Advertisement

ಕೆದೂರು, ಕುಂಭಾಸಿ ಪರಿಸರದಲ್ಲಿ ತಪ್ಪದ ನೀರಿನ ಸಮಸ್ಯೆ

07:30 AM Mar 17, 2018 | Team Udayavani |

ಈ ಗ್ರಾ.ಪಂ.ಗಳ ವ್ಯಾಪ್ತಿಗಳಲ್ಲಿ ಕೆಲವೆಡೆ ನೀರಿಗಾಗಿ ಮೈಲು ದೂರ ನಡೆಯುವ ಸ್ಥಿತಿಯೂ ಇದೆ. ಇನ್ನು ಕೆಲವೆಡೆ ಶಾಶ್ವತ ಪರಿಹಾರವಿಲ್ಲದೇ ಟ್ಯಾಂಕರ್‌ ನೀರು ಅವಲಂಬಿಸುವ ಸ್ಥಿತಿ. ಹಾಗಾಗಿ ಈ ಬೇಸಗೆಯೂ ಸಂಕಷ್ಟ ತಂದೊಡ್ಡಿದೆ.

Advertisement

ತೆಕ್ಕಟ್ಟೆ (ಕೆದೂರು): ಸುಡು ಬಿಸಿಲಿಗೆ ಕೆರೆ, ಮದಗ, ಬಾವಿಗಳು ಬತ್ತಿ ಹೋಗುತ್ತಿದ್ದು, ಅಂತರ್ಜಲ ಮಟ್ಟವೂ ತೀವ್ರವಾಗಿ ಕುಸಿದು ದರಿಂದ ಕೆದೂರು, ಕುಂಭಾಶಿ ಗ್ರಾ.ಪಂ. ವ್ಯಾಪ್ತಿ ಜನರಿಗೆ ಈ ಬೇಸಗೆ ಬಲು ಕಠಿನವಾಗಲಿದೆ. ಕುಡಿಯುವ ನೀರು ಪೂರೈಕೆಯೇ ಸ್ಥಳೀಯ ಗ್ರಾ.ಪಂ.ಗಳಿಗೆ ಸವಾಲಾಗಿ ಪರಿಣಮಿಸಿದೆ. 

ಉಳ್ತೂರು ತೆಂಕಬೆಟ್ಟು , ದೇವಸ್ಥಾನಬೆಟ್ಟು, ಉಳ್ತೂರು ನವಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ತೀವ್ರತರವಾಗಿದ್ದು, ನೀರಿಗಾಗಿ ಮೈಲು ದೂರ ಕ್ರಮಿಸಬೇಕಾದ ಅನಿವಾರ್ಯ ಉದ್ಭವಿಸಿದೆ.

ಕುಡಿಯುವ ನೀರು ಪೂರೈಕೆ ಹೇಗೆ?
ಕೆದೂರು ಗ್ರಾಮದಲ್ಲಿ ತಲೆದೋರ ಬಹುದಾದ ಸಮಸ್ಯೆಗೆ ಸ್ಥಳೀಯಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಸರಕಾರದ ಮಾನದಂಡದಂತೆ (ಮೇ ತಿಂಗಳಿನ ಸಂದರ್ಭದಲ್ಲಿ ಅನುಸರಿಸುವಂಥ ಕ್ರಮ) ಸಮಸ್ಯೆ ತೀವ್ರವಾಗಿರುವ ಪ್ರದೇಶಗಳಿಗೆ ಖಾಸಗಿ ಟ್ಯಾಂಕರ್‌ ಮೂಲಕ ಪ್ರತಿ ವ್ಯಕ್ತಿಗೆ 45 ಲೀ. ನೀರಿನಂತೆ ಒಟ್ಟು 25 ಸಾವಿರ ಲೀ. ಪೂರೈಸುತ್ತಿದೆ.

ಕುಂಭಾಸಿ ಗ್ರಾ.ಪಂ.
ಗ್ರಾ.ಪಂ. ವ್ಯಾಪ್ತಿಯಲ್ಲಿ ವಿನಾಯಕ ನಗರದ ಸುಮಾರು 170 ಮನೆಗಳಿಗೆ ಮೀಟರ್‌ ಅಳವಡಿಸಿ ನಳ್ಳಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ವಿನೋದ ಶೇರಿಗಾರ್‌ ಹಾಗೂ ಗ್ರಾ.ಪಂ. ಕಚೇರಿಯ ಸಮೀಪದಲ್ಲಿ 2 ತೆರೆದ ಬಾವಿ ಮತ್ತು 2 ಬೋರ್‌ ವೆಲ್‌ಗ‌ಳಿದ್ದರೂ ಸಾಕಾಗುತ್ತಿಲ್ಲ. ಗ್ರಾಮದ ನೀರಾಳದಲ್ಲಿ ಸುಮಾರು 15 ಮನೆಗಳಿದ್ದು ಕಳೆದ ವರ್ಷ ಕುಡಿಯುವ ನೀರಿಗಾಗಿ ಟಾಸ್ಕ್ಫೋರ್ಸ್‌ ಪೈಪ್‌ಲೈನ್‌ ಅಳವಡಿಸಿತ್ತು. ಇರುವ  ಒಂದು ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಗಾಂಧಿ ನಗರ ಮೂಡು ಗೋಪಾಡಿಯಲ್ಲಿ ಸೇರಿದಂತೆ ಸುಮಾರು 30 ಕುಟುಂಬಗಳಿಗೆ ಸಮೀಪದ ತೆರೆದ ಬಾವಿಯಿಂದ ಓವರ್‌ ಹೆಡ್‌ ಟ್ಯಾಂಕ್‌ಗೆ 25 ಸಾವಿರ ಲೀ. ರೂ. ಹರಿಸಿ ಪೂರೈಸಲಾಗುತ್ತಿದೆ.

Advertisement

ಪರಿಹಾರ ಕ್ರಮ 
ಪ್ರತಿ ವರ್ಷ ಎಪ್ರಿಲ್‌-ಮೇ ತಿಂಗಳಿನಲ್ಲಿ ನೀರಿನ ಅಭಾವ ಹೆಚ್ಚಾಗುವ ಹಿನ್ನೆಲೆಯಲ್ಲಿ  ಕುಂದಾಪುರ ಪುರಸಭೆಯಿಂದ ಹಂಗಳೂರು ಗ್ರಾ.ಪಂ.ಗೆ ನೀರು ಹರಿಸಲಾಗುತ್ತಿದೆ. ಕೋಟೇಶ್ವರ ಗ್ರಾ.ಪಂ. ಸಹಿತ ಕುಂಭಾಶಿ ಪರಿಸರಕೂ ಸಂಪರ್ಕ ಕಲ್ಪಿಸಿದರೆ ಶಾಶ್ವತ ಪರಿಹಾರ ಸಾಧ್ಯ ಎನ್ನುವುದು ಕುಂಭಾಸಿ ಗ್ರಾ.ಪಂ. ಉಪಾಧ್ಯಕ್ಷ ಮಹಾಬಲೇಶ್ವರ ಆಚಾರ್‌ ಅವರ ಅಭಿಪ್ರಾಯ.

ಗ್ರಾ.ಪಂ. ವ್ಯಾಪ್ತಿಯ ಉಳ್ತೂರು ತೆಂಕಬೆಟ್ಟು, ದೇವಸ್ಥಾನ ಬೆಟ್ಟು, ಉಳ್ತೂರು ನವಗ್ರಾಮಗಳಲ್ಲಿ  ಸುಮಾರು 100ಕ್ಕೂ ಅಧಿಕ ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷ ಉಲ್ಬಣಿಸುತ್ತಿದೆ. ತೀವ್ರ ನೀರಿನ ಅಭಾವವಿರುವೆಡೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ವಾರಾಹಿ ಕಾಲುವೆಗೆ ಪರ್ಯಾಯವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮಾರ್ಗವನ್ನು ರೂಪಿಸಿ ನೀರು ಹರಿಸಿದರೆ ಸಮಸ್ಯೆ ಬಗೆಹರಿಯಬಹುದು. ಅದು ತುರ್ತಾಗಿ ಆಗಬೇಕಾದ ಕೆಲಸ ಎನ್ನುತ್ತಾರೆ ಕೆದೂರು ಎರಡನೇ ವಾರ್ಡ್‌ ಸದಸ್ಯ ಪ್ರಶಾಂತ್‌ ಶೆಟ್ಟಿ ಉಳ್ತೂರು .

ಮಿತ ವ್ಯಯವೇ ಪರಿಹಾರ
ಎಪ್ರಿಲ್‌ನಲ್ಲೇ ನೀರಿನ ಅಭಾವ ಎದುರಾಗಿರುವ ಕಾರಣ ಮುಂದಿನ ದಿನಗಳಲ್ಲಿ ಸಂಭವನೀಯ ಬರವನ್ನು ತಡೆಯಲು ನೀರಿನ ಮಿತವ್ಯಯ ಮತ್ತು ಶೇಖರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ತಜ್ಞರ ಅಭಿಪ್ರಾಯ

ಅಂತರ್ಜಲ ವೃದ್ಧಿ :ಕ್ರಮ ಅಗತ್ಯ
ಗ್ರಾ.ಪಂ. ವ್ಯಾಪ್ತಿಯ 1ನೇ ವಾರ್ಡ್‌ನ ಶಾನಾಡಿ, ಕೆದೂರು ಪ್ರತಾಪ ನಗರ, ಜನತಾ ಕಾಲನಿ, ಮೂಡು ಕೆದೂರು ಸಹಿತ 100 ಕುಟುಂಬಗಳಿಗೆ  3 ತೆರೆದ ಬಾವಿ, 25 ಸಾವಿರ ಲೀ. ಓವರ್‌ ಹೆಡ್‌ ಟ್ಯಾಂಕ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ ಎಪ್ರಿಲ್‌ನಲ್ಲೇ ಅಂತರ್ಜಲ ಸಂಪೂರ್ಣ ಬತ್ತುವುದರಿಂದ ಮುಂದಿನ ದಿನಗಳಲ್ಲಿ ವಾರಾಹಿ ಕಾಲುವೆ ನೀರನ್ನು ಶಾನಾಡಿ ಮದಗಕ್ಕೆ ಹರಿಸಿದರೆ ಸುತ್ತಲಿನ ಅಂತರ್ಜಲ ಮಟ್ಟ ವೃದ್ಧಿಯಾದೀತು.
– ಸಂಪತ್‌ ಕುಮಾರ್‌ ಶೆಟ್ಟಿ ಶಾನಾಡಿ, 
ಮಾಜಿ ಅಧ್ಯಕ್ಷ, ಗ್ರಾ.ಪಂ. ಕೆದೂರು

ಬೇಡಿಕೆ ತಕ್ಕಷ್ಟು ನೀರು
ವಾರಾಹಿ ಕಾಲುವೆ ನೀರನ್ನು ಬೆಳಗೋಡಿನ ಮೂಲಕ ನೈಸರ್ಗಿಕವಾಗಿ ತೋಡುಗಳಿಗೆ ನೀರು ಹರಿಸಿದರೆ ಗ್ರಾಮಸ್ಥರ ಬೇಡಿಕೆಗೆ ತಕ್ಕುದಾಗಿ ನೀರು ಪೂರೈಸಬಹುದು.
– ಸುರೇಶ್‌, ಪಿಡಿಒ 
ಕೆದೂರು ಗ್ರಾ.ಪಂ.

ಕೆದೂರು ಗ್ರಾ.ಪಂ. ವ್ಯಾಪ್ತಿ
– ಇರುವ ಮನೆಗಳು 925.
– ಗ್ರಾಮದ 4 ವಾರ್ಡ್‌ಗಳ ಜನಸಂಖ್ಯೆ 3,929 ಮಂದಿ.
– ಗ್ರಾ.ಪಂ. ವ್ಯಾಪ್ತಿಯಲ್ಲಿ ಇರುವ ಸರಕಾರಿ ಬಾವಿ 7.
– ಹಲೂ¤ರು ಭಾಗದಲ್ಲಿ 1 ಬೋರ್‌ ವೆಲ್‌.
– ಬೆಳಗೋಡಿನಲ್ಲಿ 1 ಬಾವಿ ಇದ್ದು ಕುಡಿಯಲು ಯೋಗ್ಯವಾಗಿದೆ.

– ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next