Advertisement

ಮಾರ್ಚ್‌ ಅಂತ್ಯಕ್ಕೆ ತಾಲೂಕಿಗೆ ನೀರು

09:09 PM Feb 15, 2020 | Lakshmi GovindaRaj |

ಗೌರಿಬಿದನೂರು: ತಾಲೂಕಿಗೆ ಅವಶ್ಯಕವಾಗಿರುವ ಎತ್ತಿನಹೊಳೆ ನೀರಾವರಿ ಯೋಜನೆ, ಹೆಚ್‌.ಎನ್‌.ವ್ಯಾಲಿ ಯೋಜನೆಗಳ ಕಾಮಗಾರಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದು, ಹೆಚ್‌.ಎನ್‌.ವ್ಯಾಲಿ ಯೋಜನೆ ನೀರು ಮಾರ್ಚ್‌ ಅಂತ್ಯದೊಳಗೆ ತಾಲೂಕಿಗೆ ಹರಿಯಲಿದೆ. ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್‌ ಕಾಮಗಾರಿ ಕೊರಟಗೆರೆಯಿಂದ ಗೌರಿಬಿದನೂರುವರೆಗೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಎನ್‌.ಹೆಚ್‌.ಶಿವಶಂಕರೆಡ್ಡಿ ತಿಳಿಸಿದರು.

Advertisement

ಗೌರಿಬಿದನೂರು ನಗರ ವ್ಯಾಪ್ತಿಯ 29 ನೇ ವಾರ್ಡ್‌ನಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ, ನಗರದಲ್ಲಿ ನೀರಿನ ಸಮಸ್ಯೆ ತಲೆದೋರಿರುವುದು ನನ್ನ ಗಮನಕ್ಕೆ ಬಂದಿದೆ.

ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ತಾಲೂಕಿನಲ್ಲಿ ವಸತಿ ನಿಲಯಗಳನ್ನು ಸ್ಥಾಪಿಸಲಾಗಿದೆ. ಶಂಕುಸ್ಥಾಪನೆಯಾಗಿರುವ ಪರಿಶಿಷ್ಟ ಪಂಗಡದ ವಸತಿ ನಿಲಯವು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದರು.

ಭವನ ನಿರ್ಮಾಣಕ್ಕೆ ಅನುದಾನ: ತಾಲೂಕಿನಲ್ಲಿ ಹಲವು ಜನಾಂಗಗಳ ಸಮುದಾಯ ಭವನಗಳಿಗೆ ಆದ್ಯತೆ ನೀಡಲಾಗಿದೆ. ವಾಲ್ಮೀಕಿ, ಕನಕ, ಕುಂಬಾರ, ಮಡಿವಾಳ, ಸೇವಾಲಾಲ್‌, ಮರಾಠ ಜನಾಂಗ ಭವನ, ಒಕ್ಕಲಿಗ, ಕ್ರಿಶ್ಚಿಯನ್‌ ಸಮುದಾಯಗಳಿಗೆ ನಿವೇಶನ ನೀಡಲಾಗಿದ್ದು ಆಯಾ ಜನಾಂಗಗಳಿಗೆ ಇಲಾಖೆ ನಿವೇಶನ ನೀಡಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೊಡಿಸಲಾಗುವುದು.

ಇದೇ ತಿಂಗಳು 23ಕ್ಕೆ ಶಿವಾಜಿ ಜಯಂತಿ ಇದು, ಅದರೊಳಗೆ ಮರಾಠ ಭವನ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು. ಪ್ರತಿ ಸಮುದಾಯ ಭವನ ನಿರ್ಮಾಣ ಮಾಡಲು 20 ರಿಂದ 25 ಲಕ್ಷ ರೂ. ವೆಚ್ಚವಾಗುತ್ತದೆ. ಹಣದ ಕೊರತೆಯಾದಲ್ಲಿ ಶಾಸಕರ ನಿಧಿಯಿಂದಲೂ ಸಹಾಯ ಮಾಡಲಾಗುವುದು ಎಂದರು.

Advertisement

250 ಹಾಸಿಗೆಗೆ ಮೇಲ್ದಜೇಗೆ: ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಕೊಠಡಿಗಳ ಕೊರತೆ ಹಾಗೂ ಶಿಥಿಲಗೊಂಡಿವೆ. 15 ರಿಂದ 20 ಕೋಟಿ ರೂ. ವೆಚ್ಚದಲ್ಲಿ ಈಗಿರುವ 110 ಬೆಡ್‌ಗಳ ಆಸ್ಪತ್ರೆಯನ್ನು 250 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಯ ಮಾಸ್ಟರ್‌ ಪ್ಲಾನ್‌ ತಯಾರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಹಣ ಬಿಡುಗಡೆಯಾಗುವ ಹಂತದಲ್ಲಿದ್ದು, ಈಗಿರುವ ಎಂಸಿಹೆಚ್‌ ಆಸ್ಪತ್ರೆ ಮಾದರಿಯಲ್ಲಿ ನಿರ್ಮಿಸಲಾಗುವುದು ಎಂದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆಗೆ 13 ಸಾವಿರ ಕೋಟಿ, ಹೆಚ್‌.ಎನ್‌.ವ್ಯಾಲಿ ಯೋಜನೆಗೆ 800 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದರು.

ಸಚಿವ ಮಾಧುಸ್ವಾಮಿಗೆ ಮನವಿ: ಹೆಚ್‌.ಎನ್‌.ವ್ಯಾಲಿ ಯೋಜನೆಯಿಂದ ಚಿಕ್ಕಬಳ್ಳಾಪುರದ ಕಂದವಾರದ ಕೆರೆಗೆ ನೀರು ಬರುತ್ತಿದ್ದು, ಒಂದು ವಾರದಲ್ಲಿ ಶ್ರೀನಿವಾಸ ಸಾಗರ ಕೆರೆಗೆ ನೀರು ಹರಿಯಲಿದೆ. ಅಲ್ಲಿಂದ ಸಿಮೆಂಟ್‌ ಪೈಪ್‌ಲೈನ್‌ ಮಾಡಬೇಕೆಂದು ಗುತ್ತಿಗೆ ದಾರನಿಗೆ ಸೂಚಿಸಲಾಗಿದ್ದು, ಈ ಸಂಬಂಧ ಸಚಿವ ಮಾಧುಸ್ವಾಮಿ ಅವರಿಗೆ ಮೌಖೀಕ ಹಾಗೂ ಪತ್ರಮುಖೇನ ಮನವಿ ಮಾಡಲಾಗಿದೆ ಎಂದರು.

ಗೌರಿಬಿದನೂರು ನಗರದಲ್ಲಿ ನೀರಿನ ಸಮಸ್ಯೆಯಿದ್ದು, ಮುಂಬರುವ ದಿನಗಳಲ್ಲಿಯೂ ನೀರಿನ ಸಮಸ್ಯೆ ಹೆಚ್ಚಾಗಲಿದ್ದು, ಇದಕ್ಕೆ ವಿಶೇಷ ಅನುದಾನದ ಜೊತೆಗೆ ಸೂಕ್ತ ನಿರ್ವಹಣೆಗೆ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು. ಪ್ರಕಾಶ್‌ರೆಡ್ಡಿ, ರಮಣಾರೆಡ್ಡಿ, ಸುಬ್ಬರಾಜು, ನಗರಸಭಾ ಸದಸ್ಯರಾದ ವೆಂಕಟರೆಡ್ಡಿ, ಮಂಜುಳಾ, ಶ್ಯಾಂಶಂಕರ್‌, ಅಮರನಾಥ್‌, ಜಿ.ಶ್ರೀಕಾಂತ್‌, ವೆಂಕಟರಮಣ, ಗೌರಿಬಿದನೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೋಮೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next