Advertisement

ಗಬ್ಬೂರು ಎಸ್‌ಟಿಪಿಗೆ ತ್ಯಾಜ್ಯ ನೀರಿನ ಕೊರತೆ : ಯುಜಿಡಿ ಪೈಪ್‌ಲೈನ್‌ ಸೋರಿಕೆ-ಹರಿವು ಇಳಿಕೆ

11:21 AM Jan 10, 2021 | Team Udayavani |

ಹುಬ್ಬಳ್ಳಿ: ನಗರದ ತ್ಯಾಜ್ಯ ನೀರು ಸಂಸ್ಕರಿಸಿ ಪುನರ್‌ ಬಳಕೆಗೆ ಅನುವಾಗುವಂತೆ ಮಾಡುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಕೊಳಚೆ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ)ವು ನಿರ್ವಹಣೆ ಹಾಗೂ ತ್ಯಾಜ್ಯ ನೀರಿನ ಕೊರತೆಯಿಂದ ನಲುಗುವಂತಾಗಿದೆ.
ಘಟಕ ಪ್ರತಿದಿನ 40 ಎಂಎಲ್‌ಡಿ ನೀರಿನ ಸಂಸ್ಕರಣಾ ಸಾಮರ್ಥ್ಯ ಹೊಂದಿದ್ದು, ಘಟಕದ ನಿರ್ಮಾಣ ಸಮಯದಲ್ಲಿ ಪ್ರತಿದಿನ ಸುಮಾರು 35 ಎಂಎಲ್‌ಡಿ ನೀರು ಸಂಸ್ಕರಣೆ ಮಾಡಲಾಗುತ್ತಿತ್ತು. ಆದರೆ ದಿನಕಳೆದಂತೆ ತನ್ನ ತನವನ್ನು ಕಳೆದುಕೊಳ್ಳುತ್ತಿರುವ
ಘಟಕಕ್ಕೆ ಪ್ರಸ್ತುತ 5 ಎಂಎಲ್‌ಡಿ ನೀರು ಸಹ ಬರುತ್ತಿಲ್ಲ. ಇದರಿಂದಾಗಿ ಘಟಕ ನಡೆಸುವುದೇ ದುಸ್ತರವಾಗಿದೆ.

Advertisement

ಸದ್ಯ ಪ್ರತಿದಿನ ಬರುತ್ತಿರುವ 3-4 ಎಂಎಲ್‌ಡಿ ಕೊಳಚೆ ನೀರನ್ನು ಸಂಸ್ಕರಿಸಿ ನಾಲಾಕ್ಕೆ ಹರಿಬಿಡಲಾಗುತ್ತಿದೆ.

ಪೈಪ್‌ಲೈನ್‌ ಸೋರಿಕೆ: ನಗರದಲ್ಲಿ ಅಳವಡಿಸಿರುವ ಯುಜಿಡಿ ಪೈಪ್‌ಲೈನ್‌ ಸೋರಿಕೆಯಾಗುತ್ತಿದ್ದು, ಇದರಿಂದ ನೀರಿನ ಹರಿವು ಇಳಿಕೆಯಾಗಿದೆ. ಬರಬೇಕಾದ ನೀರು ನಾಲಾ ಮೂಲಕ ಹೊರ ಹೋಗುತ್ತಿರುವುದರಿಂದ ಘಟಕಕ್ಕೆ ಅಗತ್ಯ ಕೊಳಚೆ ನೀರು ಬರುತ್ತಿಲ್ಲ. ಅಲ್ಲದೆ ರೈತರು ಅಕ್ರಮವಾಗಿ ಪಂಪ್‌ಸೆಟ್‌ ಅಳವಡಿಸಿ ಘಟಕಕ್ಕೆ ನೀರು ಬಾರದಂತೆ ತಡೆಯೊಡ್ಡುತ್ತಿದ್ದಾರೆ ಎಂಬ
ಆರೋಪವೂ ಕೇಳಿಬರುತ್ತಿದೆ.

ಕಳೆದ ಎರಡು ಬಾರಿ ಬಂದ ನೆರೆ ಹಾವಳಿಯಿಂದ ನಗರದಲ್ಲಿ ಅಳವಡಿಸಿರುವ ಯುಜಿಡಿ ಪೈಪ್‌ಲೈನ್‌ಗಳು ತಪ್ಪಿದ್ದು, ಘಟಕಕ್ಕೆ ಬರುವ ನೀರು ನಾಲಾ ಮೂಲಕ ಹೊರಹೋಗುತ್ತಿದೆ. ಈಗಾಗಲೇ ಸಂಬಂಧಿಸಿದ ಇಲಾಖೆ ಗಮನ ಸೆಳೆಯಲಾಗಿದೆ. ಸದ್ಯ ಅವಳಿನಗರದಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ನಡೆಯುತ್ತಿದ್ದು, ಅದರಲ್ಲಿ ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಅನಧಿಕೃತ ಪಂಪ್‌ಸೆಟ್‌ ಅಳವಡಿಕೆ
ಎಸ್‌ಟಿಪಿ ಘಟಕದ ಸಮೀಪವೇ ಒಳಚರಂಡಿಗೆ ರೈತರು ಅಕ್ರಮವಾಗಿ ಬೃಹತ್‌ ಪಂಪ್‌ಸೆಟ್‌ ಅಳವಡಿಸಿ ನೀರು ಪಡೆದುಕೊಳ್ಳುತ್ತಿದ್ದಾರೆ. ಸಂಸ್ಕರಣೆ ಮಾಡಿದ ನೀರನ್ನು ರೈತರಿಗೆ ಪಡೆಯಲು ಸೂಚಿಸಿದರೂ ಅದನ್ನು ಪಡೆಯದೇ ಸಂಸ್ಕರಣೆ ಮಾಡದೇ ಇರುವ ನೀರನ್ನೇ ಪಡೆಯುತ್ತಿದ್ದಾರೆ. ಈ ಹಿಂದೆ ರೈತರು ಒಂದು ಬೆಳೆ ತೆಗೆದುಕೊಂಡು ಪಂಪ್‌ಸೆಟ್‌ ತೆಗೆಯುವುದಾಗಿ ಹೇಳಿದ್ದರು. ಆದರೆ ಹಳೆ ಚಾಳಿಯನ್ನೇ ಮುಂದುವರಿಸಿಕೊಂಡು ಹೋಗಿದ್ದು, ಶಿಸ್ತುಕ್ರಮ ಅವಶ್ಯವಾಗಿದೆ.

Advertisement

ಒಂದು ವರ್ಷ ಬಂದ್‌ ಆಗಿತ್ತು ಘಟಕ
ಘಟಕ ನಿರ್ವಹಣೆ ಟೆಂಡರ್‌ ಪಡೆದವರ ಅವಧಿ ಮುಕ್ತಾಯಗೊಂಡಿದ್ದರಿಂದ ಹೊಸ ಟೆಂಡರ್‌ ಪ್ರಕ್ರಿಯೆ ನಡೆಸಿ ಹೊಸ ತ್ತಿಗೆದಾರರಿಗೆ ಹಸ್ತಾಂತರ ಮಾಡುವಲ್ಲಿನ ವಿಳಂಬ ಹಾಗೂ ಕೊರೊನಾ ಹಾವಳಿಯಿಂದ ಸುಮಾರು ಒಂದು ವರ್ಷ ಕಾಲ ಘಟಕ ಸ್ಥಗಿತಗೊಂಡಿತ್ತು. ಇದೀಗ ಬೆಂಗಳೂರು ಮೂಲದ ಗ್ರೀನ್‌ ಎವರ್‌ಟೆಕ್‌ ಸರ್ವೀಸಸ್‌ ಸಂಸ್ಥೆ ಟೆಂಡರ್‌ ಪಡೆದು ಘಟಕ ನಿರ್ವಹಣೆ ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next