Advertisement

51 ಗ್ರಾಮಗಳಲ್ಲಿ ನೀರಿನ ಬರ ಸಾಧ್ಯತೆ

07:21 PM Apr 07, 2021 | Team Udayavani |

ದಾವಣಗೆರೆ : ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಿಸಬಹುದಾದ ಸಾಧ್ಯತೆ ಆಧರಿಸಿ 51 ಗ್ರಾಮಗಳನ್ನು ಗುರುತಿಸಿ ಪರಿಹಾರಕ್ಕೆ ಯೋಜನೆ ರೂಪಿಸಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಪ್ರಸಕ್ತ ಬೇಸಿಗೆಯಲ್ಲಿ ಜಿಲ್ಲೆಯ ಚನ್ನಗಿರಿ, ಜಗಳೂರು ಹಾಗೂ ನ್ಯಾಮತಿ ತಾಲೂಕಿನ ಒಟ್ಟು 51 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಿದೆ.

Advertisement

ಇಲ್ಲಿಯ ಖಾಸಗಿ ಕೊಳವೆಬಾವಿ ಬಾಡಿಗೆ ಪಡೆಯುವ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಯೋಜನೆ ಹಾಕಿಕೊಂಡಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಶಾಸಕರ ಅಧ್ಯಕ್ಷತೆಯ ತಾಲೂಕು ಟಾಸ್‌ ಫೋರ್ಸ್‌ ಸಮಿತಿಗಳು ಸಭೆ ನಡೆಸುತ್ತಿದ್ದು ಸಮಸ್ಯೆ ಕಂಡುಬರುವ ಹಳ್ಳಿಗಳನ್ನು ಗುರುತಿಸಿ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಕಳೆದೆರಡು ವರ್ಷಗಳಿಂದ ಸುರಿದ ಉತ್ತಮ ಮಳೆ, ಮಳೆ ನೀರು ಇಂಗಿಸುವ ವಿವಿಧ ಪರಿಣಾಮಕಾರಿ ಕಾರ್ಯಕ್ರಮಗಳಿಂದ ಜಿಲ್ಲೆಯಲ್ಲಿ ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ತಗ್ಗಿರುವುದು ಸಮಾಧಾನಕರ ಸಂಗತಿ.

ಪ್ರತಿ ವರ್ಷ ಜಿಲ್ಲೆಯಲ್ಲಿ 150ರಿಂದ 200 ಹಳ್ಳಿಗಳಲ್ಲಿ ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿತ್ತು. ಇದರಲ್ಲಿ 50ಕ್ಕೂ ಹೆಚ್ಚು ಹಳ್ಳಿಗಳು ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿದ್ದವು. ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆ ಕಡಿಮೆಯಾಗಿದೆ. ಕುಡಿಯುವ ನೀರು ಲಭ್ಯವೇ ಇಲ್ಲದಷ್ಟು ಗಂಭೀರ ಸಮಸ್ಯೆ ಎದುರಿಸುವ ಹಳ್ಳಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ.

ಮುಂದೆ ಕಡು ಬೇಸಿಗೆಯಲ್ಲಿ ಸಮಸ್ಯೆ ಎದುರಾಗಬಹುದಾದ ಸಾಧ್ಯತೆ ಆಧರಿಸಿ ಈ ವರ್ಷ 51 ಹಳ್ಳಿಗಳನ್ನು ಗುರುತಿಸಿ, ಪರಿಹಾರಕ್ಕೆ ಕ್ರಮ ವಹಿಸಲಾಗಿದೆ.

ಎರಡು ವರ್ಷದಿಂದ ಉತ್ತಮ ಮಳೆ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿ ಕಾಡದೇ ಇರಲು ಉತ್ತಮ ಮಳೆಯಾಗಿರುವುದೇ ಪ್ರಮುಖ ಕಾರಣ. ಕಳೆದೆರಡು ವರ್ಷಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳು ತುಂಬಿದ್ದು ನೀರಿನ ಮೂಲಗಳನ್ನು ಸಮೃದ್ಧಗೊಳಿಸಿವೆ. ಇದರ ಜತೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನರೇಗಾ ಯೋಜನೆಯಡಿ ಕೈಗೊಂಡ ಕೆರೆ ಹೂಳೆತ್ತುವುದು, ಬದು ನಿರ್ಮಾಣ, ಮಳೆ ಕೊಯ್ಲು, ಬಚ್ಚಲಗುಂಡಿ ನಿರ್ಮಾಣದಂಥ ವಿವಿಧ ಕಾರ್ಯಕ್ರಮಗಳು ಜಲಮೂಲಗಳನ್ನು ಕಾಪಾಡಿ ಅಂತರ್ಜಲ ಮಟ್ಟ ಮೇಲೇರುವಂತೆ ಮಾಡಿವೆ.

Advertisement

ಇವೆಲ್ಲದರ ಪರಿಣಾಮವಾಗಿ ಜಲ ಸಮೃದ್ಧಿಗೊಂಡು ಕುಡಿಯುವ ನೀರಿನ ಗಂಭೀರ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮೇವು ಕೊರತೆ ಇಲ್ಲ: ಉತ್ತಮ ಮಳೆ ಹಾಗೂ ಬೆಳೆ ಕಾರಣದಿಂದಾಗಿ ಪ್ರಸಕ್ತ ವರ್ಷ ಮೇವಿನ ಕೊರತೆಯೂ ಅಷ್ಟಾಗಿ ಕಂಡು ಬಂದಿಲ್ಲ. ಪಶು ಸಂಗೋಪನಾ ಇಲಾಖೆ ಲೆಕ್ಕಾಚಾರದ ಪ್ರಕಾರ ಜಿಲ್ಲೆಯಲ್ಲಿ ಸರಾಸರಿ 39 ವಾರಗಳಿಗೆ ಆಗುವಷ್ಟು ಮೇವು ಲಭ್ಯತೆ ಇದ್ದು, ಮೇವಿನ ಕೊರತೆ ಆಗದು ಎನ್ನಲಾಗಿದೆ. ಚನ್ನಗಿರಿ ತಾಲೂಕಿನಲ್ಲಿ 29 ವಾರಗಳಿಗೆ ಆಗುವಷ್ಟು, ದಾವಣಗೆರೆಯಲ್ಲಿ 42 ವಾರ, ಹರಿಹರ ತಾಲೂಕಿನಲ್ಲಿ 77 ವಾರ, ಹೊನ್ನಾಳಿ ತಾಲೂಕಿನಲ್ಲಿ 32 ವಾರ ಮತ್ತು ಜಗಳೂರು ತಾಲೂಕಿನಲ್ಲಿ 23 ವಾರಗಳಿಗೆ ಆಗುವಷ್ಟು ಮೇವು ಲಭ್ಯತೆ ಇದೆ ಎಂದು ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ| ಭಾಸ್ಕರ ನಾಯಕ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next