Advertisement

ನೀರಿನ ಮರುಪೂರಣ, ಮಳೆಕೊಯ್ಲು ಅನುಸರಿಸಿ

09:14 PM Aug 02, 2019 | Team Udayavani |

ಅರಸೀಕೆರೆ: ನೀರಿನ ಮರುಪೂರಣ, ಮಳೆ ಕೊಯ್ಲು ಮುಂತಾದ ವಿಧಾನ ಅನುಸರಿಸಿ ನಾವುಗಳು ನೀರನ್ನು ಹಿತ ಮಿತವಾಗಿ ಬಳಸಬೇಕೆಂದು ಆಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರೋಹಿತ್‌ ಅಗಸರಹಳ್ಳಿ ಹೇಳಿದರು.

Advertisement

ನಗರದ ತಾಲೂಕು ಕಚೇರಿ ಹಿಂಭಾಗದ ಬಡಾವಣೆಯಲ್ಲಿ ಶ್ಯಾನೇಗೆರೆಯ ಚೇತನಾ ಶೇಖರ್‌ ಅವರ ನಿವಾಸದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ 5ನೇ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ “ನೀರು ನಾಗರಿಕತೆ ಮತ್ತು ಬದುಕು’ ವಿಷಯದ ಕುರಿತು ಉಪನ್ಯಾಸ ನೀಡಿದರು.

ನೀರನ್ನು ಮಿತವಾಗಿ ಬಳಸಿ: ವಿಶ್ವದ ಪ್ರತಿಯೊಂದು ನಾಗರಿಕತೆಗಳು ನದಿ ಬಯಲಿನಲ್ಲೇ ಹುಟ್ಟಿ ಬೆಳೆದಿವೆ. ಆದರೆ, ಅದೇ ನೀರಿನಿಂದ ನಾಗರಿಕತೆ ಇಂದು ಅವನತಿ ಅಂಚಿನದಲ್ಲಿದೆ. ನಾವುಗಳು ನೀರನ್ನು ಹಿತ ಮಿತವಾಗಿ ಬಳಸಬೇಕಾಗಿದೆ ಎಂದು ಹೇಳಿದರು.

ಮನೆಯಲ್ಲಿ ಪ್ರತಿನಿತ್ಯ ಬಳಸಿದ ನೀರನ್ನು ಪುನರ್ಬಳಕೆ ಮಾಡುವುದು, ವ್ಯರ್ಥವಾಗಿ ಹರಿಯಲು ಬಿಡದಿರುವುದು, ನೀರಿನ ಮರುಪೂರಣ, ಮಳೆ ಕೊಯ್ಲು ಮುಂತಾದ ವಿಧಾನ ಅನುಸರಿಸಿ ನೀರಿನ ಸದ್ಬಳಕೆ ಮಾಡಬೇಕಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಹೇಳಿದರು.

ಎಚ್ಚರವಹಿಸಿ: ಭವಿಷ್ಯದಲ್ಲಿ ನೀರು ಭೂಮಿ ಮೇಲೆ ದೊರೆಯುವಂತಾಗಲು ಗಿಡ ಮರಗಳನ್ನು ಬೆಳೆಸಬೇಕು. ಹಸಿರು ಮತ್ತು ನೀರು ಒಂದಕ್ಕೊಂದು ಪೂರಕ. ತ್ಯಾಜ್ಯಗಳಿಂದಾಗಿ ದೇಶದ ಎಷ್ಟೋ ನದಿಗಳು ಕಣ್ಮರೆಯಾಗಿವೆ. ಅಂತಹ ದುಸ್ಥಿತಿ ನಮ್ಮ ಸುತ್ತಮುತ್ತಲಿನ ನೀರಿನ ತಾಣಗಳಿಗೆ ಬರದಂತೆ ಎಚ್ಚರ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಕಸದ ಸೂಕ್ತ ವಿಲೇವಾರಿಯೂ ಅಗತ್ಯ ಎಂದರು.

Advertisement

ಎಚ್ಚರಿಕೆ ಗಂಟೆ: ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಜಯಲಕ್ಷ್ಮೀ ಕೊಳಗುಂದ ಮಾತನಾಡಿ, ಕಾವ್ಯದ ಹುಟ್ಟಿಗೆ ಕಾರಣ ತಿಳಿಸುತ್ತಾ ವ್ಯಕ್ತಿಯಲ್ಲಿ ಎರಡು ರೀತಿಯ ಪ್ರಕ್ರಿಯೆ ನಿರಂತರ ನಡೆಯುತ್ತಿರುತ್ತವೆ. ಅವುಗಳೆಂದರೆ ದೈಹಿಕ ಮತ್ತು ಮಾನಸಿಕ ಪ್ರಕ್ರಿಯೆ. ಮಾನಸಿಕ ಪ್ರಕ್ರಿಯೆಗಳಾದ ಯೋಚನೆ, ಚಿಂತನೆ, ಕಲ್ಪನೆ ಮುಂತಾದವುಗಳನ್ನು ಹೊರಹಾಕಲು ಭಿನ್ನ ಭಿನ್ನ ಮಾರ್ಗಗಳಿರುತ್ತವೆ.

ಅವುಗಳಲ್ಲಿ ಕಾವ್ಯ ಸೃಷ್ಟಿಯೂ ಒಂದು. ನಮ್ಮ ಭಾಷೆ ಎಷ್ಟು ಹಳೆಯದೆಂದು ಚಿಂತಿಸುವುದರ ಜೊತೆಗೆ ಎಷ್ಟು ಕಾಲ ಬಾಳಬಲ್ಲದು ಎಂಬುದನ್ನೂ ಚಿಂತಿಸಬೇಕಿದೆ. ಏಕೆಂದರೆ ಪ್ರಪಂಚದ ಅಳಿವಿನಂಚಿನಲ್ಲಿರುವ ಹಲವಾರು ಭಾಷೆಗಳಲ್ಲಿ ನಮ್ಮ ಕನ್ನಡವೂ ಒಂದೆಂದು ಸಮೀಕ್ಷೆಗಳು ವರದಿ ಮಾಡಿರುವುದು ನಮಗೆ ಎಚ್ಚರಿಕೆ ಗಂಟೆ ಎಂದು ತಿಳಿಸಿದರು.

ಕನ್ನಡ ಭಾಷೆ ಉಳಿಸಿ: ಕನ್ನಡ ನುಡಿಯ ಏಳ್ಗೆಗಾಗಿ ಸಾಹಿತ್ಯ ಪರಿಷತ್ತಿನಂತಹ ಹಲವಾರು ಕನ್ನಡ ಪರ ಸಂಘಟನೆಗಳು ಕೈ ಜೋಡಿಸಿದ್ದು ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯಕ ಚಟುವಟಿಕೆಗಳನ್ನು ಪೂರಕವಾಗಿ ಅಳವಡಿಸಿಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಕೆ.ವಿ.ಶಿವಮೂರ್ತಿ, ಕಾರ್ಯದರ್ಶಿ ಕೆ.ಎಸ್‌. ಮಂಜುನಾಥ್‌, ನಗರಸಭೆ ಸದಸ್ಯ ಬಿ.ಎನ್‌.ವಿದ್ಯಾಧರ್‌, ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರಸ್ವಾಮಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾವಗಲ್‌ ಪ್ರಸನ್ನ, ತಾಲೂಕು ನೌಕರರ ಸಂಘದ ಅಧ್ಯಕ್ಷ ಗುತ್ತಿನಕೆರೆ ಬಸವರಾಜು, ತಾಲೂಕು ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಪದ್ಮಾ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌.ಎಚ್‌.ಜಯರಾಂ , ಕಾರ್ಯದರ್ಶಿ ಸದಾನಂದಮೂರ್ತಿ, ಶ್ಯಾನೇಗೆರೆ ಶೇಖರ್‌, ಕರವೇ ಹೇಮಂತ್‌ಕುಮಾರ್‌, ಕಾತ್ಯಾಯಿನಿ ತೇವರಿಮಠ, ಪರಮೇಶ್‌, ಕುಮಾರ್‌, ಸ್ವಭಾವ ಕೊಳಗುಂದ, ಕೆ.ಸಿ.ನಟರಾಜು, ಸುಧಾ ಕಲ್ಯಾಣ್‌ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next