Advertisement

ಅಘನಾಶಿನಿಯಿಂದ ಬೆಂಗಳೂರಿಗೆ ನೀರು ಹರಿಸಿ: ಟಿಬಿಜೆ

11:16 PM Jun 25, 2019 | Team Udayavani |

ತುಮಕೂರು: ಅಘನಾಶಿನಿ ನದಿ ಕೊಳ್ಳದಿಂದ ಹರಿದು ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ನೀರನ್ನು ಒಂದೆಡೆ ಸಂಗ್ರಹಿಸಿ, ಮಧ್ಯ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ, ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸುವುದಾಗಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮಘಟ್ಟದಲ್ಲಿ ಹುಟ್ಟಿ ಪಶ್ಚಿಮದ ಕಡೆಗೆ ಹರಿಯುವ ನದಿಗಳಾದ ಅಘನಾಶಿನಿ, ಕಾಳಿ, ಬೇಡ್ತಿ, ನೇತ್ರಾವತಿ, ಶರಾವತಿ ಮತ್ತು ಪೆರಿಯಾರ್‌ ನದಿಗಳ ನೀರನ್ನು ಒಂದೆಡೆ ಸಂಗ್ರಹಿಸಬೇಕು. ಹೆಚ್ಚಿರುವ ನದಿಗಳ ನೀರನ್ನು ಕೊರತೆಯಿರುವ ನದಿಗಳಿಗೆ ಹರಿಸಿದರೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಆಗುವ ಅನಾಹುತ ತಡೆಯಬಹುದು ಎಂದರು.

ಪಶ್ಚಿಮಘಟ್ಟ ನೀರಾವರಿ ಯೋಜನೆಗೆ 10 ರಿಂದ 12 ಸಾವಿರ ಕೋಟಿ ರೂ.ಖರ್ಚಾಗಬಹುದು. ಇದರಿಂದ ಯಾವುದೇ ಪರಿಸರ ಹಾನಿ ಉಂಟಾಗುವುದಿಲ್ಲ. ಈ ನೀರನ್ನು ಬೆಂಗಳೂರು ಮತ್ತು ಮಾರ್ಗ ಮಧ್ಯದಲ್ಲಿ ಬರುವ ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರಿಗೆ ಬಳಸಿಕೊಳ್ಳಬಹುದಾಗಿದೆ.

1,895 ಚದರ ಕಿ.ಮೀ.ವಿಸ್ತೀರ್ಣ ಹೊಂದಿರುವ ಅಘನಾಶಿನಿ ನದಿಯಲ್ಲಿ ಮಳೆಗಾಲದಲ್ಲಿ ಸರಿ ಸುಮಾರು 100 ರಿಂದ 120 ಟಿಎಂಸಿಯಷ್ಟು ನೀರಿನ ಲಭ್ಯತೆ ಇದೆ. ರಾಜ್ಯ ಸರ್ಕಾರ ಹೇಮಾಗ್ನಿ ನದಿಗೆ ಜಲಾಶಯ ನಿರ್ಮಿಸಿ, 50 ಟಿಎಂಸಿ ನೀರನ್ನು ಉಪಯೋಗಿಸಿ, ವಿದ್ಯುತ್‌ ಉತ್ಪಾದನೆಗೆ ಮುಂದಾಗಿದೆ.

ಇಲ್ಲಿಂದ ಪೈಪ್‌ ಮೂಲಕ ನೀರನ್ನು ಲಿಫ್ಟ್ ಮಾಡಿ ಸಿದ್ದಾಪುರ, ಸಾಗರ ತಾಲೂಕುಗಳ ಮೂಲಕ ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮೂಲಕ ಹಟ್ಟಿ ಮೂಡುಗೆರೆ ಗ್ರಾಮದ ವೇದಾವತಿ ಪಾತ್ರಕ್ಕೆ ಹರಿಸಿ, ವಾಣಿವಿಲಾಸ ಸಾಗರಕ್ಕೆ ತರಬಹುದಾಗಿದೆ.

Advertisement

ವೇದಾವತಿ ನದಿಯ ಮಟ್ಟ 750 ಮೀ.ಆಗಿದ್ದು, ಅಲ್ಲಿಂದ 280 ಮೀ.ಗೆ ಲಿಫ್ಟ್ ಮಾಡಬಹುದು. ವಾಣಿವಿಲಾಸದಲ್ಲಿ 28 ರಿಂದ 30 ಟಿಎಂಸಿ ನೀರನ್ನು ಶೇಖರಣೆ ಮಾಡಬಹುದು. ಅಲ್ಲಿಂದ ಚಿಕ್ಕನಾಯಕನಹಳ್ಳಿಯ ಬೋರನಕಣಿವೆ ಜಲಾಶಯಕ್ಕೆ ನೀರನ್ನು ಲಿಫ್ಟ್ ಮಾಡಿದರೆ ಸುಮಾರು 3 ಟಿಎಂಸಿ ನೀರು ಶೇಖರಣೆ ಮಾಡಬಹುದು.

ಅಲ್ಲಿಂದ ಗಾಯತ್ರಿ ಜಲಾಶಯ, ತಿಮ್ಮನಹಳ್ಳಿ, ಗಂಟೇನಹಳ್ಳಿ, ಚೇಳೂರು, ಕೋರಾ, ಕ್ಯಾತ್ಸಂದ್ರ, ದಾಬಸ್‌ಪೇಟೆ ಮೂಲಕ ಅರ್ಕಾವತಿ ನದಿಯ ಹೆಸರುಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರನ್ನು ತರಬಹುದಾಗಿದೆ. ಇದರಿಂದಾಗಿ ಬೆಂಗಳೂರಿಗೆ 50 ರಿಂದ 60 ಟಿಎಂಸಿ ನೀರನ್ನು ತರಬಹುದು. ಈ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next