Advertisement
20 ವರ್ಷಗಳ ಹಿಂದೆ ಆರಂಭಗೊಂಡ ಜಲ ಕ್ರಾಂತಿಯ ಪರಿಣಾಮ ಈ ಗ್ರಾಮದಲ್ಲಿ ಕೃಷಿ ಹಾಗೂ ಕುಡಿಯುವನೀರಿಗೆ ಸಮಸ್ಯೆ ಬಂದಿಲ್ಲ. ಅಲ್ಲಲ್ಲಿ ತೋಡುಗಳಿಗೆ ಮರಳು ಮತ್ತು ಮಣ್ಣಿನ ಕಟ್ಟ ಕಟ್ಟಿ ನೀರು ಸಂಗ್ರಹಿಸುವ ಕೆಲಸ ಈ
ಭಾಗದಲ್ಲಿ ನಡೆಯುತ್ತಿದೆ. ಆದರಲ್ಲೂ ಕಲ್ಲೇರಿಕಟ್ಟದ ಈ ಕಿಂಡಿ ಅಣೆಕಟ್ಟಿಂದ ಕೃಷಿಕರಿಗೆ ಪ್ರಯೋಜನವಾಗುತ್ತಿದೆ.
ಕೆಲಸ – ಕಾರ್ಯಗಳಲ್ಲಿ ಕಲ್ಲೇರಿಕಟ್ಟ, ಕಲ್ಲೇಮಠ ಪರಿಸರದ ನಾಗರಿಕರು ತೊಡಗಿಸಿಕೊಂಡಿದ್ದಾರೆ. ಇದರಿಂದ
ಇವರಿಗೆ ಬೇಸಗೆ ಕಾಲದಲ್ಲಿ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ಇದು ಇಷ್ಟಕ್ಕೇ ಸೀಮಿತವಾಗಿಲ್ಲ. ಕಲ್ಲೇರಿಕಟ್ಟ ಕಿಂಡಿ ಅಣೆಕಟ್ಟ ನಿರ್ಮಿಸಿದ ಬಳಿಕ ಈ ಭಾಗ ಮಾತ್ರವಲ್ಲ ಸುತ್ತಮುತ್ತಲಿನ ಹಲವು ಪ್ರದೇಶಗಳ ನಿವಾಸಿಗಳ ಕೆರೆ, ಬಾವಿಗಳಲ್ಲಿ ಅಂತರ್ಜಲ ಮಟ್ಟ ಏರಿಕೆ ಕಾಣುತ್ತಿದೆ. ಇದು ಬೇಸಗೆಯಲ್ಲಿ ಕುಡಿಯಲು ಮತ್ತು ಕೃಷಿಗೆ ಬೇಕಾಗುವ ನೀರನ್ನು ಪೂರೈಸುತ್ತದೆ.
Related Articles
ಡಿಸೆಂಬರ್ ಮತ್ತು ಜನವರಿ ಆರಂಭದ ದಿನಗಳಲ್ಲಿ ನೀರಿನ ಹರಿವು ಗಮನಿಸಿ ನವೆಂಬರ್‌ನಲ್ಲಿ ಇಲ್ಲಿಯ ಅಣೆಕಟ್ಟೆಗೆ
ಹಲಗೆ ಜೋಡಿಸುವ ಕೆಲಸ ನಡೆದಿದೆ. ಸ್ಥಳಿಯ ಸುಮಾರು 25 ಫಲಾನುಭವಿಗಳು ಸೇರಿಕೊಂಡು ಈ ಕೆಲಸ ನಡೆಸಿದ್ದಾರೆ. ಸಣ್ಣ ನೀರಾವರಿ ಇಲಾಖೆ ಸಹಭಾಗಿತ್ವದಲ್ಲಿ ಹಲಗೆ ಜೋಡಿಸುವ ಕಾರ್ಯ ನಡೆಯಬೇಕಿದೆ. ಆದರೆ ಇಲ್ಲಿಯವರು ಅದನ್ನು ನಂಬಿ ಕುಳಿತುಕೊಳ್ಳುವುದಿಲ್ಲ, ತಾಪತ್ರಯದ ಮುನ್ಸೂಚನೆ ದೊರೆತ ತತ್‌ಕ್ಷಣ ಎಲ್ಲರೂ ಸೇರಿ ಹಲಗೆ ಜೋಡಿಸುವ ಕಾರ್ಯ ಶುರುವಿಟ್ಟುಕೊಳ್ಳುತ್ತಾರೆ.
Advertisement
ಬೇಸಗೆಯ ತರುವಾಯ ಮಳೆಯ ಮುನ್ಸೂಚನೆ ದೊರೆತ ಸಂದರ್ಭದಲ್ಲಿ ಹಲಗೆ ಜೋಡಿಸಿದ ಫಲಾನುಭವಿಗಳೇ ಹಲಗೆ ತೆಗೆಯುವ ಕೆಲಸವನ್ನೂ ಮಾಡುತ್ತಾರೆ. ಕಿಂಡಿ ಅಣೆಕಟ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ನೀರನ್ನು ಹಿಡಿದಿಟ್ಟು ಬಳಸುತ್ತ ಬಂದಿರುವ ಇಲ್ಲಿಯವರ ಕಾರ್ಯ ಶ್ಲಾಘನೀಯ ಮತ್ತು ಮಾದರಿ ಆಗಿದೆ.
100ಕ್ಕೂ ಹೆಚ್ಚು ಮನೆಗಳಿಗೆ ಪ್ರಯೋಜನಫಲಾನುಭವಿಗಳೇ ಇಲ್ಲಿ ಶ್ರಮಸೇವೆ ಮೂಲಕ ಕಿಂಡಿ ಅಣೆಕಟ್ಟು ನಿರ್ಮಿಸುತ್ತಿರುವುದರಂದ 100ಕ್ಕೂ ಅಧಿಕ ಮನೆಗಳಿಗೆ
ಪ್ರಯೋಜನವಾಗಿದೆ. ಕಳೆದ ಮಾರ್ಚ್ ತನಕವೂ ಇಲ್ಲಿಯವರಿಗೆ ಇದರ ಪ್ರಯೋಜನ ದೊರಕಿತ್ತು. ನೀರಿನ ಕೊರತೆ ಎಂಬುದೇ ಇಲ್ಲಿ ತನಕ ಇಲ್ಲಿಯವರಿಗೆ ಬಂದಿಲ್ಲ. ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವ ಈ ಕಿಂಡಿ ಅಣೆಕಟ್ಟಿನಿಂದ ಮಿತ್ತಮಜಲು, ಬಂಗ್ಲೆಗುಡ್ಡೆ, ಗುಂಡಿಹಿತ್ಲು ಭಾಗದವರಿಗೆ
ಪ್ರಯೋಜನ ಆಗಿದೆ. ನೀರು ಸಂಗ್ರಹ ನಡೆಸಿದ ಬಳಿಕ ನೀರು ತುಂಬಿರುವ ಜಾಗದಿಂದ ಮೇಲ್ಭಾಗ ಮತ್ತು ಕೆಳಭಾಗದ
ಕೆಲ ಪ್ರದೇಶಗಳಿಗೆ ತೋಡಿನಂತೆ ಕಿರು ನಾಲೆ ನಿರ್ಮಿಸಲಾಗುತ್ತಿದೆ. ಇದರಲ್ಲಿ ನೀರು ಹರಿಯಬಿಟ್ಟು ಪರಿಸರದ ಕೃಷಿಕರಿಗೆ ಕೃಷಿ ಚಟುವಟಿಕೆಗೆ ಧಾರಾಳ ನೀರು ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ನೀರು ಸಂಗ್ರಹದಿಂದ ಅಂತರ್ಜಲ ಮಟ್ಟ ಏರಿಕೆ ಜತೆಗೆ ಕೃಷಿ ಭೂಮಿಗೆ ನೀರು ಹಾಯಿಸಲು ಸಾಕಷ್ಟು ನೀರು ಸಿಗುತ್ತಿದೆ.
ನದಿಯ ಎರಡೂ ಬದಿಯಲ್ಲಿ ವಾಸವಿರುವ ಮನೆಗಳಿಗೆ ಸಂಪರ್ಕ ರಸ್ತೆಯಾಗಿ ಕೂಡ ನೆರವಾಗುತ್ತಿದೆ. ಹೀಗಾಗಿ ಅಣೆಕಟ್ಟಿನಿಂದ ಹಲವು ರೀತಿಯ ಲಾಭವಿದೆ ಎನ್ನುತ್ತಾರೆ ಇಲ್ಲಿಯ ಕೃಷಿಕರು ಪ್ರೋತ್ಸಾಹ ನೀಡುತ್ತೇವೆ
ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಸ್ಥಳೀಯಾಡಳಿತ ಪ್ರೋತ್ಸಾಹ ನೀಡುತ್ತದೆ. ಬೇಡಿಕೆಗಳ ಅನುಸಾರ ಲಭ್ಯತೆ ನೋಡಿಕೊಂಡು ಸ್ಥಳಿಯಾಡಳಿತ ಇತರೆ ಇಲಾಖೆಗಳನ್ನು ಜೋಡಿಸಿಕೊಂಡು ಅದಕ್ಕೆ ಬೇಕಿರುವ ವ್ಯವಸ್ಥೆಗಳನ್ನು
ಕಲ್ಪಿಸಲು ಗ್ರಾ.ಪಂ. ಬದ್ಧವಾಗಿದೆ.
– ವಿದ್ಯಾಧರ, ಪಿಡಿಒ,
ಹರಿಹರ ಪಳ್ಳತ್ತಡ್ಕ ಗ್ರಾ.ಪಂ. ಬರವೇ ಬಂದಿಲ್ಲ
ಬೇಸಿಗೆ ಇರಲಿ ಕಡು ಬೇಸಗೆ ಇರಲಿ ನಮಗೆ ನೀರಿನ ಕೊರತೆ ಎದುರಾಗಿಲ್ಲ. ಅಣೆಕಟ್ಟೆಯಿಂದ ಅಂತರ್ಜಲ ವೃದ್ಧಿಯಾಗಿದೆ. ಪರಿಸರದ ಬಾವಿ, ಕೆರೆಗಳಲ್ಲಿ ನೀರು ಉಳಿಯುತ್ತದೆ. ಹೀಗಾಗಿ ಕುಡಿಯಲು, ಕೃಷಿಗೆ ನೀರಿನ ಬರ ಇರುವುದಿಲ್ಲ.
– ಬಾಲಚಂದ್ರ ಎಚ್.
ಕಲೇರಿಕಟ್ಟ, ಫಲಾನುಭವಿ ಬಾಲಕೃಷ್ಣ ಭೀಮಗುಳಿ