ಮೈಸೂರು: ಕಬಿನಿ, ಕಾವೇರಿ ಜಲಾಶಯಗಳ ಭರ್ತಿಗೂ ಮುನ್ನವೇ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಕೂಡಲೇ ರಾಜ್ಯದ ರೈತರಿಗೆ ನೀರು ಬಿಡುವಂತೆ ಆಗ್ರಹಸಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ, ಕಬಿನಿ ಹಿತ ರಕ್ಷಣಾ ಸಮಿತಿ ವತಿಯಿಂದ ಪ್ರತಿಭಟಿಸಲಾಯಿತು.
ನಗರದ ಕಾವೇರಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಮುಂಭಾಗ ಜಮಾವಣೆಗೊಂಡ ರೈತರು ನೀರು ಬಿಟ್ಟ ರಾಜ್ಯ ಸರ್ಕಾರ ಅಧಿಕಾರಿಗಳ ನಡೆ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಈ ಕೂಡಲೇ ರಾಜ್ಯದ ರೈತರ ಬೆಳೆಗಳಿಗೆ ನೀರು ಬಿಡುವಂತೆ ಆಗ್ರಹಿಸಿಯೂ ವಿವಿಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ್‌ಕುಮಾರ್, ರಾಜ್ಯದ ಜಲಾಶಯದ ನೀರನ್ನು ತಮಿಳುನಾಡಿಗೆ ಹರಿಸಬೇಕೆಂಬ ಆದೇಶ ಬಂದಿಲ್ಲ. ಜತೆಗೆ ತಮಿಳುನಾಡಿನ ಪರವಾಗಿ ರಾಜ್ಯದ ಅಧಿಕಾರಿಗಳು ನೀರುಗಂಟಿ ಕೆಲಸ ಮಾಡುವ ಅಗತ್ಯವಿಲ್ಲ. ಜಲಾಶಯದ ಒಳ ಹರಿವಿನ 75 ಭಾಗದಷ್ಟು ನೀರನ್ನು ನದಿ ಮೂಲಕ ಹರಿಸುವ ಆದೇಶವನ್ನು ಅಧಿಕಾರಿಗಳಿಗೆ ನೀಡಿದವರು ಯಾರು ಎಂದು ಪ್ರಶ್ನಿಸಿದರು.
ಚಳವಳಿ: ನಾಲೆಗಳಿಗೆ ನೀರು ಬಿಡದಿದ್ದರೆ ನಾಳೆಯಿಂದಲೇ ತಾಲೂಕು ಹೋಬಳಿ ಹಳ್ಳಿಹಳ್ಳಿಗಳಲ್ಲಿ ರಾಜ್ಯದಲ್ಲಿ ನೀರಿನ ಚಳವಳಿಗಳನ್ನು ನಡೆಸುವ ಮೂಲಕ ಅಧಿಕಾರಿಗಳ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಲಾಗುವುದು ಎಂದು ಹೇಳಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರ್ ಶಂಕರ್, ರಂಗಸಮುದ್ರ ಸುರೇಶ್, ಸಿದ್ದೇಶ್, ಮಾದಪ್ಪ, ಕೃಷ್ಣೇಗೌಡ, ಬಿ.ಪಿ.ಪರಶಿವಮೂರ್ತಿ, ಹೆಚ್.ರಂಗರಾಜು, ಬರಡನಪುರ ನಾಗರಾಜ್, ಜೆ.ಮಹೇಶ್, ಸಿ.ನಿಂಗಣ್ಣ, ವೆಂಕಟೇಶ್, ರಾಮಕೃಷ್ಣ, ಕುಮಾರ್, ಗುರುಸ್ವಾಮಿ, ವೆಂಕಟರಮಣ, ರಾಮೇಗೌಡ, ನಾಗಣ್ಣ, ಕೃಷ್ಣಪ್ಪ, ಕೃಷ್ಣಕುಮಾರ್, ಜಯಸ್ವಾಮಿ, ಭವಾನಿಶಂಕರ್, ಚೇತನ್, ಬಿ.ನಿಂಗರಾಜು, ಅರುಣ್, ಶಿವಣ್ಣ ಮುಂತಾದ ನೂರಾರು ಮಂದಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.