ಜಲ ವಿವಾದಗಳು ಭುಗಿಲೇಳುವುದೇ ಮಳೆ ಕೊರತೆಯ ಸಂದರ್ಭಗಳಲ್ಲಿ. ಅನಾವೃಷ್ಟಿಯ ವೇಳೆ ಪ್ರಾಧಿಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬ ಕುತೂಹಲವಿದೆ.
ನಿರೀಕ್ಷೆಯಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸಮಿತಿ ರಚನೆಗೊಂಡಿದೆ. ದಶಕಗಳ ಕಾಲ ನಡೆದ ಕಾವೇರಿ ಜಲ ವಿವಾದ ಸಂಬಂಧ ಸರ್ವೋಚ್ಚ ನ್ಯಾಯಾಲಯ 2018ರ ಫೆಬ್ರವರಿ 16ರಂದು ಅಂತಿಮ ತೀರ್ಪು ನೀಡಿತ್ತು. ಕಾವೇರಿ ನದಿ ನೀರು ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ಹೀಗೆ ನಾಲ್ಕು ರಾಜ್ಯಗಳ ನಡುವಿನ ಹಂಚಿಕೆಯಾಗುತ್ತಿದ್ದರೂ, ವಿವಾದದ ಕೇಂದ್ರ ಬಿಂದುವಾಗಿದ್ದ ರಾಜ್ಯಗಳು ಕರ್ನಾಟಕ ಹಾಗೂ ತಮಿಳುನಾಡು ಮಾತ್ರ. ಮಳೆ ಸಮೃದ್ಧವಾಗಿದ್ದ ವರ್ಷ ನೀರು ಹಂಚಿಕೆಗೆ ಯಾವುದೇ ಸಮಸ್ಯೆಯಾಗಿರಲಿಲ್ಲ.
ಅನಾವೃಷ್ಟಿಯಾದಾಗಲೆಲ್ಲ ಈ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿತ್ತು. ನದಿಯು ಯಾವುದೇ ಒಂದು ರಾಜ್ಯದ ಸ್ವತ್ತಲ್ಲ ಎಂದು ಸ್ಪಷ್ಟೋಕ್ತಿಯಲ್ಲಿ ಹೇಳಿದ ಸುಪ್ರೀಂ ಕೋರ್ಟ್ ನಾಲ್ಕು ರಾಜ್ಯಗಳಿಗೆ ಪ್ರತಿ ವರ್ಷ ಸಲ್ಲಬೇಕಾದ ನೀರಿನ ಪಾಲು ಕೂಡಾ ಮಾಡಿತ್ತು. ಕುಡಿಯುವ ನೀರಿನ ಸಲುವಾಗಿ ಹೆಚ್ಚುವರಿ 14.75 ಟಿಎಂಸಿ ಸಹಿತ ಕರ್ನಾಟಕಕ್ಕೆ ಒಟ್ಟಾರೆ 284.75 ಟಿಎಂಸಿ ನೀರು ಹಂಚಿಕೆಯಾಯಿತು. ತಮಿಳುನಾಡಿಗೆ ಬಿಳಿಗೊಂಡ್ಲು ಜಲಾಶಯದಿಂದ ಕರ್ನಾಟಕ 177.25 ಟಿಎಂಸಿ ನೀರು ಬಿಡಬೇಕೆಂದು ಆದೇಶಿಸಿತು. ಜತೆಗೆ ಕಾವೇರಿ ನದಿ ನೀರಿನ ಸಂಗ್ರಹ, ಹಂಚಿಕೆಯ ಮೇಲೆ ನಿಗಾ ಇಡಲು ಪ್ರಾಧಿಕಾರವೊಂದನ್ನು ರಚಿಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಇದೀಗ ಮೂರೂವರೆ ತಿಂಗಳ ಬಳಿಕ ಕೇಂದ್ರ ಸರಕಾರವು ಕಾವೇರಿ ಕೊಳ್ಳದ ನಿರ್ವಹಣಾ ಪ್ರಾಧಿಕಾರ ಹಾಗೂ ನಿಯಂತ್ರಣಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ. ಈ ಪ್ರಾಧಿಕಾರವು ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳಾದ ಹೇಮಾವತಿ, ಹಾರಂಗಿ, ಕೆಆರ್‌ಎಸ್, ಕಬಿನಿ, ಮೆಟ್ಟೂರು, ಭವಾನಿ ಸಾಗರ, ಅಮರಾವತಿ ಹಾಗೂ ಬಾಣಾಸುರಸಾಗರದ ಮೇಲೆ ನಿಯಂತ್ರಣ ಹೊಂದಲಿದೆ. ಪ್ರಾಧಿಕಾರವು ನೀರು ಹಂಚಿಕೆಯ ಮೇಲೆ ನಿಗಾ ಇಡಲಿದೆ ಹಾಗೂ ಆ ಕುರಿತು ತೀರ್ಮಾನ ತೆಗೆದುಕೊಳ್ಳಲಿದೆ. ಪ್ರಾಧಿಕಾರಕ್ಕೆ ಅಗತ್ಯ ಮಾಹಿತಿ ನೀಡುವ, ಜಲಾಶಯಗಳ ಮೇಲೆ ನಿಗಾ ಇರಿಸುವ ಕೆಲಸವನ್ನು ಸಮಿತಿ ಮಾಡಲಿದೆ. ಜೂನ್‌ನಿಂದ ಅಕ್ಟೋಬರ್ ತನಕ ಪ್ರತಿ 10 ದಿನಕ್ಕೊಮ್ಮೆ ಸಭೆ ಸೇರಿ ನೀರಿನ ಹಂಚಿಕೆ ಕುರಿತು ಪ್ರಾಧಿಕಾರ ಚರ್ಚಿಸಿ ನಿರ್ಧರಿಸಬೇಕಾಗಿರುತ್ತದೆ. ಪ್ರಾಧಿಕಾರ ಹಾಗೂ ಸಮಿತಿಗಳೆರಡ ರಲ್ಲೂ ನಾಲ್ಕೂ ರಾಜ್ಯಗಳ ಪ್ರಾತಿನಿಧ್ಯ ಇರಲಿದೆ.
ಜಲ ವಿವಾದಗಳು ಭುಗಿಲೇಳುವುದೇ ಮಳೆ ಕೊರತೆಯ ಸಂದರ್ಭಗಳಲ್ಲಿ. ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಕೊಟ್ಟಿದ್ದರೂ ಈ ಕುರಿತ ಗೊಂದಲ, ಆತಂಕ ನಿವಾರಣೆಯಾಗಿಲ್ಲ. ಆ ಜವಾಬ್ದಾರಿಯನ್ನು ನ್ಯಾಯಾಲಯವು ಪ್ರಾಧಿಕಾರದ ಮೇಲೆ ಹಾಕಿದೆ. ಅನಾವೃಷ್ಟಿಯ ವರ್ಷಗಳಲ್ಲಿ ಈ ಪ್ರಾಧಿಕಾರ ಯಾವ ರೀತಿ ತೀರ್ಮಾನ ಕೈಗೊಳ್ಳಲಿದೆ, ನೀರು ಹಂಚಿಕೆಯ ಸಂಕಷ್ಟ ಸೂತ್ರ ಹೇಗಿರಲಿದೆ ಎಂಬ ಕುತೂಹಲವಿದೆ. ನಮ್ಮ ರಾಜ್ಯದ ಅಣೆ ಕಟ್ಟೆಗಳ ಮೇಲಿನ ಹಿಡಿತ ಕೈತಪ್ಪಿದೆ ಎಂಬುದಾಗಿ ನಮ್ಮ ಕಾವೇರಿ ಕಣಿವೆ ಜಿಲ್ಲೆಗಳಲ್ಲಿ ಈಗಾಗಲೇ ಆತಂಕ ನಿರ್ಮಾಣವಾಗಿದೆ. ಈ ಭಾಗದ ರೈತರು ಇಚ್ಛಿಸುವ ಬೆಳೆ ಬೆಳೆಯುವ ಸ್ವಾತಂತ್ರ್ಯ ಕಳೆದುಕೊಳ್ಳಲಿದ್ದಾರೆಯೇ? ಬೆಳೆ ಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗದೇ ಹೋಗಬಹುದೇ ಎಂಬ ಸಂಶಯ ವ್ಯಕ್ತವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಹರಿದು ಹೋಗುವ ನದಿ ನೀರಿನ ಮೇಲೆ ರಾಜ್ಯವೊಂದು ಹಕ್ಕುಸ್ವಾಮ್ಯ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಾಗೆಂದು ನಮ್ಮ ರೈತರ ಸಾಂಪ್ರ ದಾಯಿಕ ಕೃಷಿ ಪದ್ಧತಿಯನ್ನು ಏಕಾಏಕಿಯಾಗಿ ಬದಲಾಯಿಸುವ ಸ್ಥಿತಿಯನ್ನೂ ನಿರ್ಮಿಸುವುದು ಸಾಧುವೂ ಅಲ್ಲ. ಪ್ರಾಧಿಕಾರವು ನೀರು ಹಂಚಿಕೆಯ ನಿರ್ಧಾರ ಕೈಗೊಳ್ಳುವಾಗ ರೈತರ ಭಾವನೆಗಳನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕಿದೆ. ಒಂದೊಮ್ಮೆ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ಪ್ರಾಧಿಕಾರ ನಿರ್ಣಯ ಕೈಗೊಂಡರೆ ಅದನ್ನು ಪ್ರಶ್ನಿಸುವ ಅವಕಾಶ ರಾಜ್ಯ ಸರಕಾರಕ್ಕಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಈಗಲೇ ಆತಂಕ, ಉದ್ವಿಗ್ನ ಬೇಡ. ಒಕ್ಕೂಟ ವ್ಯವಸ್ಥೆಯಡಿ ರಚನೆಯಾಗಿರುವ ಈ ಪ್ರಾಧಿಕಾರ ನ್ಯಾಯಸಮ್ಮತವಾಗಿ ನಿರ್ಧಾರ ಕೈಗೊಳ್ಳುತ್ತದೆ ಎಂದು ನಂಬಿಕೆ ಇಡೋಣ.