ವಾಡಿ: ಸಮೀಪದ ರಾವೂರ ಗ್ರಾಮಕ್ಕೆ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಗ್ರಾಪಂ ಅಧಿಕಾರಿಗಳು ಹಾಗೂ ವಾರ್ಡ್ ಸದಸ್ಯರು ಸಮಸ್ಯೆಗೆ ಪರಿಹಾರ ಒದಗಿಸುತ್ತಿಲ್ಲ ಎಂದು ಗ್ರಾಮದ ವಿವಿಧ ಬಡಾವಣೆಗಳ ಮಹಿಳೆಯರು ಆರೋಪಿಸಿದ್ದಾರೆ.
ಈ ಕುರಿತು ಪಂಚಾಯಿತಿ ಕಚೇರಿಗೆ ತೆರಳಿ ಖಾಲಿ ಕೊಡಗಳನ್ನು ಪ್ರದರ್ಶಿಸಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿ ಧೋರಣೆ ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣಿ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರೇ ಹೆಚ್ಚಿರುವ ರಾವೂರಿನಲ್ಲಿ ಕುಡಿಯುವ ನೀರಿಗೆ ಬರ ಬಂದಿದೆ. ಬೆಳಗ್ಗೆ ಎದ್ದು ಜಲಮೂಲ ಹುಡುಕಿಕೊಂಡು ಹೋಗಬೇಕಾದ ದುಸ್ಥಿತಿ ಎದುರಾಗಿದೆ. ನಳಗಳ ಮೂಲಕ ವಿವಿಧ ಬಡಾವಣೆಗೆ ಸರಬರಾಜು ಮಾಡಲಾಗುತ್ತಿರುವ ನೀರು ಯಾತಕ್ಕೂ ಸಾಲದು. ಹತ್ತು ಕೊಡ ಭರ್ತಿಯಾಗುವ ಮೊದಲೇ ನೀರು ಪೂರೈಕೆ ಸ್ಥಗಿತಗೊಳ್ಳುತ್ತದೆ. ನೀರು ಸಿಗದವರು ಗ್ರಾಪಂ ಆಡಳಿತಕ್ಕೆ ಶಾಪ ಹಾಕುತ್ತ ಮನೆಗೆ ಹೋಗಬೇಕಾದ ಕಷ್ಟದ ಪರಿಸ್ಥಿತಿಯಿದೆ ಎಂದು ಗ್ರಾಮದ ಮಹಿಳೆಯರು ದೂರಿದ್ದಾರೆ.
ನಮ್ಮ ಬಡಾವಣೆಗೆ ಕುಡಿಯುವ ನೀರು ಸರಬರಾಜು ಸ್ಥಗಿತವಾಗಿದೆ. ನಳಗಳಿಂದ ಬರುವ ಅಲ್ಪಸ್ವಲ್ಪ ನೀರಿನಿಂದ ಜನರ ನೀರಿನ ಬೇಡಿಕೆ ನೀಗುತ್ತಿಲ್ಲ. ಗ್ರಾಪಂ ಸದಸ್ಯರಿಗೆ ಕೇಳಿದರೆ ನೀವು ನಮಗೆ ಮತ ಹಾಕಿ ಗೆಲ್ಲಿಸಿಲ್ಲ. ನಾವು ಅವಿರೋಧ ಆಯ್ಕೆಯಾಗಿದ್ದೇವೆ. ಪಂಚಾಯಿತಿಗೆ ಹೋಗಿ ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಬೇಸಿಗೆ ದಿನದಲ್ಲಿ ಕೊಡ ನೀರಿಗಾಗಿ ಪರದಾಡುವಂತೆ ಆಗಿದೆ. ಜನರು ನೀರಿಗಾಗಿ ಗೋಳಾಡುತ್ತಿದ್ದರೂ ಯಾರೂ ಕೇಳುತ್ತಿಲ್ಲ. ಚುನಾವಣೆ ಬಂದಾಗ ಮತ ಕೇಳಲು ಬರ್ತಾರೆ. ಈಗ ನೀರಿನ ಸಮಸ್ಯೆ ಬಗೆಹರಿಸಲು ಯಾರೂ ಬರುತ್ತಿಲ್ಲ. ಕೂಡಲೇ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸದಿದ್ದರೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಗ್ರಾಮದ ಅಬ್ದುಲ್‌ನಬಿ ಭಗವಾನ್, ಯುನ್ಯೂಸ್ ಶಹಾ, ಖಲೀಲ್, ಗಂಗಾಧರ ಹಡಪದ, ಮಶಾಕ ಶಹಾ, ಆದಾಮ್ ಸೇಖ ಅತ್ತರ್ ಎಚ್ಚರಿಸಿದ್ದಾರೆ.