Advertisement
ವಿದ್ಯಾರ್ಥಿಗಳಿಗೆ ಹೆಚ್ಚಿನ ಕಷ್ಟಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇತುವೆ ಮುಳುಗಡೆಯಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸೇತುವೆ ಮುಳುಗಡೆಯಾಗಿರುವ ಕಾರಣದಿಂದಾಗಿ ಹೊಸಮಠ ಸೇತುವೆಯ ಮೂಲಕ ಉಪ್ಪಿನಂಗಡಿ-ಕಡಬ ನಡುವೆ ಸಂಚರಿಸುತ್ತಿದ್ದ ಸರಕಾರಿ ಬಸ್ ಗಳು ಓಡಾಟ ಸ್ಥಗಿತಗೊಳಿಸಿವೆ. ವಿದ್ಯಾರ್ಥಿಗಳು ಬೆಳಗ್ಗೆ ಖಾಸಗಿ ವಾಹನಗಳಲ್ಲಿ ಬಂದರೆ, ಸಂಜೆ ಮನೆ ಸೇರಲು ಪರದಾಡುವಂತಾಗಿದೆ. ಶಾಲೆ ಬಿಟ್ಟು ಕಡಬದಿಂದ ಬಿಳಿನೆಲೆ, ಕೊಂಬಾರು, ಮರ್ಧಾಳ, ಕೈಕಂಬ ಮೊದಲಾದ ಕಡೆ ಹೋಗಬೇಕಾದ ವಿದ್ಯಾರ್ಥಿಗಳು ಸಂಜೆ ಆರು ಗಂಟೆಯ ತನಕವೂ ವಾಹನಗಳಿಲ್ಲದೆ ಕಡಬ ಬಸ್ ನಿಲ್ದಾಣದಲ್ಲಿ ಉಳಿಯುವಂತಾಗಿದೆ. ಕೆಲವು ವಿದ್ಯಾರ್ಥಿಗಳು ಖಾಸಗಿ ಜೀಪುಗಳಲ್ಲಿ ನೇತಾಡಿಕೊಂಡು ಮಳೆಗೆ ಮೈಯೊಡ್ಡಿ ಹೋಗುತ್ತಿದ್ದಾರೆ. ಸಮಸ್ಯೆ ಬಿಗಡಾಯಿಸಿದ್ದರೂ ಸಂಬಂಧಪಟ್ಟವರು ಗಮನಹರಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಈ ಹಿಂದೆ ಮುಳುಗಡೆಯಾದ ಸೇತುವೆಯ ಮೇಲೆ ವಾಹನ ಚಲಾಯಿಸುವ ದುಸ್ಸಾಹಸಕ್ಕೆ ಇಳಿದು ನೀರಿಗೆ ಬಲಿಯಾದ ಜೀವಗಳು ಹಲವು. ಸುಮಾರು 5 ದಶಕಗಳ ಹಿಂದೆ ನೆರೆನೀರಿನಲ್ಲಿ ಮುಳುಗಿದ್ದ ಸೇತುವೆಯನ್ನು ದಾಟಲು ಯತ್ನಿಸಿದ್ದ ಖಾಸಗಿ ಬಸ್ಸೊಂದು ಮುಳುಗಿ ಓರ್ವ ಪ್ರಯಾಣಿಕ ನೀರುಪಾಲಾಗಿದ್ದ. ಆ ಬಳಿಕ ಹಲವು ವರ್ಷಗಳ ಅನಂತರ ತಮಿಳುನಾಡಿನ ಪ್ರವಾಸಿ ಯುವಕರಿಬ್ಬರು ನೆರೆ ನೀರಿನಲ್ಲಿ ಕೊಚ್ಚಿಹೋಗಿದ್ದರು. ಅಡಿಕೆ ಸಸಿ ಸಾಗಿಸುತ್ತಿದ್ದ ಲಾರಿಯೊಂದು ಮುಳುಗಿ ಕೃಷಿಕರೊಬ್ಬರು ಜೀವ ಕಳೆದುಕೊಂಡಿದ್ದರು. 2006ರ ಮಳೆಗಾಲದಲ್ಲಿ ಸಿಮೆಂಟ್ ಸಾಗಾಟದ ಲಾರಿಯೊಂದು ಸೇತುವೆಯ ಮೇಲೆ ಚಲಿಸಿ ನೀರುಪಾಲಾಗಿ ಲಾರಿಯಲ್ಲಿದ್ದ ನಾಲ್ವರು ಮೃತಪಟ್ಟಿದ್ದರು. ಈ ಕಹಿ ಘಟನೆ ಜನರ ಮನಸ್ಸಿನಿಂದ ಮಾಸಿಲ್ಲ.