Advertisement

ಬೇಸಿಗೆ ಮುನ್ನವೇ ಪಟ್ಟಣದಲ್ಲಿ ನೀರಿಗೆ ಹಾಹಾಕಾರ

01:23 PM Feb 20, 2023 | Team Udayavani |

ಮಾಗಡಿ: ಪಟ್ಟಣದ ತಾಲೂಕು ಪಂಚಾಯ್ತಿ ಮುಂದೆ ಇರುವ ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕವಾಗಿ ನಿರ್ವಹಣೆ ಇಲ್ಲದೆ, ಜನರು ನೀರಿಗಾಗಿ ಘಟಕಗಳ ಹುಡುಕಾಡುತ್ತಿದ್ದಾರೆ. ಬೇಸಿಗೆ ಮುನ್ನವೇ ಪಟ್ಟಣದಲ್ಲಿ ಹಾಹಾಕಾರ ಶುರುವಾಗಿದ್ದು, ಇದರಿಂದ ಪುರಸಭೆ ಆಡಳಿತದ ವಿರುದ್ಧ ಪುರನಾಗರಿಕರು ಕಿಡಿಕಾರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕು ಪಂಚಾಯ್ತಿ ಕಚೇರಿ ಇರುವುದರಿಂದ ಈ ಭಾಗದ ಪುರನಾಗರಿಕರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹ ಇದೇ ಘಟಕದ ನೀರನ್ನೇ ಕುಡಿಯುತ್ತಿದ್ದರು. ಆದರೆ, ಈ ಘಟಕ ಸರಿಯಾಗಿ ನಿರ್ವಹಣೆ ಇಲ್ಲದೆ ನೀರಿಗಾಗಿ ಪರಿತಪಿಸುವಂತಾಗಿದೆ. ಈ ಸಂಬಂಧ ಪುರನಾಗರಿಕರು, ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ಜಲಾಶಯದ ನೀರು ಕಲುಷಿತ: ಪುರನಾಗರಿಕರಿಗೆ ಕುಡಿಯಲು ಸಮರ್ಪಕವಾಗಿ ನೀರು ಕೊಡಲಾಗದಷ್ಟು ದಿವಾಳಿಯಾಗಿದೆಯೇ ಪುರಸಭೆ ಎಂದು ಪುರನಾಗರಿಕರು ಪ್ರಶ್ನಿಸುತ್ತಿದ್ದಾರೆ. ನಿಜಕ್ಕೂ ಮೂಲಭೂತ ಸೌಕರ್ಯ ಮರೀಚಿಕೆಯಾಗಿದೆ. ಎಲ್ಲೆಡೆ ಪ್ಲಾಸ್ಟಿಕ್‌ ಮಯ, ಚರಂಡಿಗಳು ದುರ್ನಾತ ಬೀರುತ್ತಿದೆ. ಬಹುತೇಕ ರಸ್ತೆ ಬದಿಗಳಲ್ಲಿ ಬೀದಿ ದೀಪಗಳಿಲ್ಲ, ಪಟ್ಟಣದ ವ್ಯಾಪ್ತಿಯಲ್ಲಿರುವ ಕೆರೆಗಳು ಗಬ್ಬುನಾರುತ್ತಿದೆ. ಪಟ್ಟಣಕ್ಕೆ ಸರಬರಾಜಾಗುತ್ತಿರುವ ಮಂಚನಬೆಲೆ ಜಲಾಶಯದ ನೀರು ಸಹ ಕಲುಷಿತದಿಂದ ಕೂಡಿದೆ. ಇಷ್ಟೆಲ್ಲ ಅನ್ಯಾಯಗಳು ನಡೆಯುತ್ತಿದ್ದರೂ, ಪುರಜನರಿಂದ ಮತ ಪಡೆದ ಪುರಸಭೆ ಸದಸ್ಯರ್ಯಾರು ಅಧಿಕಾರಿಗಳನ್ನು ಪಶ್ನಿಸುತ್ತಿಲ್ಲವೇಕೆ ಎಂಬ ಅನುಮಾನ ಸಹಜವಾಗಿ ವ್ಯಕ್ತವಾಗುತ್ತಿದೆ.

ಮೂಲಭೂತ ಸೌಕರ್ಯ ನೀಡಿ: ಇನ್ನೇನು ತಮ್ಮ ಅಧಿಕಾರ ಮುಗಿಯುತ್ತಾ ಬಂದಿದೆ ಎಂಬ ಅಸಡ್ಡೆಯೇ? ಮತ ಹಾಕಿಸಿಕೊಂಡ ಸದಸ್ಯರಿಗೆ ಪುರ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯ ಕೊಡಬೇಕೆಂಬುದು ಅನಿಸುತ್ತಿಲ್ಲವೇ? ಇನ್ನಾದರೂ ಸಂಬಂಧಪಟ್ಟ ಸದಸ್ಯರು ಜಡ್ಡುಗಟ್ಟಿ ಕುಳಿತಿರುವ ಅಧಿಕಾರಿಗಳಿಗೆ ಚಳಿ ಬಿಡಿಸಿ ಕೆಲಸ ಮಾಡಿಸಬೇಕೆಂದು ನಾಗರಿಕರ ಆಗ್ರಹಿಸಿದ್ದಾರೆ.

ನೀರಿನ ಘಟಕದ ನಿರ್ವಹಣೆಗೆ ನಿರ್ಲಕ್ಷ್ಯ : ಪಟ್ಟಣದಲ್ಲಿ ಪುರಸಭೆ ಆಡಳಿತ ಇದೆಯೋ ಇಲ್ಲವೋ ಎಂದು ಭಾಸವಾಗುತ್ತಿದೆ. ಇದೇ ರೀತಿ ಪಟ್ಟದಲ್ಲಿ ಇರುವ ಇನ್ನು ಮೂರ್‍ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕವೂ ಸರಿಯಾಗಿ ನಿರ್ವಹಣೆಯಿಲ್ಲದಾಗಿದೆ. ಇದರ ನಿರ್ವಹಣೆ ತಮ್ಮದಲ್ಲ ಎಂದು ಅಧಿಕಾರಿಗಳು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಹಲವು ತಿಂಗಳಿಂದ ನಿರ್ವಹಣೆ ಇಲ್ಲದೆ ಶುದ್ಧ ಕುಡಿಯುವ ನೀರಿನ ಘಟಕಗಳು ಸೊರಗುತ್ತಿದೆ.

Advertisement

ಹೀಗೆ ಬಿಟ್ಟರೆ ತುಕ್ಕು ಹಿಡಿದು ಘಟಕವೇ ನಾಶವಾಗಲಿದೆ. ಇದರಿಂದ ಘಟಕಕ್ಕೆ ಹಾಕಿದ ಹಣ ವ್ಯರ್ಥವಾಗುತ್ತದೆ. ಮೂಲಭೂತ ಸೌಕರ್ಯ, ಕುಡಿಯುವ ನೀರು, ಸ್ವತ್ಛತೆ ಎಲ್ಲೂ ಪುರಸಭೆ ನಿರ್ವಹಿಸುತ್ತಿರುವಾಗ ಘಟಕದ ನಿರ್ವಹಣೆಗೆ ನಿರ್ಲಕ್ಷ್ಯ ಏಕೆ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.

ಡಿಕೆಶಿ ಚಾರಿಟಬಲ್‌ ಟ್ರಸ್ಟ್‌ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪುರಸಭೆಗೆ ಇನ್ನು ಒಪ್ಪಿಸದ ಕಾರಣ ನಿರ್ವಹಣೆ ಮಾಡಲಾಗಿಲ್ಲ. ಘಟಕಗಳನ್ನು ಆದಷ್ಟು ಬೇಗ ದುರಸ್ತಿಪಡಿಸಿ ಪುರಸಭೆಗೆ ಒಪ್ಪಿಸಿದರೆ ನಿರ್ವಹಣೆಗೆ ಮುಖ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. – ವಿಜಯಾ ರೂಪೇಶ್‌, ಪುರಸಭೆ ಅಧ್ಯಕ್ಷೆ

ಈ ಭಾಗದ ಪುರನಾಗರಿಕರ ಅನುಕೂಲಕ್ಕಾಗಿ ಲಕ್ಷಾಂತರ ರೂ.ವೆಚ್ಚ ಮಾಡಿ ಡಿಕೆಶಿ ಚಾರಿಟಬಲ್‌ ಟ್ರಸ್ಟ್‌ ಮತ್ತು ಸರ್ಕಾರದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿದ್ದಾರೆ. ಕೆಲವೇ ತಿಂಗಳು ಮಾತ್ರ ಕಾರ್ಯನಿರ್ವಹಿಸಿತು. ಸಮರ್ಪಕವಾಗಿ ಘಟಕ ಕಾರ್ಯ ನಿರ್ವಹಿಸಿದ್ದರೆ ಜನತೆಗೆ ತುಂಬಾ ಅನುಕೂಲವಾ ಗಿತ್ತು. ನೀರಿಲ್ಲದೆ ಇದ್ದರೆ ಬೇಸಿಗೆ ಎದುರಿಸುವುದು ಹೇಗೆ ಎಂಬ ಆತಂಕ ಈಗಲೇ ನಮ್ಮನ್ನು ಕಾಡುತ್ತಿದೆ. – ಜಯಲಕ್ಷ್ಮಮ್ಮ, ಗಾಂಧಿನಗರ ನಿವಾಸಿ

-ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next