01 ಅಬ್ಬೆಂಜಾಲು ಕೆರೆಯ ಅಂದಾಜು ವಿಸ್ತೀರ್ಣ (ಎಕ್ರೆ)
150 ಕೃಷಿ ಅವಲಂಬಿತ ಮನೆಗಳು
Advertisement
ಬಜಗೋಳಿ: ಮುಡಾರು ಗ್ರಾಮವು ಬಜಗೋಳಿ ಪೇಟೆಯಲ್ಲಿಯೇ ಇರುವುದರಿಂದ ಬೆಳೆಯುತ್ತಿ ರುವ ಬಜಗೋಳಿ ಪೇಟೆಗೆ ಮುಖ್ಯ ಕೊಂಡಿಯಾಗಿರುವ ಮುಡಾರು ಗ್ರಾಮದ ಕೆರೆಗಳು ಹೂಳು ತುಂಬಿ ಸಮರ್ಪಕ ನಿರ್ವಹಣೆ ಇಲ್ಲದೆ ನೀರಿನ ಸಮಸ್ಯೆ ತಲೆದೋರುವಂತಾಗಿದೆ. ಅಬ್ಬೆಂಜಾಲು ಕೆರೆ ಅಭಿವೃದ್ಧಿಗೊಂಡಲ್ಲಿ ಇಡೀ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದೆ.
ಕಳೆದ ಬೇಸಗೆಯಲ್ಲಿ ನೀರಿನ ಸಮಸ್ಯೆ ಬಹುತೇಕ ಕಡೆ ಉಂಟಾಗಿದ್ದು ಗ್ರಾಮಸ್ಥರು ಪರದಾಡುವಂತಾಗಿತ್ತು. ಪ್ರತೀ ಮನೆಗೆ 2 ದಿನಗಳಿಗೊಮ್ಮೆ ನೀರಿನ ಪೂರೈಕೆ ಜತೆಗೆ ನೀರಿನ ಮಿತ ಬಳಕೆ ಮಾಡುವಂತೆ ಗ್ರಾಮಸಭೆಗಳಲ್ಲಿ ಮನವಿ ಮಾಡಲಾಗಿತ್ತು. ಬಹುತೇಕ ಬಾವಿಗಳು ಬತ್ತಿ ಹೋಗಿದ್ದು ಇನ್ನೂ ಕೆಲವು ಬಾವಿಗಳು ಬತ್ತಿ ಹೋಗುವ ಹಂತಕ್ಕೆ ತಲುಪಿದ್ದವು. ಈ ಸಂದರ್ಭ ಗ್ರಾಮಸ್ಥರು ಹೂಳು ತುಂಬಿದ ಕೆರೆಗಳ ಹೂಳೆತ್ತುವಂತೆ ಮನವಿ ಮಾಡಿದ್ದರು. ಮುಡ್ರಾಲು ಅಬ್ಬೆಂಜಾಲು ಸುತ್ತ ಮುತ್ತ ಸುಮಾರು 150ಕ್ಕೂ ಅಧಿಕ ಕೃಷಿ ಅವಲಂಬಿತ ಮನೆಗಳಿವೆ. ಕಳೆದ ಬಾರಿ ತೆಂಗು, ಅಡಿಕೆ ಇನ್ನಿತರ ಬೆಳೆಗಳು ನೀರಿನ ಸಮಸ್ಯೆಯಿಂದಾಗಿ ಒಣಗಿ ಹೋಗಿದ್ದವು. ಅಬ್ಬೆಂಜಾಲು ಕೆರೆ ಅಭಿವೃದ್ಧಿಗೊಂಡಲ್ಲಿ ಬಹುತೇಕರ ಕೃಷಿ ಭೂಮಿ ಹಸನಾಗಬಹುದಾಗಿದೆ. ನೀರಿನ ಒರತೆ ಕುಸಿತ
ಈ ಕೆರೆ ಅಭಿವೃದ್ಧಿಗೊಂಡಲ್ಲಿ ಕೆರೆಯ ಪಕ್ಕ ಬಾವಿ ನಿರ್ಮಿಸಿ ಇಡೀ ಮುಡಾರು ಗ್ರಾಮಕ್ಕೆ ನೀರು ಪೂರೈಕೆಯ ಯೋಜನೆಯನ್ನು ಇಲ್ಲಿ ಅಳವಡಿಸಬಹುದಾಗಿದೆ. ಉಳಿದ 4 ಕೆರೆಗಳಲ್ಲಿ ಬಹುತೇಕ ಹೂಳು ತುಂಬಿದ್ದು ನೀರಿನ ಒರತೆ ಕುಸಿದು ಬಹುಗೇಗನೆ ಬತ್ತಿ ಹೋಗುತ್ತಿವೆ.
Related Articles
ಮುಡಾರು ಗ್ರಾಮದ ಕೆರೆಗಳನ್ನು ವಿವಿಧ ಇಲಾಖೆಗಳ ಅನುದಾನದಿಂದ ಅಥವಾ ಸಂಘ- ಸಂಸ್ಥೆಗಳ ಸಹಯೋಗ ದೊಂದಿಗೆ ನಿರ್ವಹಣೆ ಮಾಡಬಹುದಲ್ಲದೆ, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅಭಿವೃದ್ಧಿಗೊಂಡಲ್ಲಿ ಇಡೀ ಗ್ರಾಮದ ನೀರಿನ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
Advertisement
ಒಟ್ಟು 5 ಕೆರೆಮುಡಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 5 ಕೆರೆಗಳಿದ್ದು, ಎಲ್ಲ ಕೆರೆಗಳಲ್ಲಿ ಹೂಳು ತುಂಬಿವೆ. ಕೆರೆಗಳ ನಿರ್ವಹಣೆ ಮಾಡಿದಲ್ಲಿ ಇಡೀ ಗ್ರಾಮಕ್ಕೆ ನೀರಿನ ಸಮಸ್ಯೆಯಿಂದ ಮುಕ್ತಿ ದೊರಕಿಸಬಹುದಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಮುಡ್ರಾಲು ಬಳಿಯ ಅಬ್ಬೆಂಜಾಲು ಕೆರೆ, ಬುನ್ನಾಡಿ ಕೆರೆ, ಮುಡಾರು ಹಾಸ್ಟೆಲ್ ಬಳಿಯ ಕೆರೆ, ಕಡಾರಿ ಶಾಲೆಯ ಬಳಿಯ ಕಟ್ಟದಪಾಡಿ ಕೆರೆ, ಹೆಪೆಜಾರು ಅಂಗನವಾಡಿ ಬಳಿಯ ಕೆರೆ ಸಹಿತ ಒಟ್ಟು 5 ಕೆರೆಗಳಿವೆ. ಇವುಗಳ ಅಭಿವೃದ್ಧಿಯಾದಲ್ಲಿ ಮುಡಾರು ಗ್ರಾಮದ ಕೃಷಿಕರ ನೀರಿನ ಸಮಸ್ಯೆ ದೂರವಾಗಬಹುದು. ವಿಸ್ತಾರವಾದ ಕೆರೆ
ಮುಡಾರು ಗ್ರಾಮದ ಮುಡ್ರಾಲು ಬಳಿಯ ಅಬ್ಬೆಂಜಾಲು ಕೆರೆಯು ವಿಶಾಲ ಕೆರೆಯಾಗಿದ್ದು, ವಿಸ್ತಾರವಾಗಿದೆ. ಸುಮಾರು 1 ಎಕ್ರೆ ವಿಸ್ತೀರ್ಣದಲ್ಲಿ ಚಾಚಿಕೊಂಡಿರುವ ಕೆರೆಯು ಇದೀಗ ಹೂಳು ತುಂಬಿ ನೀರಿನ ಪ್ರಮಾಣವು ಕಮ್ಮಿಯಾಗಿದೆ. ಈ ಕೆರೆಯಲ್ಲಿ ನೀರಿನ ಒರತೆಯೂ ಹೆಚ್ಚಿದೆ. ಆದರೆ ಇದು ಇದೂವರೆಗೂ ಅಭಿವೃದ್ಧಿ ಕಂಡಿಲ್ಲ. ಸೂಕ್ತ ಕ್ರಮ
ಮುಡಾರು ಅಬ್ಬೆಂಜಾಲು ಕೆರೆ ಸಹಿತ ಗ್ರಾಮದ ವಿವಿಧ ಕೆರೆಗಳ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದ್ದು, ಹಿರಿಯರ ಮಾರ್ಗದರ್ಶನದ ಜತೆಗೆ ಸಂಬಂಧ ಪಟ್ಟ ಇಲಾಖೆಗಳಿಂದ ಅನುದಾನ ಪಡೆದು ಕೆರೆ ಮರುಪೂರಣಗೊಳಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಗೀತಾ ಎಸ್. ಪಾಟ್ಕರ್, ಅಧ್ಯಕ್ಷರು, ಮುಡಾರು ಗ್ರಾಮ ಪಂಚಾಯತ್ ಹೂಳು ತೆಗೆಯಲಿ
ಅಬ್ಬೆಂಜಾಲು ಕೆರೆಯಲ್ಲಿ ಹೂಳು ತುಂಬಿದ್ದು, ಹೂಳು ತೆಗೆಯುವ ಕಾರ್ಯ ಶೀಘ್ರವಾಗಿ ಆಗಬೇಕಿದೆ. ಕೆರೆಗಳ ಅಭಿವೃದ್ಧಿ ಜತೆಗೆ ಕೆರೆ ಮರುಪೂರಣ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿಯೂ ನಡೆಸಬೇಕಾಗಿದೆ.
-ರಜತ್ ರಾಮ್ ಮೋಹನ್, ಗ್ರಾಮಸ್ಥರು ಕ್ರಮ ಅಗತ್ಯ
ಅಬ್ಬೆಂಜಾಲು ಕೆರೆ ಅಭಿವೃದ್ಧಿಯಾದಲ್ಲಿ ಗ್ರಾಮದ ನೀರಿನ ಸಮಸ್ಯೆ ದೂರವಾಗಲಿದೆ. ಅಲ್ಲದೆ ಕೆರೆಯ ಸಮೀಪ ಬಾವಿ ನಿರ್ಮಿಸಿ ಗ್ರಾಮದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ. ಈ ಬಗ್ಗೆ ಸ್ಥಳೀಯಾಡಳಿತ ಹಾಗೂ ಸಂಬಂಧ ಪಟ್ಟ ಇಲಾಖೆ ಎಚ್ಚೆತ್ತು ನಿರ್ಜೀವ ಕೆರೆ ಗಳ ಪುನಶ್ಚೇತನ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕು.
-ಸಂದೇಶ್ ಮುಡಾರು, ಗ್ರಾಮಸ್ಥರು – ಸಂದೇಶ್ ಕುಮಾರ್ ನಿಟ್ಟೆ