ಆಲಮಟ್ಟಿ: ಮುಳವಾಡ ಪೂರ್ವ ಮತ್ತು ಪಶ್ಚಿಮ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಮಸೂತಿ ಜಾಕ್‌ವೆಲ್‌ನಿಂದ ನೀರು ಹರಿಸಬೇಕೆಂದು ಆಗ್ರಹಿಸಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ರೈತರು ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಕೃಷ್ಣಾ ಭಾಗ್ಯ ಜಲ ನಿಗಮದ ಮುಳವಾಡ ಏತ ನೀರಾವರಿ ಯೋಜನೆಯ ವಿಭಾಗ 1 ಮಟ್ಟಿಹಾಳ ಕಚೇರಿಗೆ ರೈತರೊಂದಿಗೆ ತೆರಳಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಪ್ರಸಕ್ತ ವರ್ಷದ ಬಿತ್ತನೆ ಸಮಯದಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ಮುಳುಗಡೆ ಪ್ರದೇಶದ ನೀರಾವರಿ ಕ್ಷೇತ್ರದ ರೈತರು ವಿವಿಧ ಬೆಳೆಗಳಾದ ಗೋವಿನ ಜೋಳ, ತೊಗರಿ, ಸಜ್ಜೆ, ಅಲಸಂದಿ ಬೆಳೆಗಳನ್ನು ಬಿತ್ತಿದ್ದಾರೆ. ರೈತರ ಹಿತ ಕಾಪಾಡಲು ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು ಎಂದರು.
ರೈತರ ಜಮೀನಿಗೆ ನೀರೊದಗಿಸಲು ಹೆಚ್ಚಿನ ಪ್ರಮಾಣದಲ್ಲಿ ನೀರೆತ್ತುವ ಯಂತ್ರಗಳನ್ನು ಆರಂಭಿಸದಿದ್ದರೆ ಇದೇ ಆ. 5ರಿಂದ ಕಾರ್ಯ ನಿರ್ವಾಹಕ ಅಭಿಯಂತರ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರಸ್ತುತ ನಿರೀಕ್ಷಿತ ಪ್ರಮಾಣದ ಮುಂಗಾರು ಮಳೆಯಾಗದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ನೀರು ಹರಿಸಲು ಪ್ರಸ್ತುತ ಇರುವ ಎರಡು ಪಂಪ್‌ಗ್ಳಿಂದ ಕಾಲುವೆಗಳಿಗೆ ನಿರೀಕ್ಷಿಸಿದಷ್ಟು ನೀರು ಪೂರೈಕೆಯಾಗುತ್ತಿಲ್ಲ. ಪ್ರಸಕ್ತ ವರ್ಷ ಆಲಮಟ್ಟಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿದೆ. ಈ ಭಾಗದ ರೈತರ ಅನುಕೂಲಕ್ಕಾಗಿಯೇ ಈಗಾಗಲೆ ಮಸೂತಿ ಜಾಕ್‌ವೆಲ್‌ನಿಂದ ನೀರೆತ್ತಲು ನೂತನ ಯಂತ್ರಗಳನ್ನು ಅಳವಡಿಸಲಾಗಿದೆ.
ಪ್ರಸ್ತುತ ರೈತರ ಬೇಡಿಕೆಗೆ ಅನುಗುಣವಾಗಿ ಒಂದೆರಡು ಪಂಪ್‌ಗ್ಳನ್ನು ಶೀಘ್ರದಲ್ಲೆ ಪ್ರಾರಂಭಿಸಿ ಮೂರನೇ ಹಂತದ ಮುಳವಾಡ ಪೂರ್ವ ಹಾಗೂ ಪಶ್ಚಿಮ ಕಾಲುವೆಗಳಿಗೆ ಸಾಕಾಗುವಷ್ಟು ನೀರನ್ನು ಹರಿಸಬೇಕು. ಜಲಾಶಯಕ್ಕಾಗಿ ಮನೆ ಮಠ ಕಳೆದುಕೊಂಡ ಮುಳುಗಡೆ ಸಂತ್ರಸ್ತ ರೈತರಿಗೆ
ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು. ದುಂಡಪ್ಪ ಮನಗೂಳಿ, ಸಿದ್ದು ಕುಂಬಾರ, ಶಿವು ಪೂಜಾರಿ, ಹನುಮಂತ ಕುಂಬಾರ, ರಾಮಣ್ಣ ಕಮದಾರ, ಬಸಪ್ಪ ಬೆಲ್ಲದ ಸೇರಿದಂತೆ ನೂರಾರು ರೈತರು ಇದ್ದರು.