Advertisement

ಗ್ರಾಮೀಣ ಮನೆ-ಸಾರ್ವಜನಿಕ ಕಟಡಕ್ಕೆ ನಲ್ಲಿ ನೀರು ಯೋಜನೆ

04:46 PM May 12, 2020 | Suhan S |

ವಿಜಯಪುರ: ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಎಲ್ಲ ಮನೆಗಳು, ಸಾರ್ವಜನಿಕ ಕಟ್ಟಡಗಳಿಗೆ ನೀರಿನ ನಲ್ಲಿಗಳ ಸಂಪರ್ಕ ಕಲ್ಪಿಸುವ ಜಲ ಜೀವನ ಯೋಜನೆ ಅಡಿಯಲ್ಲಿ 562 ಕೋಟಿ ರೂ. ಕ್ರಿಯಾಯೋಜನೆ ರೂಪಿಸಿ, ಮಂಜೂರಿಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಸೋಮವಾರ ಜಿಲ್ಲಾಧಿಕಾರಿ

Advertisement

ಕಚೇರಿ ಸಭಾಂಗಣದಲ್ಲಿ ಜಿಪಂ ಸಿಇಒ ಗೋವಿಂದರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್‌ ಕುರಿತು ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕೇಂದ್ರ-ರಾಜ್ಯ ಪುರಸ್ಕೃತ ಜಲ ಜೀವನ ಯೋಜನೆ ಅಡಿ 2020ರಿಂದ 2024ರ ವರೆಗೆ ಜಿಲ್ಲೆಯ ಎಲ್ಲ ಮನೆಗಳು, ಶಾಲೆ, ಅಂಗನವಾಡಿ ಕೇಂದ್ರ, ವಸತಿ ನಿಲಯ ಹಾಗೂ ಆರೋಗ್ಯ ಕೇಂದ್ರಗಳಿಗೆ ಕಾರ್ಯಾತ್ಮಕ ನಲ್ಲಿ ನೀರು ಕಲ್ಪಿಸುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ ತಾಲೂಕು ವಾರು ಮತ್ತು ಜಿಲ್ಲೆಯ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಈ ಕ್ರಿಯಾ ಯೋಜನೆಯಡಿ ಜಿಲ್ಲೆಯ ಐದು ತಾಲೂಕುಗಳ 3,53,658 ಮನೆಗಳಿಗೆ, 3.28 ಲಕ್ಷ ನಲ್ಲಿಗಳ ಸಂಪರ್ಕಕ್ಕಾಗಿ 56205.54 ಲಕ್ಷ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ರಾಜ್ಯ ಸರ್ಕಾರದ ಮಂಜೂರಾತಿಗೆ ಸಲ್ಲಿಸಲು ನಿರ್ಧರಿಸಲಾಯಿತು.

ಜಿಪಂ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಬರುವ ದಿನಗಳಲ್ಲಿ ಜಲಧಾರೆ ಹಾಗೂ ಜಲ ಜೀವನ ಮಿಷನ್‌ ಯೋಜನೆಯಡಿ ಪ್ರತಿ ಮನೆಗೆ ನೀರಿನ ಸೌಲಭ್ಯ ದೊರೆಯಲಿದೆ. ಕೇಂದ್ರ-ರಾಜ್ಯ ಸರ್ಕಾರಗಳಿಂದ ತಲಾ ಶೇ.45 ಮತ್ತು ಗ್ರಾಪಂಗಳಿಂದ ಶೇ.10 ಅನುದಾನದಡಿ ಯೋಜನೆ ಜಾರಿಯಾಗಲಿದೆ. ಜಿಲ್ಲೆಯ 213 ಗ್ರಾಪಂ ವ್ಯಾಪ್ತಿಯ 629 ಗ್ರಾಮಗಳ ಎಲ್ಲ ಮನೆ, ಶಾಲೆ, ಅಂಗನವಾಡಿ ಕೇಂದ್ರ, ವಸತಿ ನಿಲಯ ಹಾಗೂ ಆರೋಗ್ಯ ಕೇಂದ್ರಗಳಿಗೆ ಕಾರ್ಯಾತ್ಮಕ ನಲ್ಲಿ ನೀರು ಸಂಪರ್ಕ ಕಲ್ಪಿಸುವ ಯೋಜನೆ ಹೊಂದಲಾಗಿದೆ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎಸ್‌. ಕುಮಾರ್‌ ಮಾತನಾಡಿ, 5 ವರ್ಷಗಳಲ್ಲಿ ಶುದ್ಧ ನೀರು ಕಲ್ಪಿಸುವ ಯೋಜನೆ ಇದಾಗಿದ್ದು, ವಿವಿಧ ಗ್ರಾಪಂ ವ್ಯಾಪ್ತಿಗಳ 1035 ಜನವಸತಿಗಳಿಗೆ ನೀರು ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಸದರಿ ಯೋಜನೆಗೆ ಒಪ್ಪಿಗೆ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next