ಶ್ರೀರಂಗಪಟ್ಟಣ: ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದರೂ ರಾಜ್ಯ ಸರ್ಕಾರ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು ರೈತಸಂಘಟನೆ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೇರಿ ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ದಿಲ್ಲದೆ ರಜೆ ದಿನಗಳಲ್ಲಿ ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ನೀರಾವರಿ ಅಧಿಕಾರಿಗಳು ಮಾತ್ರ ಬೆಂಗಳೂರು ಸೇರಿ ಇತರ ಗ್ರಾಮಗಳಿಗೆ ಕಾವೇರಿ ನದಿಯಿಂದ ಸಂಪರ್ಕ ಕಲ್ಪಿಸಿದ್ದು ನದಿ ನೀರು ಕಡಿಮೆ ಇರುವ ಹಿನ್ನೆಲೆಯಲ್ಲಿ ಮೋಟಾರ್ ಅಳವಡಿಸಿರುವ ಹಳ್ಳಗಳಲ್ಲಿ ನೀರಿನ ಸಂಪರ್ಕ ಸಿಗದೆ ನದಿಯಿಂದ ನೀರನ್ನು ಎತ್ತಲಾಗುತ್ತಿಲ್ಲ. ಇದರಿಂದ ಹಲವು ಭಾಗಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ನೀರನ್ನು ನದಿ ಮೂಲಕ ಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಜಲಾಶಯದಲ್ಲಿ ಪ್ರಸ್ತುತ 89 ಅಡಿ ನೀರಿದ್ದು, ಕೇವಲ 15 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ 4 ಟಿಎಂಸಿ ಡೆಡ್‌ಸ್ಟೋರೆಜ್ ಇದ್ದು ಇದರಿಂದ 11 ಟಿಎಂಸಿ ನೀರು ಮಾತ್ರ ಉಳಿಯಲಿದೆ. ಇದುವರೆಗೂ ಬೆಂಗಳೂರು ಸೇರಿದಂತೆ ಇತರ ನಗರಗಳಿಗೆ 750 ಕ್ಯೂಸೆಕ್ ನೀರು ಹರಿಸಲಾಗುತ್ತಿತ್ತು. ಆದರೆ, ಏಕಾಏಕಿ 4 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ಗೆ ಏರಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.
ತಮಿಳುನಾಡಿಗೆ ನೀರು ಹರಿಸುತ್ತಿಲ್ಲ. ಬದಲಾಗಿ ಬೆಂಗಳೂರಿಗೆ ಕುಡಿಯುವ ನೀರಿಗೆ ತೊಂದರೆಯಾಗಿರುವುದರಿಂದ ಹರಿಸಲಾಗುತ್ತಿದೆ. ಮಧ್ಯಾಹ್ನದ ನಂತರ 4 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಬೆಂಗಳೂರಿಗೆ ನೀರು ಸರಬರಾಜು ಮಾಡುವ ಪಂಪ್‌ಹೌಸ್‌ನಲ್ಲಿ ಸಂಪೂರ್ಣವಾಗಿ ನೀರು ಖಾಲಿಯಾಗಿದೆ. ಆದ್ದರಿಂದ ಹೆಚ್ಚು ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
-ರಘುರಾಮ್, ಮುಖ್ಯ ಅಧೀಕ್ಷಕ ಇಂಜಿನಿಯರ್, ಕಾವೇರಿ ನೀರಾವರಿ ನಿಗಮ