Advertisement

ಭವಿಷ್ಯದ ಮಂಗಳೂರಿಗೆ “ಮಳವೂರು ಡ್ಯಾಂ’ನಿಂದ ನೀರು!

02:42 PM Feb 19, 2024 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ ಭವಿಷ್ಯದಲ್ಲಿ ನೀರಿನ ಬೇಡಿಕೆ ಏರಿಕೆಯಾಗುವ ಕಾರಣದಿಂದ ನೇತ್ರಾವತಿ ನದಿ (ತುಂಬೆ ಡ್ಯಾಂ) ನೀರಿನ ಜತೆಗೆ ಫಲ್ಗುಣಿ ನದಿಯ (ಮಳವೂರು ಡ್ಯಾಂ) ನೀರನ್ನು ಕೂಡ ಬಳಕೆ ಮಾಡುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ಇದೀಗ ಆರಂಭವಾಗಿದೆ.

Advertisement

ಮಳವೂರಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಡ್ಯಾಂನಿಂದ ಸದ್ಯ ಹಲವು ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದೆ ಇಲ್ಲಿನ ನೀರನ್ನು ಅಗತ್ಯಕ್ಕೆ ಅನುಗುಣವಾಗಿ ಮಂಗಳೂರಿಗೂ ಬಳಸುವುದು ಚರ್ಚೆಯ ಮೂಲ ಆಶಯ. ಇದು ಸಾಧ್ಯವಾದರೆ ಮರಕಡ, ಕುಂಜತ್ತಬೈಲ್‌, ಕಾವೂರು, ಪಚ್ಚನಾಡಿ, ತಿರುವೈಲ್‌, ಕುಲಶೇಖರ ಸಹಿತ ವಿವಿಧ ವಾರ್ಡ್‌ಗಳ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಫಲ್ಗುಣಿಯಿಂದ ನೀಡಬಹುದಾಗಿದೆ.

ಇತ್ತೀಚೆಗೆ ನಗರದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಳವೂರು ಡ್ಯಾಂನ
ನೀರಿನ ಬಳಕೆ ಬಗ್ಗೆ ಪ್ರಸ್ತಾವ ಬಂದಿತ್ತು. ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಸಭೆಯಲ್ಲಿ ಮಾತನಾಡಿ, “ಜಲಜೀವನ್‌ ಮಿಷನ್‌ ಅಡಿ ಅಡ್ಯಾರು ಗ್ರಾಮದಲ್ಲಿ ಮಂಗಳೂರಿಗೆ ಬರುವ ನೀರನ್ನೇ ಪಡೆಯಲಾಗುತ್ತಿದೆ. ಇದರಿಂದ ನಗರದ ನೀರು ಪೂರೈಕೆಗೆ ಸಮಸ್ಯೆಯಾಗಿದೆ’ ಎಂದಿದ್ದರು. ಆಗ ಪ್ರತಿಕ್ರಿಯೆ ನೀಡಿದ್ದ ನಳಿನ್‌ ಕುಮಾರ್‌ ಕಟೀಲು ಅವರು “ಇದಕ್ಕೆ ಬದಲಾಗಿ ಮಳವೂರು ಡ್ಯಾಂ ನೀರನ್ನು ಮಂಗಳೂರಿಗೆ ನೀಡುವುದು ಸಾಧ್ಯವೇ? ಎಂದು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಸದ್ಯ ಮಳವೂರು ಡ್ಯಾಂ ಪಕ್ಕದಲ್ಲಿ ಗ್ರಾಮಾಂತರ ಭಾಗಕ್ಕೆ ನೀರು ಸರಬರಾಜು ಮಾಡುವ ನೀರು ಶುದ್ಧೀಕರಣ ಘಟಕ ವನ್ನು ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ವಿಭಾಗದ ವತಿಯಿಂದ ನಿರ್ವಹಿ ಸಲಾಗುತ್ತಿದೆ. 5 ಎಂಎಲ್‌ಡಿ ಸಾಮರ್ಥ್ಯ ಇದಕ್ಕಿದೆ.

ಅಧಿಕ ನೀರಿದ್ದರೆ ಹೊಸ ನೀರು ಶುದ್ಧೀಕರಣ ಘಟಕ ನಿರ್ಮಿಸಬೇಕಿದೆ. ನಗರ ವ್ಯಾಪ್ತಿಗೆ ಘಟಕ ನಿರ್ಮಾಣವು ಗ್ರಾಮೀಣ ಕುಡಿಯುವ ನೀರು ವಿಭಾಗಕ್ಕೆ ಸಂಬಂಧಿಸಿದ್ದಲ್ಲ. ಅದನ್ನು ನಗರ ಕೇಂದ್ರ ದವರೇ ಮಾಡಬೇಕಿದೆ.

ಆಗಬೇಕಾದದ್ದು ಏನು?
ಮಳವೂರು ಡ್ಯಾಂನಲ್ಲಿ ನೀರಿನ ಲಭ್ಯತೆ ಹಾಗೂ ಒಳಹರಿವು ಪ್ರಮಾಣದ ಸ್ಥೂಲ ಅವಲೋಕನ ಮೊದಲು ಮಾಡಬೇಕಿದೆ. ಈಗ ಸರಬರಾಜು ಮಾಡುವ ನೀರು, ಮುಂದೆ ಪಾಲಿಕೆ ವ್ಯಾಪ್ತಿಗೆ ನೀಡುವುದಾದರೆ ಲಭ್ಯವಿರಬಹುದಾದ ನೀರಿನ ಪ್ರಮಾಣದ ಪರಿಶೀಲನೆ ಆಗಬೇಕಿದೆ. ಜತೆಗೆ ಡ್ಯಾಂ ಪಕ್ಕದಲ್ಲಿ ಪಾಲಿಕೆ ವತಿಯಿಂದ ಸುಸಜ್ಜಿತ ನೀರು ಶುದ್ಧೀಕರಣ ಘಟಕ ನಿರ್ಮಾಣವಾಗಬೇಕು, ಡ್ಯಾಂ ಪಕ್ಕದಿಂದ ಪಚ್ಚನಾಡಿ ಸಹಿತ ವಿವಿಧ ಭಾಗಕ್ಕೆ ನೀರು ಸರಬರಾಜು ಮಾಡುವುದಾದರೆ ಪೈಪ್‌ಲೈನ್‌ ವ್ಯವಸ್ಥೆ ಆಗಬೇಕು.

Advertisement

ಮಂಗಳೂರಿಗೆ “ಪರ್ಯಾಯ’ ಅಗತ್ಯ
ಮಂಗಳೂರು ನಗರಕ್ಕೆ ನೇತ್ರಾವತಿ ನದಿ ಬಿಟ್ಟರೆ ಕುಡಿಯುವ ನೀರಿಗೆ ಪ್ರಸ್ತುತ ಪರ್ಯಾಯ ಮೂಲಗಳೇ ಇಲ್ಲ. ತುಂಬೆ ಡ್ಯಾಂನಿಂದ ಉಳ್ಳಾಲ, ಮೂಲ್ಕಿವರೆಗೆ ನೀರು ಸರಬರಾಜಾ ಗುತ್ತಿದೆ. ಮಂಗಳೂರು ವಿ.ವಿ., ಮುಡಿಪು ಇನ್ಫೋಸಿಸ್‌ಗೆ, ಐಟಿ ಎಸ್‌ಇಝಡ್‌ಗೆ ನೇತ್ರಾವತಿ ನದಿ ಕುಡಿಯುವ ನೀರಿನ ಮೂಲ. ನೇತ್ರಾವತಿ ನದಿಯ ಮೇಲಿರುವ ಒತ್ತಡ, ಪ್ರಸ್ತುತ ಮಳೆಚಕ್ರದಲ್ಲಾಗುತ್ತಿರುವ ವೈಪರೀತ್ಯ ನಗರಕ್ಕೆ ಕುಡಿಯುವ ನೀರಿಗೆ ಪರ್ಯಾಯ ಮೂಲದ ವ್ಯವಸ್ಥೆಯ ಆವಶ್ಯಕತೆಯನ್ನು ಹೆಚ್ಚಿಸಿದೆ. ಪ್ರಸ್ತುತ ತುಂಬೆಯಿಂದ ದಿನವೊಂದಕ್ಕೆ 160 ಎಂಎಲ್‌ಡಿ ನೀರು ನಗರಕ್ಕೆ ಸರಬರಾಜು ಆಗುತ್ತದೆ. ಉಳ್ಳಾಲ, ಸುರತ್ಕಲ್‌, ಮೂಲ್ಕಿಗೆ ಇಲ್ಲಿಂದ ನೀರು ಸರಬರಾಜು ಆಗುತ್ತದೆ. ಅಡ್ಯಾರ್‌ನಲ್ಲಿ ಹೊಸ ಡ್ಯಾಂನಿಂದ ಮುಂದೆ 125 ಎಂಎಲ್‌ಡಿ ನಗರಕ್ಕೆ ಪಡೆಯಲು ಅವಕಾಶ ಇದ್ದರೂ ಅದೂ ಜಾರಿಗೆ ಬರಲು ಹಲವು ಸಮಯ ಬೇಕಾಗಬಹುದು.

ಸಾಧ್ಯತೆ ಪರಿಶೀಲನೆ
ಭವಿಷ್ಯದ ದೃಷ್ಟಿಯಿಂದ ಮಂಗಳೂರಿಗೆ ಹೆಚ್ಚುವರಿ ನೀರು ಅಗತ್ಯವಿದೆ. ತುಂಬೆ ಡ್ಯಾಂ ಹಾಗೂ ಅಡ್ಯಾರ್‌ ಡ್ಯಾಂನ ನೀರಿನ ಜತೆಗೆ
ಮಳವೂರು ಡ್ಯಾಂನ ನೀರನ್ನು ಕೂಡ ಬಳಸಲು ಅವಕಾಶ ಇದೆ. ಇದರ ಸಾಧ್ಯಾಸಾಧ್ಯತೆ ಬಗ್ಗೆ ಪರಿಶೀಲಿಸಲಾಗುವುದು.
ಸುಧೀರ್‌ ಶೆಟ್ಟಿ ಕಣ್ಣೂರು,
ಮೇಯರ್‌ ಮಂಗಳೂರು

14 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು

ಮಳವೂರು ಬಹುಗ್ರಾಮ ಕುಡಿಯುವ ನೀರು ಯೋಜನೆ 2017ರಲ್ಲಿ ಒಟ್ಟು 42.50 ಕೋ.ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಿದೆ. ಒಟ್ಟು 14 ಗ್ರಾಮಗಳ 8 ಗ್ರಾ.ಪಂ.ನ ಸುಮಾರು 56,000 ಜನರು ಇದರ ಲಾಭ ಪಡೆಯುತ್ತಿದ್ದಾರೆ. ಗುರುಪುರ
ನದಿಗೆ(ಫಲ್ಗುಣಿ)ಅಡ್ಡಲಾಗಿ 199 ಮೀಟರ್‌ ಉದ್ದದ ಕಿಂಡಿ ಅಣೆಕಟ್ಟು ಹಾಗೂ 79 ಆರ್‌.ಸಿ.ಸಿ. ಕಂಬಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 1.25 ಮಿಲಿಯನ್‌ ಘನ ಮೀಟರ್‌ನಷ್ಟು ನೀರು ಸಂಗ್ರಹಿಸಬಹುದಾಗಿದೆ. ಕಿಂಡಿ ಅಣೆಕಟ್ಟಿನಿಂದ 400 ಮೀಟರ್‌ ಮೇಲ್ಭಾಗದಲ್ಲಿ ಜಾಕ್‌ವೆಲ್‌ ನಿರ್ಮಾಣ ಆಗಿದೆ. ಅದರಿಂದ 2700 ಮೀಟರ್‌ ಉದ್ದದ ಪೈಪನ್ನು ಅಳವಡಿಸಿ ನದಿ ನೀರನ್ನು ಕೆಂಜಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಿರುವ ಶುದ್ಧೀಕರಣ ಘಟಕಕ್ಕೆ ಸರಬರಾಜು ಮಾಡಿ ಅಲ್ಲಿ ಶುದ್ಧೀಕರಿಸಲಾಗುತ್ತದೆ. ಆ ಬಳಿಕ ನೀರನ್ನು 10.15 ಲಕ್ಷ ಲೀಟರ್‌ ಸಾಮರ್ಥ್ಯದ ಸಂಪು ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಬಜಪೆ ತಾರಿಕಂಬÛ (2.50 ಲಕ್ಷ ಲೀಟರ್‌) ಹಾಗೂ ಸಿದ್ದಾರ್ಥನಗರದಲ್ಲಿ (3 ಲಕ್ಷ ಲೀಟರ್‌) ನಿರ್ಮಿಸಿದ ಮೇಲ್ಮಟ್ಟದ ತೊಟ್ಟಿಗಳಿಗೆ ಪಂಪ್‌ ಮುಖಾಂತರ ಸರಬರಾಜು ಮಾಡಿ ಸಂಗ್ರಹಿಸಲಾಗುತ್ತದೆ.

ಅನಂತರ 2 ವಲಯಗಳನ್ನು ಗುರುತಿಸಿ ಗ್ರಾವಿಟಿ ಮುಖಾಂತರ ನೀರು ಸರಬರಾಜು ಮಾಡಲಾಗುತ್ತದೆ. 5 ಎಂಎಲ್‌ಡಿ ನೀರನ್ನು ಸಂಸ್ಕರಿಸಿ, ಪ್ರತಿ ದಿನ ಪೂರೈಕೆ ಮಾಡಲಾಗುತ್ತಿದೆ. ಡ್ಯಾಂನಲ್ಲಿ 3 ಮೀ. ನೀರು ನಿಲುಗಡೆ ಮಾಡಲಾಗುತ್ತಿದೆ.

*ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next