Advertisement

ಬೇಸಿಗೆ ಮುನ್ನವೇ ನೀರಿನ ಸಮಸ್ಯೆ

09:18 AM Feb 25, 2019 | Team Udayavani |

ಭಾಲ್ಕಿ: ದಿನದಿಂದ ದಿನಕ್ಕೆ ಬಿಸಿಲು ತನ್ನ ಗರಿ ಬಿಚ್ಚಿಕೊಳ್ಳುತ್ತ ಹೆಚ್ಚಿನ ಪ್ರಖರತೆ ಸೂಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಭಾಗಶ: ಕೈ ಕೊಟ್ಟ ಕಾರಣ ಬೇಸಿಗೆ ಮುನ್ನವೇ ತಾಲೂಕಿನ ವಿವಿಧೆಡೆ ನೀರಿನ ಸಮಸ್ಯೆ ನಿಧಾನವಾಗಿ ಕಾಣಿಸಿ ಕೊಳ್ಳತೊಡಗಿದೆ. ತಾಲೂಕಿನ ಖಟಕ ಚಿಂಚೋಳಿ, ಕಲವಾಡಿ, ಏಣಕೂರ, ಕುರುಬಖೇಳಗಿ, ಕಪಲಾಪುರ, ಬಾಜೋಳಗಾ, ಬರದಾಪುರ, ಡಾವರಗಾಂವ, ಸಿದ್ದೇಶ್ವರ, ಚಳಕಾಪುರವಾಡಿ, ನೀಲಮನಳ್ಳಿ ತಾಂಡಾ, ಬೀರಿ(ಬಿ), ಹಾಳಗೋರ್ಟಾ, ಮಾವಿನಹಳ್ಳಿ, ವರವಟ್ಟಿ(ಬಿ), ಉಚ್ಚಾ, ಬ್ಯಾಲಹಳ್ಳಿ(ಡಬ್ಲ್ಯೂ) ಮೊರಂಬಿ, ರಾಚಪಾ ಗೌಡಗಾಂವ, ಹೊನ್ನಳ್ಳಿ ಸೇರಿದಂತೆ ಪಟ್ಟಣದ ವ್ಯಾಪ್ತಿಯ ಭಾಲ್ಕಿ ತಾಂಡಾ, ಮುನಿಮ ಕಾಲೋನಿ, ಬಸವನಗರ ಮುಂತಾದ ಸ್ಥಳಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಬೆಳಗ್ಗೆಯಿಂದ ಸಂಜೆ ವರೆಗೆ ಮಕ್ಕಳು, ಹೆಣ್ಣುಮಕ್ಕಳು, ವೃದ್ಧರು ಕೊಡ ಹಿಡಿದುಕೊಂಡು ಹನಿ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

Advertisement

ಸುಮಾರು ಮೂರು ತಿಂಗಳಿನಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ನೀರಿಗಾಗಿ ಕೊಡ, ಬಕೆಟ್‌ಗಳೊಂದಿಗೆ ಹೊಲ ಹೊಲ ಅಲೆದಾಡಿದ್ದೇವೆ. ಕಳೆದ ಕೆಲ ದಿನಗಳ ಹಿಂದೆ ಶಾಸಕರ ಅನುದಾನದಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸಲಾಗಿದೆ. ಅದರಲ್ಲಿ ನೀರಿನ ಲಭ್ಯತೆ ಕಡಿಮೆ
ಇರುವುದರಿಂದ ಕೇವಲ 2 ಗಂಟೆ ಮಾತ್ರ ಕಾರ್ಯ ನಿರ್ವಹಿಸುತ್ತದೆ. 

ಮಧ್ಯದಲ್ಲಿ ವಿದ್ಯುತ್‌ ಕೈಕೊಟ್ಟರಂತೂ ಕತೆ ಮುಗಿಯಿತು. ಹಾಗಾಗಿ ಹೆಚ್ಚಿನ ನೀರಿಗಾಗಿ ಸಮೀಪದ ಹೊಲಗಳಿಗೆ ತೆರಳುವುದಂತೂ ನಿಂತಿಲ್ಲ ಎನ್ನುತ್ತಾರೆ ಮುನಿಮ್‌ ಕಾಲೋನಿ ನಿವಾಸಿಗಳು. ನಿತ್ಯ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿತ್ತು. ಈಚೆಗೆ ಟ್ಯಾಂಕರ್‌ ಚಕ್ರಕ್ಕೆ ಚಿಕ್ಕಮಗು ಬಲಿಯಾಗಿದ್ದರಿಂದ ನೀರು ಒದಗಿಸುವುದು ಸ್ಥಗಿತಗೊಳಿಸಲಾಗಿದೆ. ಇದರಿಂದ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆ. ಮಹಿಳೆಯರಂತೂ ಇಡೀ ದಿನ ಅನ್ಯರ ಹೊಲಗಳಿಗೆ ಸುತ್ತಾಡುತ್ತಿದ್ದಾರೆ ಎಂದು ತೆಗಂಪುರ ಗ್ರಾಮಸ್ಥರು ಅಳಲು ತೋಡಿಕೊಂಡರು

ತಾಲೂಕಿನ ಲಂಜವಾಡ, ಏಣಕೂರ, ತೇಗಂಪುರ ಒಳಗೊಂಡಂತೆ ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸುವುದಕ್ಕಿಂತ ಖಾಸಗಿ ವ್ಯಕ್ತಿಗಳ ಜಮೀನಿನಿಂದ ಪಡೆದು ಜನರಿಗೆ ಒದಗಿಸಲು ಚಿಂತನೆ ನಡೆಸುತ್ತಿದ್ದೇವೆ. ಸಮಸ್ಯೆ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಮುಂಬುರವ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿರುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕು ಅಡಳಿತ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯ ಜಾನುವಾರಗಳಿಗೆ ಮೇವಿನ ಕೊರತೆ ಇಲ್ಲ.
 ಅಣ್ಣಾರಾವ ಪಾಟೀಲ, ತಹಶೀಲ್ದಾರ್‌, 

ಮನುಷ್ಯರಿಗೆ ಕುಡಿಯಲು ಎಲ್ಲಿಂದಾದರೂ ನೀರು ಪೂರೈಸಬಹುದು. ಆದರೆ ನಮ್ಮಲ್ಲಿರುವ ಜಾನುವಾರಗಳಿಗೆ ನೀರು ಎಲ್ಲಿಂದ ತರಬೇಕು. ಈ ಹಿಂದೆ ಗೋಕಟ್ಟೆ ಮತ್ತು ಹೌದುಗಳನ್ನು ಕಟ್ಟಿ ಕೊಳವೆಬಾವಿಯಿಂದ ನೀರು ತುಂಬಿಸುತ್ತಿದ್ದೇವು. ಈಗ ಅದು ಇಲ್ಲ. ಹೀಗಾಗಿ ಜಾನುವಾರಗಳಿಗೆ ನೀರು ಪೂರೈಸುವುದು ಕಷ್ಟಸಾಧ್ಯವಾಗಿದೆ. 
 ಸೂರ್ಯಕಾಂತ ಹುಲಸೂರೆ, ಮಾವಿನಹಳ್ಳಿ ಗ್ರಾಮದ ರೈತ 

Advertisement
Advertisement

Udayavani is now on Telegram. Click here to join our channel and stay updated with the latest news.

Next