Advertisement

ಹಳ್ಳ ಹಿಡಿದ ನೀರಿಗೆ ನೀರು ಪ್ರಸ್ತಾವನೆ

07:55 PM Jun 07, 2021 | Team Udayavani |

ವರದಿ: ಕೇಶವ ಆದಿ

Advertisement

ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ನೀರಿಗೆ ನೀರು ಮಹತ್ವದ ಪ್ರಸ್ತಾವನೆಯ ಒಪ್ಪಂದಕ್ಕೆ ಉತ್ತರ ಕರ್ನಾಟಕ ಭಾಗದ ಅದರಲ್ಲೂ ರಮೇಶ ಜಾರಕಿಹೊಳಿ ಅವರೇ ಮತ್ತೂಮ್ಮೆ ಜಲಸಂಪನ್ಮೂಲ ಸಚಿವರಾಗಿ ಬರಬೇಕೇ..? ಇಂತಹ ಒಂದು ಅಭಿಪ್ರಾಯ ಕೃಷ್ಣಾ ನದಿ ವ್ಯಾಪ್ತಿಯ ತಾಲೂಕುಗಳಲ್ಲಿ ಕೇಳಿ ಬರುತ್ತಿದೆ.

ಕೃಷ್ಣಾ ನದಿ ವ್ಯಾಪ್ತಿಯ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ನೂರಾರು ಗ್ರಾಮಗಳು ಪ್ರತಿ ವರ್ಷ ಬೇಸಿಗೆಯಲ್ಲಿ ಎದುರಿಸುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಈ ನೀರಿಗೆ ನೀರು ವಿನಿಮಯ ಕಳೆದ ನಾಲ್ಕು ವರ್ಷಗಳಿಂದ ಚರ್ಚೆಯ ಹಂತದಲ್ಲೇ ಇರುವದರಿಂದ ಸಹಜವಾಗಿಯೇ ಈ ಅಭಿಪ್ರಾಯ ವ್ಯಕ್ತವಾಗಿದೆ.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ನೀರಿಗೆ ನೀರು ಪ್ರಸ್ತಾವನೆಗೆ ಚಾಲನೆ ಸಿಕ್ಕಿತ್ತು ಇದು ಅನುಷ್ಠಾನಕ್ಕೆ ಬಂದರೆ ನಮ್ಮ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ದೂರವಾಗಲಿದೆ ಎಂದು ಕೃಷ್ಣಾ ನದಿ ತೀರದ ನೂರಾರು ಗ್ರಾಮಗಳ ಜನರು ಭಾವಿಸಿದ್ದರು. ಆಗ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ ಪಾಟೀಲ ನಂತರ ಡಿ.ಕೆ ಶಿವಕುಮಾರ ಪ್ರಯತ್ನ ಮಾಡಿದರೂ ಅದು ಫಲ ನೀಡಿರಲಿಲ್ಲ. ಕಳೆದ ವರ್ಷ ಬಿಜೆಪಿ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಈ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸಿ ಮೂರ್‍ನಾಲ್ಕು ಬಾರಿ ಮಹಾರಾಷ್ಟ್ರ ಕ್ಕೆ ಭೇಟಿ ನೀಡಿ ಮಾತುಕತೆ ಸಹ ನಡೆಸಿದ್ದರು.

ಸರಕಾರದ ಮತ್ತು ಸಚಿವರ ಪ್ರಯತ್ನ ನದಿ ತೀರದ ಗ್ರಾಮಗಳ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿತ್ತು. ಆದರೆ ರಮೇಶ ಜಾರಕಿಹೊಳಿ ಅವರ ಅನಿರೀಕ್ಷಿತ ರಾಜೀನಾಮೆಯಿಂದ ಈ ಪ್ರಯತ್ನ ಮತ್ತೆ ನನೆಗುದಿಗೆ ಬಿತ್ತು.

Advertisement

ಈ ವರ್ಷ ಕೊರೊನಾದ ಎರಡನೇ ಅಲೆಯ ತೀವ್ರ ಹಾವಳಿಯ ನಡುವೆ ಕೃಷ್ಣಾ ನದಿ ತೀರದ ಜನರ ಕುಡಿಯುವ ನೀರಿನ ಸಮಸ್ಯೆ ವಿಷಯ ಚರ್ಚೆಗೆ ಬರಲೇ ಇಲ್ಲ. ಕೆಲವು ಕಡೆ ನೀರಿನ ಹಾಹಾಕಾರ ಕೇಳಿ ಬಂದರೂ ಅದು ಅಲ್ಲಿಗೆ ಮಾತ್ರ ಸೀಮಿತವಾಗಿತ್ತು. ಜಲಸಂಪನ್ಮೂಲ ಸಚಿವರೇ ಇಲ್ಲದ ಕಾರಣ ಮಹಾರಾಷ್ಟ್ರದ ಜೊತೆ ಮಾತುಕತೆ ಪ್ರಯತ್ನ ನಡೆಯಲೇ ಇಲ್ಲ. ಮೇಲಾಗಿ ಈ ಬಾರಿ ಕೃಷ್ಣಾ ನದಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರಿನ ಸಂಗ್ರಹ ಇರುವದರಿಂದ ನೀರು ಬೇಕು ನೀರು ಎಂಬ ಕೂಗು ಹೆಚ್ಚಾಗಿ ಕೇಳಲಿಲ್ಲ.

ಮಹಾರಾಷ್ಟ್ರದ ಜೊತೆ ಮಾತುಕತೆ ನಡೆಸಬೇಕು ಎಂಬ ಒತ್ತಡ ಸಹ ಸರಕಾರದ ಮೇಲೆ ಬೀಳಲಿಲ್ಲ. ಫಲನೀಡದ ಮನವಿ: ಬೇಸಿಗೆ ಸಮಯದಲ್ಲಿ ಕೃಷ್ಣಾ ನದಿ ಸಂಪೂರ್ಣ ಒಣಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದಾಗ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನಪ್ರತಿನಿಧಿಗಳು ಮಹಾರಾಷ್ಟಕ್ಕೆ ನಿಯೋಗದ ಮೂಲಕ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತ ಬಂದಿದ್ದಾರೆ.

ಇದುವರೆಗೆ ನಿಯೋಗದ ಹಾಗೂ ಕರ್ನಾಟಕ ಸರಕಾರದ ಮನವಿಗೆ ಮಹಾರಾಷ್ಟ್ರ ಸ್ಪಂದಿಸಿದೆ. ಆದರೆ ಕಳೆದ ಬಾರಿ ನೀರಿಗೆ ಹಣ ನೀಡುವುದರ ಬದಲು ಆಲಮಟ್ಟಿ ಜಲಾಶಯದಿಂದ ಸೊಲ್ಲಾಪುರ, ಜತ್ತ ಹಾಗೂ ಅಕ್ಕಲಕೋಟ ಪ್ರದೇಶಗಳಿಗೆ ನೀರು ನೀಡಬೇಕು ಎಂದು ಮಹಾರಾಷ್ಟ್ರ ಸರಕಾರದ ಬೇಡಿಕ ಸಮಸ್ಯೆಯನ್ನು ಜಟಿಲ ಮಾಡಿತ್ತು. ಆಗ ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಹರಿಯಲೇ ಇಲ್ಲ. ಹೀಗಾಗಿ ನೀರು ವಿನಿಮಯ ಒಪ್ಪಂದ ಮಾಡಿಕೊಳ್ಳುವ ವಿಷಯದಲ್ಲಿ ಸರಕಾರಗಳಿಂದ ನಿರೀಕ್ಷಿತ ಪ್ರಯತ್ನ ಆಗುತ್ತಿಲ್ಲ ಎಂಬ ನೋವು ನದಿ ತೀರದ ಜನರಲ್ಲಿ ಈಗಲೂ ಇದೆ.

ಒಡಂಬಡಿಕೆ ಅನುಮಾನ: ಈಗ ಕರ್ನಾಟಕಕ್ಕೆ ತದ್ವಿರುದ್ಧವಾಗಿ ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಸರಕಾರ ಇರುವದರಿಂದ ಮತ್ತು ಶಿವಸೇನೆ ಗಡಿ ವಿಚಾರದಲ್ಲಿ ಕರ್ನಾಟಕದ ಜೊತೆ ಮೇಲಿಂದ ಮೇಲೆ ತಗಾದೆ ತೆಗೆಯುತ್ತಲೇ ಇರುವದರಿಂದ ನೀರು ವಿನಿಮಯ ಎಂಬ ಶಾಸನಬದ್ಧ ಒಡಂಬಡಿಕೆ ಕಾರ್ಯರೂಪಕ್ಕೆ ಬರಬಹುದೇ ಎಂಬ ಅನುಮಾನ ಮೂಡಿದೆ.

ಕಳೆದ ವರ್ಷ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜವಳಿ ಸಚಿವ ಶ್ರೀಮಂತ ಪಾಟೀಲ ಮತ್ತು ಅಥಣಿಯ ಶಾಸಕ ಮಹೇಶ ಕುಮಟಳ್ಳಿ ಇದನ್ನು ಸವಾಲಾಗಿ ತೆಗೆದುಕೊಂಡು ನೀರು ವಿನಿಮಯ ಒಪ್ಪಂದಕ್ಕೆ ಒಂದಿಷ್ಟು ಪ್ರಯತ್ನ ಮಾಡಿದ್ದರು. ಆದರೆ ನಾನಾ ಕಾರಣಗಳಿಂದ ಪ್ರಯತ್ನ ಅಲ್ಲಿಗೇ ನಿಂತಿತು.

ಮಹಾರಾಷ್ಟ್ರಕ್ಕೆ ನೀರಿಗೆ ವಿರೋಧ: ಕೃಷ್ಣಾ ನದಿಗೆ ನೀರು ಬಿಡುವದಕ್ಕೆ ಪರ್ಯಾಯವಾಗಿ ತುಬಚಿಯಿಂದ ಸೊಲ್ಲಾಪುರ ಭಾಗಕ್ಕೆ ನೀರು ಕೊಡಬೇಕು ಎಂಬುದು ಮಹಾರಾಷ್ಟ್ರದ ಬೇಡಿಕೆ. ತುಬಚಿ ಬಬಲೇಶ್ವರ ಪ್ರತಿಷ್ಠಿತ ಏತ ನೀರಾವರಿ ಯೋಜನೆಯು 3700 ಕೋ.ರೂ. ವೆಚ್ಚದಲ್ಲಿ 52000 ಹೆಕ್ಟೇರ್‌ ಜಮೀನಿನ ನೀರಾವರಿಗಾಗಿ ಜಾರಿಯಾದ ಯೋಜನೆ. ಇದಕ್ಕಾಗಿ ರಾಜ್ಯ ಸರಕಾರ 6 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ಆದರೆ ಇಲ್ಲಿಂದ ಮಹಾರಾಷ್ಟ್ರದ ಸೊಲ್ಲಾಪುರ ಹಾಗೂ ಜತ್ತ ಪ್ರದೇಶಕ್ಕೆ ನೀರು ಒದಗಿಸಲು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜನರ ವಿರೋಧ ಇದೆ.

ತುಬಚಿ ಬಬಲೇಶ್ವರ ಯೋಜನಾ ಪ್ರದೇಶದಲ್ಲಿ ಮಹಾರಾಷ್ಟ್ರ ಪಂಪ್‌ ಹೌಸ್‌ ನಿರ್ಮಿಸಿಕೊಂಡು ಜತ್ತ ಪ್ರದೇಶಕ್ಕೆ ನೀರು ಒಯ್ಯಬಹುದು. ಇದಕ್ಕೆ ಕರ್ನಾಟಕ ಸರಕಾರ ಮೂಲಭೂತ ಸೌಕರ್ಯ ಒದಗಿಸಲು ಸಿದ್ಧವಿದೆ ಎಂಬ ಪ್ರಸ್ತಾವನೆಯನ್ನು ಮಹಾರಾಷ್ಟ್ರ ತಿರಸ್ಕರಿಸಿದೆ. ಕರ್ನಾಟಕ ಸರಕಾರವೇ ತುಬಚಿ ಬಬಲೇಶ್ವರದಿಂದ ನೀರು ಒದಗಿಸಬೇಕು ಎಂಬುದು ಅಲ್ಲಿನ ಸರಕಾರದ ವಾದ. ಹೀಗಾಗಿ ನೀರು ವಿನಿಮಯ ಒಪ್ಪಂದ ಕಗ್ಗಂಟಾಗಿಯೇ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next