Advertisement

ಇಂದಿನಿಂದ ಜಲಾಮೃತ ಹೆಲ್ಪ್ಲೈನ್‌ನಿಂದ ನೀರು ಪೂರೈಕೆಯಿಲ್ಲ

02:38 PM May 03, 2019 | Suhan S |

ಬ್ಯಾಡಗಿ: ಜಲಾಮೃತ ಹೆಲ್ಪ್ಲೈನ್‌ ಮೂಲಕ ಸಾರ್ವಜನಿಕರಿಗೆ ಉಚಿತವಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುವುದನ್ನು ಮೇ 3 ರಿಂದ ಸ್ಥಗಿತಗೊಳಿಸುವುದಾಗಿ ಗುರುವಾರ ವಿಎಸ್‌ಎಸ್‌ ಬ್ಯಾಂಕ್‌ನಲ್ಲಿ ಜರುಗಿದ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಜಲಾಮೃತ ಹೆಲ್ಪ್ಲೈನ್‌ ಕಾರ್ಯವೈಖರಿಯನ್ನು ಸಾರ್ವಜನಿಕರು ಮೆಚ್ಚಿಕೊಂಡಿದ್ದರಲ್ಲದೇ, ತಮ್ಮ ಕೈಲಾದಷ್ಟು ತನು-ಮನ-ಧನ ಸಹಾಯ ಸಹಕಾರ ಎಲ್ಲವೂ ಸಿಕ್ಕಿತ್ತು. ಜನರಿಗೆ ನೀರು ಪೂರೈಸುವ ವಿಚಾರದಲ್ಲಿ ಒಂದು ತಂಡವಾಗಿ ಕೆಲಸ ನಿರ್ವಹಿಸಿ ಶಕ್ತಿ ಮೀರಿ ಪ್ರಯತ್ನ ಮಾಡುವ ಮೂಲಕ ನೀರಿನ ಸಮಸ್ಯೆಗೆ ಸ್ಪಂದಿಸಿದ್ದೇವೆ ಎಂದರು.

ಗಂಗಣ್ಣ ಎಲಿ ಮಾತನಾಡಿ, ಜಲಾಮೃತ ಹೆಲ್ಪ್ಲೈನ್‌ ಮೂಲಕ ನೀರು ವಿತರಿಸುವ ಮೂಲಕ ಜಿಲ್ಲಾಡಳಿತ ಮತ್ತು ತಾಲೂಕಾಡಳಿತವನ್ನು ಎಚ್ಚರಿಸುವುದು ಸೇರಿದಂತೆ ಅವರ ಮೇಲಿರುವ ಭಾರವನ್ನು ಸ್ವಲ್ಪಮಟ್ಟಿಗೆ ಇಳಿಸಿದ್ದೇವೆ. ಚುನಾವಣೆ ಕೆಲಸದಲ್ಲಿ ಮಗ್ನರಾಗಿದ್ದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಾರ್ವಜನಿಕರು ಅನುಭವಿಸುತ್ತಿದ್ದ ತೊಂದರೆ ಬಗ್ಗೆ ಗಮನ ಹರಿಸಿರಲಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳುವ ಮೂಲಕ ಜನರ ನೀರಿನ ಸಮಸ್ಯೆಗ ಸ್ಪಂದಿಸಿದರೇ ಸಾಕು ಎಂದರು.

ರೈತ ಸಂಘದ ಉಪಾಧ್ಯಕ್ಷ ಕಿರಣ ಗಡಿಗೋಳ ಮಾತನಾಡಿ, ರಜಾ ದಿನಗಳು ಬಂತೆಂದರೆ ಅಧಿಕಾರಿಗಳು ಸಾರ್ವಜನಿಕರಿಗೆ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಆ ಕಾರಣಕ್ಕಾಗಿಯೇ, ತಾಲೂಕಾಡಳಿತ ಸೇರಿದಂತೆ ಗ್ರಾಮೀಣ ನೀರು ಸರಬರಾಜು ಜಿಪಂ ಇಂಜಿನಿಯರಿಂಗ್‌ ಉಪವಿಭಾಗ ಹಾಗೂ ಪಿಡಿಒಗಳು ಮುತುವರ್ಜಿ ವಹಿಸುವ ಮೂಲಕ ವಾರದ ಏಳು ದಿನಗಳು ನಿರಂತರವಾಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವಂತೆ ಸಭೆಯಲ್ಲಿ ಆಗ್ರಹಿಸಿದರು.

ವಕೀಲ ಸುರೇಶ ಛಲವಾದಿ ಮಾತನಾಡಿ, ತಾಲೂಕಿನಲ್ಲಿ ಒಬ್ಬ ಕ್ರಿಯಾಶೀಲ ತಹಶೀಲ್ದಾರ್‌ ಅವಶ್ಯಕತೆಯಿದೆ. ಈಗಿರುವ ತಹಶೀಲ್ದಾರ್‌ ಹುದ್ದೆಗೆ ತಕ್ಕಂತೆ ಕೆಲಸ ನಿರ್ವಹಿಸುತ್ತಿಲ್ಲ, ಜನರನ್ನೇ ಮಾತನಾಡಿಸಿದ ಇಂತಹವರನ್ನು ಕೂಡಲೇ ಇಲ್ಲಿಂದ ಎತ್ತಂಗಡಿ ಮಾಡಬೇಕು. ಮುಖ್ಯರಸ್ತೆ ಅಗಲೀಕರಣದ ಬಗ್ಗೆ ಅಧಿಕಾರಿಗಳ್ಯಾರೂ ಚಕಾರ ಎತ್ತುತ್ತಿಲ್ಲ. ಇಂತಹವರು ಇದ್ದೂ ಇಲ್ಲದಂತಾಗಿದೆ. ಕೆಳ ವರ್ಗದ ನೌಕರರ ಮುಖವನ್ನು ನೋಡಿ ಆಡಳಿತ ಇಂತಹ ತಹಶೀಲ್ದಾರ್‌ ನಮಗೆ ಅವಶ್ಯಕತೆಯಿಲ್ಲ ಕೂಡಲೇ ಅಗಲೀಕರಣಕ್ಕೆ ಅವಶ್ಯವಿರುವ ಎಲ್ಲ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.

Advertisement

ರೈತ ಮುಖಂಡ ಚಿಕ್ಕಪ್ಪ ಛತ್ರದ ಮಾತನಾಡಿ, ಇನ್ನೂ 2 ತಿಂಗಳು ಕಾಲ ಭೀಕರ ನೀರಿನ ಸಮಸ್ಯೆಯನ್ನು ತಾಲೂಕಿನ ಜನರು ಎದುರಿಸಬೇಕಾಗುತ್ತದೆ. ಯಾವ್ಯಾವ ಗ್ರಾಮಗಳಲ್ಲಿ ಸಮಸ್ಯೆ ಇದೆ ಎಂಬುದೂ ಕೂಡ ಸ್ಥಳೀಯ ತಹಶೀಲ್ದಾರರು ತಿಳಿದುಕೊಂಡಿಲ್ಲ. ಯಾವುದೇ ಗ್ರಾಮಕ್ಕೆ ಭೇಟಿ ನೀಡಿ ತಿಳಿದುಕೊಳ್ಳುವಂತಹ ಪ್ರಯತ್ನವನ್ನೂ ಮಾಡಿಲ್ಲ, ಕೂಡಲೇ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿಸುವಂತೆ ಆಗ್ರಹಿಸಿದರು.

ಮಲ್ಲೇಶಪ್ಪ ಡಂಬಳ, ಪಾಂಡು ಸುತಾರ, ಬಸವರಾಜ ಬಡ್ಡಿಯವರ, ಮಲ್ಲಪ್ಪ ಕೊಪ್ಪದ, ಸಂತೋಷ ಬಡ್ಡಿಯವರ, ಚಂದ್ರು ದೇಸಾಯಿ, ಬಸವರಾಜ ಕುಮ್ಮೂರ, ನಾಗಪ್ಪ, ಸಪ್ಪಣ್ಣನವರ, ಷಣ್ಮುಕಪ್ಪ ಹುರಕಡ್ಲಿ, ಶಂಕರ ಮರಗಾಲ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next