Advertisement
ವಿಟ್ಲ: ಮಳೆಗಾಲದಲ್ಲಿ ನೀರು ತುಂಬಿ ಬೃಹತ್ ಕೆರೆಗಳಾಗಿ ಪರಿವರ್ತನೆಗೊಳ್ಳುವ ಕಲ್ಲಿನ ಕೋರೆಗಳನ್ನು ಸರಕಾರ ಮುಚ್ಚಿಸುತ್ತದೆ. ಇಂತಹ ಕೋರೆಗಳಿಂದ ಅನೇಕ ಜೀವಹಾನಿ ಸಂಭವಿಸಿರುವುದರಿಂದ ಮುಚ್ಚುವುದು ಅನಿವಾರ್ಯ ಎಂಬಂತಾಗಿದೆ. ಆದರೆ ಇಂತಹ ಕೋರೆಯಲ್ಲಿ ಜಲಸಂರಕ್ಷಣೆ ಮಾಡುತ್ತಿರುವ ಕೃಷಿಕರೋರ್ವರು ಮಾದರಿಯಾಗಿದ್ದಾರೆ. ಅಳಿಕೆ ಗ್ರಾಮದ ಕಲ್ಲೆಂಚಿಪಾದೆ ಬಾಂಡೀಲು ನಿವಾಸಿ, ಅಳಿಕೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉದ್ಯೋಗಿ ಚಂದ್ರಹಾಸ ಅವರು ಈ ಕಾರ್ಯ ಮಾಡುತ್ತಿದ್ದಾರೆ. ತಮ್ಮ ವರ್ಗ ಭೂಮಿ ಮತ್ತು ಕುಮ್ಕಿಯಲ್ಲಿರುವ ನಿರುಪಯುಕ್ತ ಕಲ್ಲಿನ ಕೋರೆಗಳಲ್ಲಿ ಮಳೆ ನೀರು ಸಂಗ್ರಹಿಸಿ ನೀರು ಇಂಗಿಸುವಂತೆ ಮಾಡಿದ್ದಾರೆ.
ಕಲ್ಲೆಂಚಿಪಾದೆ ಭಾಗದ ಜನರ ನೀರಿನ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ಜಿ. ಪಂ. ಮತ್ತು ಸ್ಥಳೀಯರ ಸಹಕಾರದೊಂದಿಗೆ ಈ ಭಾಗದಲ್ಲಿನ ನಿರುಪಯುಕ್ತ ಕಲ್ಲಿನ ಕೋರೆಯನ್ನು ಸ್ವಚ್ಛಗೊಳಿಸಿ ಕೆರೆಯಾಗಿ ಅಭಿವೃದ್ಧಿಪಡಿಸಲು ಎರಡು ವರ್ಷಗಳ ಹಿಂದೆ ಯೋಜನೆ ರೂಪಿಸಲಾಗಿತ್ತು. ಸುಮಾರು 1ಲ.ರೂ. ವೆಚ್ಚದಲ್ಲಿ ಕೋರೆಯಲ್ಲಿದ್ದ ಮಣ್ಣನ್ನು ಸಾಗಿಸಲು ಪ್ರಯತ್ನಿಸಲಾಗಿತ್ತು. ಕೋರೆಯಲ್ಲಿರುವ ನೀರಿನ ಸಣ್ಣ ಹರಿವಿನ ಜತೆಗೆ, ಮಳೆ ನೀರಿನ ಕೊಯ್ಲು ಮಾಡುವ ಯೋಜನೆ ಅದಾಗಿತ್ತು. ಆದರೆ ಇದಕ್ಕೆ ಸರಕಾರದಿಂದ ಹೆಚ್ಚಿನ ಅನುದಾನ ಸಿಗದೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಒಂದು ಎಕರೆ ವಿಸ್ತಾರ
ಕಲ್ಲೆಂಚಿಪಾದೆ ಬಾಂಡೀಲು ಪ್ರದೇಶದ ಕೃಷಿಕ ಚಂದ್ರಹಾಸ ಅವರು ಒಂದು ಎಕ್ರೆ ಭೂಭಾಗದಲ್ಲಿರುವ ಕಲ್ಲಿನ ಕೋರೆಯಲ್ಲಿ ಮಳೆ ನೀರು ಇಂಗಿಸಲು ಧೈರ್ಯವಾಗಿ ನಿರ್ಧರಿಸಿದರು. ಒಂದು ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಈ ಕೆರೆಯಲ್ಲಿ ಇದೀಗ ಸುಮಾರು 50 ಅಡಿ ಎತ್ತರಕ್ಕೆ ನೀರು ಸಂಗ್ರಹವಾಗಿದೆ. ಜನವರಿ ಬಳಿಕ ನೀರಿನ ಬಳಕೆ ಆರಂಭಿಸಿದರೂ ಎಪ್ರಿಲ್ ಮೇ ತಿಂಗಳ ವರೆಗೆ ಈ ಕೆರೆಯಲ್ಲಿ ನೀರು ಲಭ್ಯವಾಗಬಹುದು ಎಂಬ ಖಚಿತ ಅಭಿಪ್ರಾಯ ಅವರದು. ಕೃಷಿ ಭೂಮಿಗೆ ಹಲವು ವರ್ಷಗಳಿಂದ ನೀರಿನ ಸಮಸ್ಯೆ ಬರುತ್ತಿದ್ದು, ಮೂರು ನಾಲ್ಕು ಕೊಳವೆ ಬಾವಿ ಕೊರೆಸಿದರೂ ನೀರು ಸಿಕ್ಕಿರಲಿಲ್ಲ. ವರ್ಗ, ಕುಮ್ಕಿ ಹಾಗೂ ಸರಕಾರಿ ಜಾಗಗಳನ್ನು ಒಳಗೊಂಡಿರುವ ಸುಮಾರು ಒಂದು ಎಕರೆ ಜಾಗದಲ್ಲಿ ಹಳೆಯ ಕಲ್ಲಿನ ಕೋರೆ ನಿರುಪಯುಕ್ತವಾಗಿತ್ತು. ಇದರಲ್ಲಿ ನೀರು ಇಂಗಿಸುವ ಕ್ರಮ ಕೈಗೊಂಡಲ್ಲಿ ಕೃಷಿಗೆ ಸಹಕಾರಿಯಾಗ ಬಹುದೆಂಬ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಲಾಗಿದೆ ಎಂದು ಚಂದ್ರಹಾಸ ಅವರು ಹೇಳುತ್ತಾರೆ.
Related Articles
ಯಾರಾದರೂ ಈಜಾಡಿ ಅವಘಡ ಉಂಟಾಗಬಹುದು ಅಥವಾ ಇನ್ನಿತರ ರೀತಿಯಲ್ಲಿ ದುರಂತ ಸಂಭವಿಸಬಹುದು ಎಂಬ ಭಯದಿಂದ ಹೆಚ್ಚಿನವರು ಕಲ್ಲಿನ ಕೋರೆಗಳಲ್ಲಿ ನೀರು ಸಂಗ್ರಹಿಸಲು ಹಿಂದೇಟು ಹಾಕುತ್ತಾರೆ. ಆದರೆ ಇದೀಗ ಚಂದ್ರಹಾಸ ಅವರ ಪ್ರಯತ್ನ ಇತರ ಕೆಲವರಿಗೆ ಪ್ರೇರಣೆಯಾಗಲಿದೆ. ಸೂಕ್ತ ಸುರಕ್ಷಾ ಕ್ರಮಗಳೊಂದಿಗೆ ಒಂದಷ್ಟು ಯೋಜಿತವಾಗಿ ಜಲಸಂರಕ್ಷಣೆ ಮಾಡಿದರೆ ನಿಷ್ಪ್ರಯೋಜಕ, ಅಪಾಯಕಾರಿಯಾಗಿ ಉಳಿದಿರುವ ಇಂತಹ ಕಲ್ಲಿನ ಕೋರೆಗಳಿಗೂ ಜೀವ ಬಂದೀತು. ಅಪಾಯವೂ ದೂರವಾದೀತು. ಜಲ ಸಂರಕ್ಷಣೆ ಆಗಲು ಸಾಧ್ಯ.
Advertisement
ಸುರಕ್ಷತಾ ಕ್ರಮನೀರು ಸಂಗ್ರಹಿಸಿದ ಕಲ್ಲಿನ ಕೋರೆಯ ಸುತ್ತ ಬೇಲಿ ಹಾಕಿ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಫಲಕ ಅಳವಡಿಸಲಾಗಿದೆ. – ಉದಯಶಂಕರ್ ನೀರ್ಪಾಜೆ