Advertisement

ನೀರು ಇಂಗಲು ಬಿಡಲ್ಲ ಇಟ್ಟಿಗೆ ಹೊಂಡ

12:26 PM Nov 18, 2018 | |

ಬೆಂಗಳೂರು: ಮಳೆ ನೀರು ಸಂಗ್ರಹಿಸಿ ಕೃಷಿಗೆ ಬಳಸಲು ಕೃಷಿ ಹೊಂಡಗಳ ನಿರ್ಮಾಣಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದರೂ, ಹೊಂಡಗಳಲ್ಲಿ ದೀರ್ಘ‌ಕಾಲ ನೀರು ಹಿಡಿದಿಡುವುದೇ ದೊಡ್ಡ ಸವಾಲು. ಇದೀಗ ಜಿಕೆವಿಕೆ ವಿಜ್ಞಾನಿಗಳು ಒಂದು ಹಂಗಾಮು ಮುಗಿಯುವವರೆಗೂ, ನೀರು ಸಂಗ್ರಹಿಸಿಡುವ ಪದ್ಧತಿಯನ್ನು ಪರಿಚಯಿಸಿದ್ದಾರೆ.

Advertisement

ರೈತರು ತಾವು ನಿರ್ಮಿಸುತ್ತಿರುವ ಹೊಂಡಗಳಿಗೆ ಪ್ಲಾಸ್ಟಿಕ್‌ ಟಾರ್ಪಲಿನ್‌ ಹಾಸಿ, ನಂತರದಲ್ಲಿ ಹೊಂಡದ ನೆಲ ಹಾಗೂ ನಾಲ್ಕೂ ಕಡೆಗಳಲ್ಲಿನ ಗೋಡೆಗಳಿಗೆ ಇಟ್ಟಿಗೆಗಳನ್ನು ಇರಿಸಿ ಬೆಡ್‌ ನಿರ್ಮಿಸುವುದರಿಂದ ನೀರು ಮೂರು ತಿಂಗಳು ಹೊಂಡದಲ್ಲಿಯೇ ಉಳಿಯಲಿದೆ. ಇದರಿಂದಾಗಿ ಸಣ್ಣ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುತ್ತಾರೆ ವಿಜ್ಞಾನಿಗಳು.

ಇತ್ತೀಚಿನ ದಿನಗಳಲ್ಲಿ ಮಳೆ ನೀರು ಬೇರೆ ಕಡೆಗೆ ಹರಿದು ಹೋಗುವುದನ್ನು ತಡೆಯುವುದು ಹಾಗೂ ಕೊಳವೆ ಬಾವಿಯಲ್ಲಿ ನೀರು ಒಂದೆಡೆ ಶೇಖರಿಸಿ ಬೆಳೆಗಳಿಗೆ ಆಯಿಸಲು ಕೃಷಿ ಹೊಂಡಗಳು ಹೆಚ್ಚು ಅನುಕೂಲವಾಗಿವೆ. ಆ ಹಿನ್ನೆಲೆಯಲ್ಲಿ ಹೊಂಡಗಳ ಸಂಖ್ಯೆ ಹೆಚ್ಚುತ್ತಿದ್ದು, ಸರ್ಕಾರದಿಂದ ಸಬ್ಸಿಡಿ ಸೌಲಭ್ಯ ಸಹ ದೊರೆಯುತ್ತಿರುವುದು ಹೊಂಡಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

ಸದ್ಯ ರೈತರು ಕೃಷಿ ಇಲಾಖೆ ನಿಗದಿಪಡಿಸಿರುವ ಅಳತೆಯಂತೆ ಹೊಂಡಗಳನ್ನು ನಿರ್ಮಿಸುತ್ತಿದ್ದು, ನಂತರದಲ್ಲಿ ನೀರು ಇಂಗದಂತೆ ಎಲ್‌ಡಿಪಿಇ ಟಾರ್ಪಲ್‌ಗ‌ಳನ್ನು ಹಾಸುತ್ತಾರೆ. ಈ ಹೊದಿಕೆಗಳು ನೀರನ್ನು ಒಂದು ತಿಂಗಳ ಕಾಲ ಹಿಡಿದಿಟ್ಟುಕೊಳ್ಳುತ್ತವೆ. ಆದರೆ, ಜಿಕೆವಿಕೆ ವಿಜ್ಞಾನಿಗಳು ಪರಿಚಯಿಸಿರುವ ಪದ್ಧತಿ ಅಳವಡಿಸಿಕೊಂಡರೆ ಹೊಂಡದಲ್ಲಿ ನೀರು ಕನಿಷ್ಠ ಮೂರು ತಿಂಗಳು ಉಳಿಯುತ್ತದೆ.

ಜಿಕೆವಿಕೆಯ ಖುಷ್ಕಿ ಬೇಸಾಯ ಪ್ರಯೋಜನೆ ವಿಭಾಗದ ವಿಜ್ಞಾನಿಗಳು ಒಟ್ಟು ಐದು ಮಾದರಿಯ ಹೊಂಡಗಳನ್ನು ನಿರ್ಮಿಸಿ ಪರೀಕ್ಷೆ ನಡೆಸಿದ್ದಾರೆ. ಅದರಂತೆ ಎಲ್‌ಡಿಪಿಇ ಟಾರ್ಪಲ್‌ ಮೇಲೆ ಇಟ್ಟಿಗೆಯಿಂದ ಬೆಡ್‌ ನಿರ್ಮಿಸುವುದರಿಂದ ಹೊಂಡದಲ್ಲಿ ನೀರು ಹೆಚ್ಚು ದಿನ ಉಳಿಯುವುದು ಕಂಡುಬಂದಿದೆ. ಆ ಹಿನ್ನೆಲೆಯಲ್ಲಿ ಕೃಷಿ ಮೇಳಕ್ಕೆ ಭೇಟಿ ನೀಡುವ ರೈತರಿಗೆ ಈ ರೀತಿಯ ಹೊಂಡ ನಿರ್ಮಿಸಿಕೊಳ್ಳುವಂತೆ ಶಿಫಾರಸು ಮಾಡಲಾಗುತ್ತಿದೆ.

Advertisement

ಸಾಂಪ್ರದಾಯಿಕ ಹೊಂಡದ ನೂನ್ಯತೆ: ರೈತರು ಕೃಷಿಹೊಂಡ ನಿರ್ಮಿಸಿದ ಬಳಿಕ ಎಲ್‌ಡಿಪಿಇ ಟಾರ್ಪಲ್‌ ಹಾಸುತ್ತಿದ್ದು, ಇದಕ್ಕೆ ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತಿದೆ. ಆದರೆ, ಟಾರ್ಪಲ್‌ಗ‌ಳು ಉತ್ತಮ ಗುಣಮಟ್ಟದಿಂದ ಕೂಡಿದ್ದರೂ ಇಲಿಗಳು, ನಾಯಿಗಳು ಕಚ್ಚುವುದರಿಂದ ಅವು ಕಿತ್ತುಬರುತ್ತವೆ ಅಥವಾ ತೂತಾಗುತ್ತವೆ. ಇದರಿಂದಾಗಿ ನೀರು ಪೋಲಾಗಲಿದ್ದು, ಹೊಸ ಟಾರ್ಪಲ್‌ ಹಾಕಬೇಕಾಗುತ್ತದೆ.

ಹೊಂಡ ನಿರ್ಮಾಣ ಹೇಗೆ?: ರೈತರು ಕೃಷಿ ಇಲಾಖೆ ನಿಗದಿಪಡಿಸಿದ ಅಳತೆಯಂತೆ ಮೊದಲು ಹೊಂಡ ನಿರ್ಮಿಸಿಬೇಕು. ನಂತರ ಸರ್ಕಾರದಿಂದ ಸಬ್ಸಿಡಿ ಬೆಲೆಯಲ್ಲಿ ದೊರೆಯುವ ಎಲ್‌ಡಿಪಿಇ ಟಾರ್ಪಲ್‌ ಅನ್ನು ಹೊಂಡಕ್ಕೆ ಹಾಸಿ, ಅದರ ಮೇಲೆ 8 ಭಾಗ ಮಣ್ಣು ಹಾಗೂ 1 ಭಾಗ ಸಿಮೆಂಟ್‌ ಮಿಶ್ರಣ ಹಾಕಬೇಕು. ಅದರ ಮೇಲೆ ಇಟ್ಟಿಗೆಗಳನ್ನು ಜೋಡಿಸಬೇಕು.

ನಾಲ್ಕೂ ಕಡೆ ಇಟ್ಟಿಗಳನ್ನು ಜೋಡಿಸಿ, ಇಟ್ಟಿಗೆಗಳ ಸಂದಿಗೆ ಮಣ್ಣು ಹಾಗೂ ಸಿಮೆಂಟ್‌ ಮಿಶ್ರಣವನ್ನು ಲೇಪನ ಮಾಡಬೇಕು. ಇದರಿಂದ ಕನಿಷ್ಠ ಮೂರು ತಿಂಗಳು ನೀರು ಹೊಂಡದಲ್ಲಿರುತ್ತದೆ. ಈ ಹೊಂಡಗಳು 30ರಿಂದ 40 ವರ್ಷ ಬಾಳಿಕೆ ಬರುತ್ತದೆ ಎಂದು ವಿಜ್ಞಾನಿ ಡಾ.ಕೆ.ದೇವರಾಜ ಅವರು ಮಾಹಿತಿ ನೀಡಿದರು.

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next