Advertisement

ಮಂಗಳೂರು: ನೀರು ರೇಷನಿಂಗ್‌ ಪರಿಷ್ಕರಣೆ

09:59 AM May 30, 2019 | keerthan |

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ನೀರು ಪೂರೈಕೆಯಲ್ಲಿ ಇದುವರೆಗೆ ಇದ್ದ ರೇಷನಿಂಗ್‌ ನಿಯಮ ಪರಿಷ್ಕರಿಸಲಾಗಿದ್ದು, ನೀರು ಸ್ಥಗಿತದ ಅವಧಿಯನ್ನು 4ರಿಂದ 3 ದಿನಗಳಿಗೆ ಇಳಿಸಲಾಗಿದೆ ಹಾಗೂ ನೀರು ಬಿಡುವ ಅವಧಿಯನ್ನು 4 ದಿನಗಳಿಗೆ (96 ಗಂಟೆ) ಸೀಮಿತಗೊಳಿಸಲಾಗಿದೆ.

Advertisement

ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಯ ಆಗಬಾರದೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ತಿಳಿಸಿದ್ದಾರೆ.

ಪರಿಷ್ಕೃತ ನಿಯಮದಂತೆ ಮೇ 28ರಿಂದ 30ರ ತನಕ ನೀರು ಪೂರೈಕೆ ಇರುವುದಿಲ್ಲ ಹಾಗೂ ಮೇ 31ರ ಬೆಳಗ್ಗೆ 6ರಿಂದ ಜೂನ್‌ 4ರ ಬೆಳಗ್ಗಿನ 6ರ ತನಕ ನೀರು ಸರಬರಾಜು ಇರುತ್ತದೆ. ಆ ಬಳಿಕ 3 ದಿನ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ ಹಾಗೂ ಅನಂತರದ 4 ದಿನ ನೀರು ಪೂರೈಕೆ ಇರಲಿದೆ. ಅಷ್ಟರಲ್ಲಿ ಮಳೆ ಬಂದು ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.

ಹೂಳೆತ್ತುವ ಕಾಮಗಾರಿ ಆರಂಭ
ತುಂಬೆ ಡ್ಯಾಂ ವ್ಯಾಪ್ತಿಯಲ್ಲಿ ಹೂಳೆತ್ತುವ ಕಾಮಗಾರಿ ಆರಂಭವಾಗಿದೆ. ಹೂಳಿನಲ್ಲಿರುವ ಮರಳನ್ನು ಬೇರ್ಪಡಿಸಿ ಅದನ್ನು ಮಾರಾಟ ಮಾಡಲಾಗುವುದು ಎಂದರು.

ಮರಳು ವಿತರಣೆಗೆ ಆ್ಯಪ್‌ ಜಾರಿಗೊಳಿಸಿದ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ತನಕ ಆ್ಯಪ್‌ ಮೂಲಕ 410 ಅರ್ಜಿಗಳು ಬಂದಿದ್ದು, 257 ಅರ್ಜಿಗಳಿಗೆ ಮರಳು ಮಂಜೂರು ಮಾಡಲಾಗಿದೆ. ತುಂಬೆ ಡ್ಯಾಂನಿಂದ ಹೂಳೆತ್ತುವ ಮೂಲಕ ಲಭಿಸುವ ಮರಳನ್ನು ಮಳೆಗಾಲದಲ್ಲಿ ಮಾರಾಟ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹಳೆ ಬಂದರು ಧಕ್ಕೆಯಿಂದ ಹೂಳೆತ್ತುವ ಸಂದರ್ಭದಲ್ಲಿಯೂ ಮರಳನ್ನು ವಿಲೆವಾರಿ ಮಾಡಲು ಆ್ಯಪ್‌ ಅನ್ವಯ ಮಾಡಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

ಉಡುಪಿ ಸ್ಥಿತಿ ಉಲ್ಬಣ ಭೀತಿ
ಉಡುಪಿ: ಇನ್ನೂ 4-5 ದಿನಗಳಲ್ಲಿ ಮಳೆಯಾಗದೆ ಇದ್ದಲ್ಲಿ ಉಡುಪಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುವ ಆತಂಕ ಉಂಟಾಗಿದೆ.
ನಗರಕ್ಕೆ ನೀರು ಪೂರೈಕೆಯಾಗುವ ಸ್ವರ್ಣಾ ನದಿಯ ಬಜೆ ಡ್ಯಾಂನಲ್ಲಿ ಕಳೆದೆರಡು ದಿನಗಳಿಂದ ನೀರಿನ ಪ್ರಮಾಣ ಭಾರೀ ಕಡಿಮೆಯಾಗಿದೆ. ಮೇ ತಿಂಗಳ ಆರಂಭದಲ್ಲೇ ನೀರಿನ ಪ್ರಮಾಣ ಭಾರೀ ಕಡಿಮೆಯಾಗಿತ್ತು. ನೀರಿನ ತೀವ್ರ ಕೊರತೆಯಿಂದಾಗಿ ಆರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವು ಪ್ರದೇಶಗಳಿಗೆ 10 ದಿನಗಳ ಬಳಿಕ ನೀರು ಪೂರೈಕೆಯಾಯಿತು.

ಹಳ್ಳಗಳೂ ಖಾಲಿ
ನದಿಯಲ್ಲಿ ಹರಿವು ನಿಂತ ಕಾರಣ ಅಲ್ಲಲ್ಲಿ ದೊಡ್ಡ ಹಳ್ಳಗಳಲ್ಲಿ ಶೇಖರವಾಗಿರುವ ನೀರನ್ನು ಅಣೆಕಟ್ಟಿಗೆ ಹಾಯಿಸುವ ಕೆಲಸವನ್ನು ಮೇ 5ರಂದು ಆರಂಭಿಸಲಾಯಿತು. ಆದರೆ ಆ ನೀರು ನಗರ ತಲುಪಲು 4-5 ದಿನಗಳು ತಗಲಿದವು. ನಗರವನ್ನು 6 ವಿಭಾಗಗಳನ್ನಾಗಿ ವಿಂಗಡಿಸಲಾಯಿತು. ಬಳಿಕ 6 ದಿನಗಳಿಗೊಮ್ಮೆ ಒಂದೊಂದು ವಿಭಾಗದ ಪ್ರದೇಶಗಳಿಗೆ ನೀರು ಒದಗಿಸಲಾಯಿತು. ನದಿಯಲ್ಲಿ ಶ್ರಮದಾನ, ಬಜೆ ಡ್ಯಾಂನಲ್ಲಿ ಹೂಳೆತ್ತುವ ಕೆಲಸ ಕೂಡ ನಡೆಯಿತು. ಟ್ಯಾಂಕರ್‌ಗಳ ಮೂಲಕ ಎತ್ತರದ ಪ್ರದೇಶಗಳಿಗೆ ನೀರು ಪೂರೈಸಲಾಯಿತು. ಆದರೆ ಇದೀಗ ನದಿಯ ಹಳ್ಳಗಳಲ್ಲಿ ಕೂಡ ನೀರಿನ ಪ್ರಮಾಣ ಕುಸಿತವಾಗಿದೆ. ಕಳೆದ ಕೆಲವು ದಿನಗಳಿಂದ ಪುತ್ತಿಗೆ ಮಠದ ಬಳಿಯ ಗುಂಡಿಯಿಂದ ಮೂರು ಪಂಪ್‌ಗ್ಳಲ್ಲಿ ನೀರು ಹಾಯಿಸಲಾಗುತ್ತಿದೆ. ಬುಧವಾರ 8 ಗಂಟೆಯಷ್ಟು ಕಾಲ ಮಾತ್ರ ಪಂಪ್‌ ಮಾಡಲು ನೀರು ಲಭ್ಯವಿತ್ತು. ಗುರುವಾರ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ನಗರಸಭೆ, ಶಾಸಕರು, ನಗರಸಭಾ ಸದಸ್ಯರು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next