ನಗರ : ಕೃಷಿ ತೋಟಕ್ಕೆ ನೀರು ನುಗ್ಗಿ ಹಾನಿಯಾಗಿದ್ದು, ಮಳೆ ನೀರು ಹರಿವಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿ ತೋಟಕ್ಕೆ ನೀರು ನುಗ್ಗದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸೂತ್ರಬೆಟ್ಟು ನಿವಾಸಿ, ಮಾಜಿ ಪುರಸಭಾ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಅವರು ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಪುತ್ತೂರು ನಗರಸಭಾ ವ್ಯಾಪ್ತಿಯ ಕಸಬಾ ಗ್ರಾಮದ ಸೂತ್ರಬೆಟ್ಟು ಎಂಬಲ್ಲಿರುವ ಕೃಷಿ ಭೂಮಿಗೆ ಹಾನಿಯಾಗಿದೆ. ಸಾಲ್ಮರದಿಂದ ಎಪಿಎಂಸಿ ಮೂಲಕ ಹಾದುಹೋಗುವ ಜಾಗದಲ್ಲಿ ಜಾಗವಿದ್ದು, ಪಕ್ಕದಲ್ಲೇ ಮಳೆ ನೀರು ಹರಿದುಹೋಗುವ ದೊಡ್ಡ ಚರಂಡಿ ಇದೆ. ಇದು ಮುಂದುವರಿದು ಸಾಮೆತ್ತಡ್ಕದಲ್ಲಿ ದೊಡ್ಡ ತೋಡಿಗೆ ಸೇರುತ್ತಿದೆ. ಸಾಮೆತ್ತಡ್ಕ ಈ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಲೇಔಟ್ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ನೀರಿನ ಹರಿವಿಗೆ ತೊಂದರೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜಾಗದ ಮೂಲಕ ಸಾಗುವ ನೀರಿನ ಕಣಿಯಲ್ಲಿ ಸಮರ್ಪಕವಾಗಿ ನೀರು ಹರಿದು ಹೋಗಲು ವ್ಯವಸ್ಥೆ ಇರುವುದಿಲ್ಲ. ಇದರಿಂದಾಗಿ ಕೃಷಿ ಭೂಮಿಯಲ್ಲಿ ನೀರು ನಿಂತು ಕೃಷಿ ಸಂಪೂರ್ಣ ನಾಶವಾಗಿದೆ. ಈ ಬಗ್ಗೆ ವರ್ಷಗಳ ಹಿಂದೆಯೇ ಪುರಸಭೆಗೆ ವಕೀಲರ ಮೂಲಕ ನೋಟಿಸ್ ನೀಡಲಾಗಿತ್ತು. ಅದೇ ರೀತಿ ಪುರಸಭೆಗೆ ಮರು ಅರ್ಜಿಯನ್ನೂ ನೀಡಲಾಗಿದೆ. ಆದರೆ ಈ ತನಕ ಯಾವುದೇ ಶಾಶ್ವತ ಪರಿಹಾರ ದೊರಕಿಸಿಕೊಟ್ಟಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈಗಲೂ ನೀರು ಸರಿಯಾಗಿ ಹರಿದು ಹೋಗದೆ ಕೃಷಿ ತೋಟದಲ್ಲಿ ನೀರು ತುಂಬುತ್ತಿದೆ. ನಗರಸಭೆ ತಕ್ಷಣವೇ ಈ
ಬಗ್ಗೆ ಕ್ರಮ ಕೈಗೊಂಡು ನೀರಿನ ಸರಿಯಾದ ಹರಿವಿಗೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.