Advertisement

ಮೂರು ತಿಂಗಳಿಂದ ಪೂರೈಕೆಯಾಗಿಲ್ಲ ನೀರು!

06:24 PM Jan 10, 2022 | Team Udayavani |

ತೆಲಸಂಗ: ಕಳೆದ ಮೂರು ತಿಂಗಳಿಂದ ತೆಲಸಂಗ ಗ್ರಾಮಕ್ಕೆ ಜಾಕ್ವೆಲ್‌ನಿಂದ ಕುಡಿವ ನೀರು ಪೂರೈಕೆ ಆಗದ ಹಿನ್ನೆಲೆ ಗ್ರಾಪಂನವರು ಕೆರೆ ನೀರಿನಿಂದ ಇಷ್ಟು ದಿನಗಳವರೆಗೆ ಹೇಗೋ ನಿರ್ವಹಣೆ ಮಾಡಿದ್ದಾರೆ. ಆದರೆ ಇದೀಗ ದಿನದಿಂದ ದಿನಕ್ಕೆ ಕುಡಿವ ನೀರಿನಹಾಹಾಕಾರ ಭುಗಿಲೆದ್ದಿದ್ದು, ತಾಲೂಕು ಆಡಳಿತದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ.

Advertisement

13 ಹಳ್ಳಿಗಳು ಅವಲಂಬಿತವಾಗಿರುವ ರಾಜೀವ್‌ ಗಾಂಧಿ  ಕುಡಿಯುವ ನೀರಿನ ಸಬ್‌ಮಿಷನ್‌ ನಿರ್ವಹಣೆ ನಿರ್ಲಕ್ಷéಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ತೆಲಸಂಗ ಮಾತ್ರವಲ್ಲದೇ 13 ಹಳ್ಳಿಯ ಜನರು ಗುಟುಕು ನೀರಿಗಾಗಿ ಪರಿತಪಿಸುವಂತಾಗಿದೆ.

ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯದಿಂದ ಬಂದ್‌ ಬಿದ್ದಿರುವ ಜಾಕ್ವೆಲ್‌ ನೀರು ಪೂರೈಕೆಯಾಗುತ್ತಿಲ್ಲ. ಮೋಟಾರ್‌ ಸುಟ್ಟಿದೆ, ಪೈಪ್‌ ಒಡೆದಿದೆ, ರಿಪೇರಿ ಕಾರ್ಯ ಪ್ರಗತಿಯಲ್ಲಿದೆ ಹೀಗೆ ಹೀಗೆ ಸಬೂಬು, ನೆಪ ಹೇಳುತ್ತಲೇ ಸಾಗಹಾಕಲಾಗುತ್ತಿದೆ.

ಯಾವುದೇ ತೊಂದರೆ ಇದ್ದರೂ ಒಂದೆರಡು ದಿನಗಳಲ್ಲಿ ಸರಿ ಮಾಡಬಹುದು. ಆದರೆ ಕಳೆದ 3 ತಿಂಗಳಿಂದ ಕುಂಟು ನೆಪ ಹೇಳುತ್ತ 13 ಹಳ್ಳಿಯ ಜನ ನಿತ್ಯ ನೀರಿಗಾಗಿ ಪರಿತಪಿಸುವಂತೆ ಮಾಡಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಹಳ್ಳ ಹಿಡಿದ ಯೋಜನೆ: ಯೋಜನೆ ಸಮರ್ಪಕ ನಿರ್ವಹಣೆ ಆಗದ್ದರಿಂದ ಜನರು ಹನಿ ನೀರಿಗಾಗಿ ಪರಿತಿಸುತ್ತಿದ್ದಾರೆ. ಒಂದು ದಿನ ನೀರು ಬಂದರೆ ಮತ್ತೆ ತಿಂಗಳುಗಟ್ಟಲೇ ಬರುವುದೇ ಇಲ್ಲ.

ಅದೆಷ್ಟು ಬಾರಿ ಗ್ರಾಪಂಯವರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನದಿಯಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಎರಡು ದಿನಕ್ಕೊಮ್ಮೆಯಾದರೂ ನೀರು ಪೂರೈಸಬಹುದು. ಆದರೆ ಇಲ್ಲಿಯ ಅವ್ಯವಸ್ಥೆ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತದಿರುವುದರಿಂದ ನೀರಿನ ಹಾಹಾಕಾರ ಮಾತ್ರ ತಪ್ಪದಾಗಿದೆ.

Advertisement

ವರದಾನವಾಗಿತ್ತು: ಈ ವ್ಯವಸ್ಥೆ ಮೊದಲು 13 ಹಳ್ಳಿಗಳಿಗೆ ವರದಾನವಾಗಿದ್ದು ನಿಜ. ಆದರೆ ಇಲ್ಲಿಗೆ ಕೃಷ್ಣಾ ನದಿಯಿಂದ ಝುಂಜರವಾಡ ಗ್ರಾಮದ ಹತ್ತಿರ ನದಿ ತೀರದಲ್ಲಿ ಜಾಕ್ವೆಲ್‌ ಮತ್ತು ಪಂಪ್‌ ಮನೆ ನಿರ್ಮಿಸಿ ಅದರಿಂದ ಐಗಳಿ ಕ್ರಾಸ್‌ ಹತ್ತಿರ ನಿರ್ಮಿಸಿರುವ ಶುದ್ಧೀಕರಣ ಘಟಕದ ಮೂಲಕ ನೀರು ಶುದ್ಧೀಕರಣಗೊಳಿಸಿ ಬ್ಯಾಲನ್ಸಿಂಗ್‌ ಟ್ಯಾಂಕ್‌ ಮತ್ತು ಸೆಂಟ್ಲಿಂಗ್ ಟ್ಯಾಂಕ್‌ಗೆ ಹರಿಸಲಾಗುತ್ತದೆ.

ನಂತರ ಇಲ್ಲಿಂದಲೇ ಎಲ್ಲ ಹಳ್ಳಿಗೂ ಕುಡಿಯಲು ನೀರು ಹರಿಸಲಾಗುತ್ತದೆ. ಈ ಯೋಜನೆಗೆ ಜಾಕ್ವೆಲ್‌ ಸಮೀಪ 250 ಕೆವಿಎ ಟ್ರಾನ್ಸ್‌ಫಾರ್ಮರ್‌ ಮೂಲಕ ನಿರಂತರ ವಿದ್ಯುತ್‌ ಸರಬರಾಜು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಪಂಪ್‌ಹೌಸ್‌ ಹತ್ತಿರ ಡಬ್ಲ್ಯುಟಿಪಿ 100 ಕೆವಿಎ ಟ್ರಾನ್ಸ್‌ಫಾರ್ಮರ್‌ ನಿರ್ಮಿಸಲಾಗಿದೆ.

ಆದರೂ ಇತ್ತೀಚಿನ ವರ್ಷಗಳಲ್ಲಿ ಇದರ ನಿರ್ವಹಣೆ ಹಳ್ಳ ಹಿಡಿದಿದೆ. ಮೊದಲು ಎರಡು ದಿನಕ್ಕೊಮ್ಮೆ ದೊರೆಯುತ್ತಿದ್ದ ನೀರು ವಾರಕ್ಕೊಮ್ಮೆ ನಂತರ 15 ದಿನಕ್ಕೊಮ್ಮೆ ಹೀಗೆ ತಿಂಗಳುಗಟ್ಟಲೇ ಬರುತ್ತಿದೆ. ಈ ಅವ್ಯವಸ್ಥೆ ವಿರುದ್ಧ ಯಾವೊಬ್ಬ ಜನಪ್ರತಿನಿಧಿಗಳು ಚಕಾರವೆತ್ತುತ್ತಿಲ್ಲ. ಹೀಗಾಗಿ ಸಾರ್ವಜನಿಕರ ಕೆಂಗಣ್ಣು ಅಧಿಕಾರಿಗಳು-ಜನಪ್ರತಿನಿಧಿಗಳ ಮೇಲೆ ನೆಟ್ಟಿದೆ.

ಜಾಕ್ವೆಲ್‌ ನೀರು ಪೂರೈಕೆಗೆ ತಾಂತ್ರಿಕ ತೊಂದರೆ ಇರುವುದಾಗಿ ಮೇಲಾಧಿಕಾರಿಗಳು ತಿಳಿಸಿದ್ದಾರೆ. ಕೆರೆ ನೀರು ಮಾತ್ರ ಪೂರೈಕೆಯಿಂದ ವಿಳಂಬವಾಗುತ್ತಿದೆ. ಜಾಕ್ವೆಲ್‌ ಆರಂಭವಾದ ತಕ್ಷಣದಿಂದ ನೀರಿನ ಸಮಸ್ಯೆ ಬಗೆಹರಿಸಲಾಗುವುದು.
ಬೀರಪ್ಪ ಕಡಗಂಚಿ, ಪಿಡಿಒ ತೆಲಸಂಗ

Advertisement

Udayavani is now on Telegram. Click here to join our channel and stay updated with the latest news.

Next