ಅಫಜಲಪುರ: ವರ್ಷಗಳು ಉರುಳಿದಂತೆ ಮಳೆಗಾಲದ ಕೊರತೆ ಕಾಡುತ್ತಿದೆ. ಹೀಗಾಗಿ ಅಂರ್ತಜಲ ಬತ್ತಿ ನೀರಿನ ಸಮಸ್ಯೆಯಾಗುತ್ತಿದೆ. ಹೀಗಾಗಿ ಕರೆಗಳನ್ನು ಕಟ್ಟಿಕೊಳ್ಳಿ ಕೆರೆಗಳು ಇದ್ದರೆ ನೀರಿನ ಸಮಸ್ಯೆ ಬರುವುದಿಲ್ಲ ಎಂದು ಡಾ| ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಬಡದಾಳ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಕೈಗೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ವರ್ಷ ಪೂರ್ತಿ ಕೆರೆಗಳಲ್ಲಿ ನೀರು ತುಂಬಿರುತ್ತಿತ್ತು. ಹೀಗಾಗಿ ಅಂತರ್ಜಲ ಹೆಚ್ಚಳವಾಗಿ ನೀರಿನ ಸಮಸ್ಯೆ ಇರುತ್ತಿರಲಿಲ್ಲ. ಈಗ ಕೆರೆಗಳಲ್ಲಿ ಹೂಳು ತುಂಬಿಕೊಂಡು ಕೆರೆಗಳು ಸಣ್ಣದಾಗುತ್ತಿವೆ. ಹೀಗಾಗಿ ಕೆರೆಗಳಲ್ಲಿ ನೀರು ನಿಲ್ಲದಂತಾಗಿ ಅಂತರ್ಜಲ ಬತ್ತುತ್ತಿದೆ. ಈಗ ಧರ್ಮಸ್ಥಳ ಸಂಸ್ಥೆಯವರು ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡು ನಮ್ಮೂರ ಕೆರೆಯನ್ನು ಉಳಿಸಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು.
ಗ್ರಾಪಂ ಅಧ್ಯಕ್ಷ ಅಮೃತ ಮಾತಾರಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯವರು ನಮ್ಮೂರಿನ ಕೆರೆ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಅವರಿಗೆ ನಾವು ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ ಎಂದರು.
ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ ಸುವರ್ಣ ಮಾತನಾಡಿ, ಕೆರೆಗಳ ಹೂಳೆತ್ತುವುದರಿಂದ ಅಂತರ್ಜಲ ವೃದ್ಧಿಯಾಗಲಿದೆ. ಮಳೆಗಾಲ ಕಡಿಮೆಯಾದರೂ ಕೂಡ ನೀರಿನ ಕೊರತೆ ಕಾಡುವುದಿಲ್ಲ. ಕೆರೆಯ ಸುತ್ತಮುತ್ತ ಗಿಡ-ಮರ ಬೆಳೆಸಿದರೆ ಮಳೆಗಾಲವು ಹೆಚ್ಚಾಗಲಿದೆ. ವಾತಾವರಣದಲ್ಲೂ ಬದಲಾವಣೆ ಕಾಣಲು ಸಾಧ್ಯವಿದೆ ಎಂದರು. ತಾಲೂಕು ಅಧಿಕಾರಿ ಶಿವರಾಜ ಆಚಾರ್ಯ ಮಾತನಾಡಿ, ಧರ್ಮಸ್ಥಳ ಸಂಸ್ಥೆಯ ವತಿಯಿಂದ ತಾಲೂಕಿನಾದ್ಯಂತ ಒಟ್ಟು 6 ಕೆರೆಗಳ ಹೂಳೆತ್ತುವ ಕಾಮಗಾರಿ ಮುಗಿಸಿದ್ದೇವೆ. ಈ ವರ್ಷ ಬಡದಾಳ ಕೆರೆಯನ್ನು ಆಯ್ಕೆ ಮಾಡಿಕೊಂಡಿದ್ದು ಎಲ್ಲರೂ ಸಹಕಾರ ನೀಡಬೇಕು ಎಂದರು.
ಗ್ರಾಮಸ್ಥರಾದ ಗುರುಲಿಂಗಪ್ಪ ಶೆಟ್ಟಿ, ಶ್ರೀಶೈಲ್ ಚಲಗೇರಿ, ಸಿದ್ದಣ್ಣ ಚಲಗೇರಿ, ಮಲ್ಲು ಸಿಂಗೆ, ಖಾಜಪ್ಪ ಸಿಂಗೆ, ಸಂತೋಷ ನಾಗಾ, ರಾಘವೇಂದ್ರ ಕಲಶೆಟ್ಟಿ, ರಾಯಪ್ಪ ಮಾತಾರಿ, ಪ್ರಕಾಶ ಖೈರಾಟ, ಬಡದಾಳ ಸೇವಾ ಪ್ರತಿನಿಧಿ ಸವಿತಾ ಜಾಬಾದಿ ಸೇರಿದಂತೆ ಅನೇಕರು ಇದ್ದರು.