Advertisement

ನದಿ ದಂಡೆಯ ಈ ಊರಿಗೆ ಅಶುದ್ಧ ನೀರೇ ಗತಿ!

04:56 PM Mar 14, 2021 | Team Udayavani |

ವಾಡಿ: ಭೀಕರ ಪ್ರವಾಹವೇ ಉಕ್ಕೇರಿ ಇಡೀ ಗ್ರಾಮವನ್ನೇ ತತ್ತರಿಸುವಂತೆ ಮಾಡಿದ ಮಹಾನದಿ ಭೀಮಾ, ಈ ಗ್ರಾಮದ ಜನರ ಒಡಲಿಗೆ ಹನಿ ನೀರು ಹಾಕಿಲ್ಲ. ಶತ-ಶತಮಾನಗಳ ಹಿಂದೆ ನೀರಿನಾಸೆಗೆ ನದಿ ದಂಡೆಯಲ್ಲಿ ನೆಲೆ ಕಂಡಿರುವ ಕುಟುಂಬಗಳಿಂದ ಇದೊಂದು ಊರಾಗಿ ಪರಿವರ್ತನೆಯಾಗಿದ್ದು, ದುರಂತವೆಂದರೆ ಶತಮಾನಗಳು ಉರುಳಿದರೂ ಗ್ರಾಮಸ್ಥರಿಗೆ ಕುಡಿಯಲು ಕನಿಷ್ಠ ಶುದ್ಧ ನೀರು ಸರಬರಾಜು ಮಾಡಲು ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.

Advertisement

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಮಾನ ಪಡೆದಿರುವ ಚಿತ್ತಾಪುರ ತಾಲೂಕಿನ ಕಡಬೂರ ಗ್ರಾಮ ಭೀಮಾ ನದಿಯ ದಂಡೆಯಲ್ಲಿದೆ. ಸುಮಾರು 2000 ಜನಸಂಖ್ಯೆ ಹೊಂದಿದೆ. 25 ವರ್ಷಗಳ ಹಿಂದೆ ಕುಡಿಯುವ ನೀರಿಗಾಗಿ ಕಡಬೂರ ಗ್ರಾಮಕ್ಕೆ ಬೋರ್‌ವೆಲ್‌ ಮಂಜೂರಾಗಿದ್ದು, ಇದಕ್ಕೂ ಮುಂಚೆ ಜನತೆ ನೇರವಾಗಿ ಭೀಮಾ ನದಿಯಿಂದ ಕಲುಷಿತ ನೀರು ಪಡೆದು ಕಾಲರಾದಿಂದ ಬಳಲುತ್ತಿದ್ದರು. ಹೊಟ್ಟೆ ನೋವಿನಿಂದ ನರಳಿ ಸಂಕಟ ಅನುಭವಿಸುತ್ತಿದ್ದರು.

ಹತ್ತಿರವೇ ನದಿ ಹರಿಯುತ್ತಿದ್ದರೂ ಬೋರ್‌ವೆಲ್‌ನ ಪ್ಲೋರೈಡ್‌ ಮಿಶ್ರಿತ ಅಶುದ್ಧ ನೀರನ್ನೇ ಕುಡಿದು ಜೀವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಗ್ರಾಮಸ್ಥರದ್ದಾಗಿದೆ. 1998-99ನೇ ಸಾಲಿನಲ್ಲಿ ಗುರುಮಠಕಲ್‌ ಕ್ಷೇತ್ರ ತೊರೆದು ಚಿತ್ತಾಪುರ ಮೀಸಲು ಕ್ಷೇತ್ರಕ್ಕೆ ಆಗಮಿಸುವ ಮೂಲಕ ಸತತ 9ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಕಡಬೂರ ಗ್ರಾಮಸ್ಥರ ಕಷ್ಟವನ್ನು ಅರಿತು ನದಿ ದಂಡೆಯಲ್ಲೊಂದು ನೀರು ಶುದ್ಧೀಕರಣ ಘಟಕ ಮಂಜೂರು ಮಾಡಿದ್ದರು. ಇದಕ್ಕಾಗಿ ಒಂದು ಕೋಟಿ ರೂ. ಅನುದಾನ ಮೀಸಲಿಟ್ಟು ಕೆಲಸಕ್ಕೂ ಚಾಲನೆ ನೀಡಿದ್ದರು.

ಖರ್ಗೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಲೋಕಸಭೆಗೆ ಆಯ್ಕೆಯಾದ ನಂತರ ಯೋಜನೆ ಹಳ್ಳ ಹಿಡಿಯಿತು. ಬಿಜೆಪಿಯ ವಾಲ್ಮೀಕಿ ನಾಯಕ ಶಾಸಕರಾಗಿ ಮೂರು ವರ್ಷ ಆಡಳಿತ ನಡೆಸಿದ್ದು, ಸದ್ಯ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಎಂಟು ವರ್ಷಗಳಿಂದ ಅಧಿ ಕಾರದಲ್ಲಿದ್ದರೂ ಈ ಶುದ್ಧೀಕರಣ ಘಟಕ ಚೇತರಿಸಿಕೊಂಡಿಲ್ಲ. ಹನಿ ನೀರು ಶುದ್ಧೀಕರಿಸದೆ ಕೋಟಿ ರೂ. ಖರ್ಚು ವ್ಯರ್ಥವಾಗಿದೆ. ಯಾರು ಶಾಸಕರಾದರೇನು? ಮಂತ್ರಿ-ಸಂಸದರಾದರೇನು? ಶುದ್ಧ ನೀರು ಕುಡಿಯುವ ಭಾಗ್ಯ ನಮಗಿಲ್ಲ ಎಂದು ಗ್ರಾಮಸ್ಥರು ಶಪಿಸುತ್ತಿದ್ದಾರೆ.

ಮಡಿವಾಳಪ್ಪ ಹೇರೂರ 

Advertisement
Advertisement

Udayavani is now on Telegram. Click here to join our channel and stay updated with the latest news.

Next