ತಂಡ 4 ಬೋಟ್‌ಗಳೊಂದಿಗೆ 3 ಗಂಟೆಗಳ ಕಾಲ ಯಶಸ್ವಿ ಕಾರ್ಯಾಚರಣೆ ನಡೆಸಿ ಮಠದಲ್ಲಿದ್ದ 12 ಮಕ್ಕಳು, ನಾಲ್ವರು ಮಹಿಳೆಯರು ಸೇರಿದಂತೆ 19 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮಠದಲ್ಲಿದ್ದ ಸಾಕು ಪ್ರಾಣಿಗಳ ಹಗ್ಗವನ್ನು ಬಿಚ್ಚಿ ಬಿಡಲಾಗಿದೆ.
ಬೈಲಹೊಂಗಲ ಉಪವಿಭಾಗ ಅಧಿಕಾರಿ ಶಿವಾನಂದ ಭಜಂತ್ರಿ, ಗೋಕಾಕ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೊಳ, ಡಿವೈಎಸ್‌ಪಿ ಡಿ.ಟಿ. ಪ್ರಭು, ಸಿಪಿಐ ಶ್ರೀಧರ ಸಾತಾರೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.
ಸಂಚಾರ ಸ್ಥಗಿತ: ಸದ್ಯ ಅಂಕಲಗಿ ಗ್ರಾಮದ ಬಳಿ ಹೆಸ್ಕಾಂ ಇಲಾಖೆಯ ಹತ್ತಿರವಿರುವ ಇನ್ನೊಂದು ಸೇತುವೆ ಮೇಲೆ ನೀರು ಹೆಚ್ಚಾಗಿದ್ದರಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ.