Advertisement

ಇಂದಿರಾನಗರದಲ್ಲಿ ನೀರಿನ ಸಮಸ್ಯೆ: ಕಗ್ಗಂಟಾದ ಪಂಪ್‌ ದುರಸ್ತಿ 

10:49 AM Dec 03, 2018 | |

ಹಳೆಯಂಗಡಿ : ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಇಂದಿರಾನಗರದಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕೆಟ್ಟಿರುವ ಕೊಳವೆ ಪಂಪ್‌ನ್ನು ದುರಸ್ತಿ ಮಾಡಲು ಪಂಚಾಯತ್‌ಗೆ ಸಾಧ್ಯವಿದ್ದರೂ ಪಂಪ್‌ ಅಳವಡಿಕೆಯ ಹಗರಣದ ತನಿಖೆಯ ಕಾರಣ ಅಸಾಧ್ಯವಾಗದೇ ಇರುವುದು ಕಗ್ಗಂಟಾಗಿದೆ. ಪಂಚಾಯತ್‌ ವ್ಯಾಪ್ತಿಯ ಜನವಸತಿ ಪ್ರದೇಶವಾಗಿರುವ ಇಂದಿರಾನಗರದ ಎರಡನೇ ವಾರ್ಡ್‌ನಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಕುಡಿಯುವ ನೀರಿಗಾಗಿ ಪಂಚಾಯತ್‌ನಿಂದ ಸರಬರಾಜು ಮಾಡುವ ನೀರನ್ನೇ ಜನರು ಆಶ್ರಯಿಸಿರುತ್ತಾರೆ.

Advertisement

ಒಂದು ವಾರದಿಂದ ಬೋರ್‌ ವೆಲ್ಲಿನ ಮೋಟರ್‌ ಕೆಟ್ಟಿರುವುದರಿಂದ ಅದನ್ನು ಪಂಚಾಯತ್‌ ನೇರವಾಗಿ ದುರಸ್ತಿ ಮಾಡಲಾಗದ ಸ್ಥಿತಿ ಇದೆ ಎಂದು ಪಂಚಾಯತ್‌ ಹೇಳುತ್ತಿದೆ. ಕಾರಣ ಇಲ್ಲಿ ಪಂಪ್‌ ಅಳವಡಿಸಿರುವ ಬಗ್ಗೆ ಅವ್ಯವಹಾರ ನಡೆದಿದೆ ಎಂದು ಪಕ್ಕದ ಗ್ರಾಮದವರೊಬ್ಬರು ಎಸಿಬಿಗೆ ದೂರು ದಾಖಲಿಸಿರುವುದರಿಂದ ಅದು ತನಿಖೆಯ ಹಂತದಲ್ಲಿದೆ. ಕೆಟ್ಟ ಪಂಪ್‌ನ್ನು ದುರಸ್ತಿ ಮಾಡಲು ಪಂಚಾಯತ್‌ರಾಜ್‌ ಎಂಜಿನಿಯರ್‌ಗಳ ಮುಖಾಂತರ ಸ್ಥಳ ಮಹಜರು ನಡೆಸಿ ದುರಸ್ತಿ ಮಾಡಬೇಕು ಎಂದು ಪಂಚಾಯತ್‌ ಹೇಳಿಕೊಂಡಿದೆ.

ಈ ಮೊದಲೆಲ್ಲಾ ಕುಡಿಯುವ ನೀರಿನ ಬವಣೆಯಾದಲ್ಲಿ ಪರ್ಯಾಯವಾಗಿ ಪಂಚಾಯತ್‌ ಮೂಲಕವೇ ಟ್ಯಾಂಕರ್‌ ಗಳಲ್ಲಿ ನೀರು ತುಂಬಿಸಿ ಸಾರ್ವಜನಿಕರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಆದರೆ ಈ ವ್ಯವಸ್ಥೆ ತುರ್ತಾಗಿ ಜಿಲ್ಲಾಡಳಿತದ ಸೂಚನೆಯಂತೆ ಬೇಸಗೆ ಕಾಲದಲ್ಲಿ ಮಾತ್ರ ಮಾಡಬಹುದು ಎಂದು ಹೇಳಿಕೊಂಡಿರುವ ಪಂಚಾಯತ್‌ ಬೇರೊಂದು ಕಡೆಯಲ್ಲಿರುವ ಪಂಪ್‌ನ್ನು ದುರಸ್ತಿಗೊಳಿಸಿ ನೀರಿಲ್ಲದ ವಾರ್ಡ್‌ಗೆ ನೀರು ಕೊಡಲು ಪ್ರಯತ್ನ ನಡೆಸಿದೆ.

ಕಿನ್ನಿಗೋಳಿಯ ಬಹುಗ್ರಾಮ ಯೋಜನೆಯಿಂದ ಬರುವ ನೀರು ತಗ್ಗು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಎತ್ತರದಲ್ಲಿರುವ ಮನೆಗಳಿಗೆ ಸರಬರಾಜು ಆಗುತ್ತಿಲ್ಲ. ಇದಕ್ಕೆ ಸೂಕ್ತವಾದ ತಾಂತ್ರಿಕತೆಯ ಗೇಟ್‌ವಾಲ್‌ ಹಾಕಿಕೊಂಡು ನಿರ್ವಹಣೆ ನಡೆಸಿದರೇ ನೀರು ಸಿಗಬಹುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

ಶೀಘ್ರ ಸೂಕ್ತ ವ್ಯವಸ್ಥೆ
ಇಂದಿರಾನಗರದಲ್ಲಿ ನೀರಿನ ಸಮಸ್ಯೆಯ ಬಗ್ಗೆ ಸ್ಪಂದಿಸುವ ದೃಷ್ಟಿಯಿಂದ ತನಿಖೆಯಲ್ಲಿರುವ ಮೋಟರ್‌ ಪಂಪ್‌ನ್ನು ಬಿಟ್ಟು ಪರ್ಯಾಯ ವ್ಯವಸ್ಥೆಯನ್ನು ಈಗಾಗಲೇ ಮಾಡಿಕೊಂಡಿದ್ದೇವೆ. ಕೆಲವೇ ದಿನಗಳಲ್ಲಿ ಹಿಂದಿನ ರೀತಿಯಲ್ಲಿಯೇ ಕುಡಿಯುವ ನೀರಿನ ಸರಬರಾಜು ನಡೆಯಲಿದೆ.
– ಅನಿತಾ ಕ್ಯಾಥರಿನ್‌, ಪಿಡಿಒ (ಪ್ರಭಾರ)

Advertisement

ಸರಿಪಡಿಸುವ ಅನಿವಾರ್ಯತೆ
ಪಂಚಾಯತ್‌ ರಾಜ್‌ನ ನಿಯಮಾನುಸಾರ ಸಂಬಂಧಿಸಿದ ಜಿಲ್ಲಾ ಪಂಚಾಯತ್‌ ನೀರು ಸರಬರಾಜು ಎಂಜಿನಿಯರ್‌ ಗಳ ಉಪಸ್ಥಿತಿಯಲ್ಲಿ ಕೆಟ್ಟಿರುವ ಪಂಪ್‌ ಸರಿಪಡಿಸುವ ಅನಿವಾರ್ಯತೆ ಎದುರಾಗಿದೆ. ಹತ್ತು ದಿನಗಳಾದರೂ ಅವರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ, ಇದರಿಂದ ಪಂಚಾಯತ್‌ ಸಿದ್ಧವಿದ್ದರೂ ಕ್ಲಪ್ತ ಸಮಯದಲ್ಲಿ ದುರಸ್ತಿ ಮಾಡಲು ಸಾಧ್ಯವಾಗುತ್ತಿಲ್ಲ.
-ಎಚ್‌. ವಸಂತ್‌ ಬೆರ್ನಾಡ್‌ , ಅಧ್ಯಕ್ಷರು,
 ನೀರು ಸರಬರಾಜು ಸಮಿತಿ, ಹಳೆಯಂಗಡಿ 

Advertisement

Udayavani is now on Telegram. Click here to join our channel and stay updated with the latest news.

Next