Advertisement

ನೀರಿನ ಬವಣೆ, ರಸ್ತೆ ಸಮಸ್ಯೆ ಬಿಚಿಟ್ಟ ಅರ್ತಿಪದವು ಕಾಲನಿ ನಿವಾಸಿಗಳು

03:25 PM Jan 10, 2018 | |

ನಗರ: ವಾರದೊಳಗೆ ವಿದ್ಯುತ್‌ ಬರಬಹುದು. ಆದರೆ ಕುಡಿಯಲು ದೂರದಿಂದ ನೀರು ಹೊತ್ತು ತರಬೇಕು. ರಸ್ತೆಯೂ
ಇಲ್ಲದ ಕಾರಣ ಬಹಳ ಕಷ್ಟ. ಪುತ್ತೂರು ನಗರಸಭೆ ವ್ಯಾಪ್ತಿಯ ಅರ್ತಿಪದವು ಕಾಲನಿಗೆ ನಗರಸಭೆ ಅಧಿಕಾರಿ, ಜನಪ್ರತಿನಿಧಿಗಳ ತಂಡ ಭೇಟಿ ನೀಡಿದ ಸಂದರ್ಭ, ಕಾಲನಿ ನಿವಾಸಿಗಳು ಮುಂದಿಟ್ಟ ಬೇಡಿಕೆಗಳ ಪಟ್ಟಿಯಿದು.

Advertisement

ಪುತ್ತೂರು ನಗರಸಭಾ ವ್ಯಾಪ್ತಿಯ ಕಾಲನಿಗಳ ಪೈಕಿ ತೀರಾ ಹಿಂದುಳಿದಿರುವುದು ಅರ್ತಿಪದವು ಕಾಲನಿ. ತಮಗೆ ಬೇಕಾದ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳಲು ತಿಳಿಯದಷ್ಟು ಮುಗ್ಧರು. ಹಾಗೆಂದು ನೇರವಾಗಿ ಸೌಲಭ್ಯ ನೀಡಲು ಸಾಧ್ಯವಾಗುತ್ತಿಲ್ಲ. ಕಾರಣ ಅವರ ಬಳಿ ದಾಖಲೆಗಳು ಇಲ್ಲದೇ ಇರುವುದು.

ಎಸ್ಟೇಟ್‌ಗಳಲ್ಲಿ ದುಡಿಮೆ
ಹಲವು ವರ್ಷಗಳ ಹಿಂದೆ ಮಾಯಿಲರು ಬಂದು ಅರ್ತಿಪದವಿನಲ್ಲಿ ನೆಲೆಸಿದ್ದಾರೆ. ಬಳಿಕ ಅದೇ ರೀತಿ ಜೀವನ ಸಾಗಿಸುತ್ತಿದ್ದಾರೆ. ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿದು ಕೊಂಡ ರೀತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕಾನೂನಿಗೆ ತಕ್ಕಂತೆ ಸೌಲಭ್ಯ ಪಡೆದುಕೊಳ್ಳಬೇಕು ಎಂಬ ಅರಿವು ಇಲ್ಲ. ಇಲ್ಲಿನ ಕೆಲ ಯುವಕರು ಮಡಿಕೇರಿಯ ಎಸ್ಟೇಟ್‌ಗಳಲ್ಲಿ ದುಡಿಯಲು ಹೋಗುತ್ತಾರೆ. ಉಳಿದಂತೆ ಅರ್ತಿಪದವು ಕಾಲನಿಯಷ್ಟೇ ಇವರ ಬದುಕು.

ದೊಡ್ಡ ಮನೆ ನೋಡಿದಾಗ, ಅಲ್ಲಿನ ಟಿವಿ ನೋಡಿದಾಗ ಕಾಲನಿಯ ಮಕ್ಕಳಿಗೂ ಆಸೆ. ಆದರೆ ಇದನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಲನಿ ನಿವಾಸಿಗಳು ಹೇಳಿಕೊಳ್ಳುತ್ತಾರೆ. ಕಾಲನಿ ನಿವಾಸಿಗಳಿಗೆ ಸರಕಾರದಿಂದ ಬೇಕಾದಷ್ಟು ಸೌಲಭ್ಯ ಇವೆ. ಅದನ್ನು ಪಡೆದುಕೊಳ್ಳಬೇಕಿದ್ದರೆ ದಾಖಲೆಗಳನ್ನು ಮೊದಲು ಸಿದ್ಧ ಮಾಡಬೇಕು ಎಂದು ಅವರಿಗೆ ಕಿವಿಮಾತು ಹೇಳಲಾಯಿತು.

ರಸ್ತೆಯಿಲ್ಲ
ಅರ್ತಿಪದವಿನಲ್ಲಿ ಎರಡು ಕಡೆ ಮಾಯಿಲರ ಮನೆಗಳಿವೆ. ಒಂದು ಕಡೆಯ ನಿವಾಸಿಗಳಿಗೆ ರಸ್ತೆ ನಿರ್ಮಿಸಲಾಗಿದೆ. ಇನ್ನೊಂದು ಬದಿಯ ಮನೆಗಳಿಗೆ ನಡೆದು ಕೊಂಡು ಹೋಗುವುದು ಕಷ್ಟ. ಆದ್ದರಿಂದ ನೀರಿನ ಸಂಪರ್ಕ ನೀಡುವುದು ತುಸು ಕಷ್ಟ. ಒಂದಷ್ಟು ದೂರ ಪೈಪ್‌ನಲ್ಲಿ ಸಂಪರ್ಕ ನೀಡಿ, ಬಳಿಕ ಹೊತ್ತು ತರುತ್ತಾರೆ. ಈ ಬಗ್ಗೆ ಚರ್ಚೆ ನಡೆಸಿದ ನಗರಸಭೆ, ಜೆಸಿಬಿಯಲ್ಲಿ ರಸ್ತೆ ನಿರ್ಮಿಸಿಕೊಡುವ ಕಡೆ ಮೊದಲು ಗಮನ ಕೊಡಬೇಕು. ರಸ್ತೆ ನಿರ್ಮಾಣ ಆಗುತ್ತಿದ್ದಂತೆ, ಏರು- ತಗ್ಗು ಪ್ರದೇಶ ಸಮತಟ್ಟಾಗುತ್ತದೆ. ಬಳಿಕ ನೀರಿನ ಸಂಪರ್ಕಕ್ಕೂ ದಾರಿ ಮಾಡಿಕೊಟ್ಟಂತಾಗುತ್ತದೆ. ಆದಷ್ಟು ಶೀಘ್ರ ಈ ಬಗ್ಗೆ ಗಮನ ಹರಿಸುವಂತೆ ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಹಾಗೂ ಸದಸ್ಯ ಮಹಮ್ಮದ್‌ ಆಲಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಹಕ್ಕುಪತ್ರ ಇಲ್ಲ
ಅರ್ತಿಪದವು ಕಾಲನಿಯ ಮನೆಗಳಿಗೆ ಹಕ್ಕುಪತ್ರವೇ ಇಲ್ಲ. ಸದ್ಯ 94ಸಿಸಿ ಅರ್ಜಿ ನೀಡಿ, ಹಕ್ಕುಪತ್ರ ಮಾಡಿಸಿಕೊಳ್ಳಬಹುದು. ಆದರೆ ಇದರ ಬಗ್ಗೆ ಮುತುವರ್ಜಿ ವಹಿಸಿಕೊಳ್ಳುವವರು ಇಲ್ಲಿಲ್ಲ. ಒಟ್ಟು 9 ಮನೆಗಳಿದ್ದು, ಕೆಲವೊಂದು ಮುರಿದು ಬೀಳುವ ಸ್ಥಿತಿಯಲ್ಲಿವೆ. ಇದರೊಳಗೇ ಜೀವನ ಸಾಗಿಸಬೇಕು. ಹಕ್ಕುಪತ್ರ ಸಿಕ್ಕಿದರೆ, ಸರಕಾರದ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಬಹುದು.

ನಗರಸಭೆ ವತಿಯಿಂದ ಒಂದು ದಿನ ಕಾಲನಿ ಭೇಟಿ ಮಾಡಲಾಗುವುದು. ಅಂದು ಕಾಲನಿ ನಿವಾಸಿಗಳಿಗೆ ಅಗತ್ಯ ದಾಖಲೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಅಗತ್ಯವಾದ ಅರ್ಜಿ ತುಂಬುವುದು, ಫೂಟೋ ತೆಗೆಸಿಕೊಳ್ಳುವ ಕೆಲಸಗಳನ್ನು ಮಾಡಲಾಗುವುದು ಎಂದು ಅಧ್ಯಕ್ಷೆ ಜಯಂತಿ ಬಲ್ನಾಡ್‌ ತಿಳಿಸಿದರು.

ನಶಿಸುತ್ತಿರುವ ಜನಾಂಗ
ಪುತ್ತೂರಿನ ಅರ್ತಿಪದವು ಕಾಲನಿಯಲ್ಲಿ ಮಾತ್ರ ಸಿಗುವ ಜನಾಂಗ ಮಾಯಿಲರು. ಕೊಡಗು ಮತ್ತು ಪುತ್ತೂರಿನಲ್ಲಿ ಮಾತ್ರ ಈ ಜನಾಂಗದ ಜನರು ಕಾಣಸಿಗುತ್ತಾರೆ ಎಂದೂ ಹೇಳಲಾಗುತ್ತದೆ. ಸದ್ಯ ಮಾಯಿಲ ಜನಾಂಗ ಅಳಿವಿನ ಅಂಚಿನಲ್ಲಿದೆ. ಮಲಯಾಳ, ಕೊಡಗು, ಕನ್ನಡ ಮಿಶ್ರಿತ ಮಾಯಿಲ ಎಂಬ ಭಾಷೆ ಇವರ ಆಡುಮಾತು. ಕಾಲನಿಯಲ್ಲಿರುವ ಭೈರವ, ಕಲ್ಲುರ್ಟಿ ಮೊದಲಾದ ದೈವಗಳ ಗುಡಿ ಪಾಳು ಬಿದ್ದುಕೊಂಡಿದೆ.

ಮಾದರಿ ಕಾಲನಿ ರೂಪುಗೊಳಿಸುವ ಯೋಜನೆ
ಮಾಯಿಲರ ಕಾಲನಿಯನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದೇವೆ. ಆದರೆ ಅವರೇ ಮುಂದೆ ಬಾರದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿತ್ತು. ಇದೀಗ ನಗರಸಭೆ ವತಿಯಿಂದ ಮುತುವರ್ಜಿ ವಹಿಸಿಕೊಳ್ಳಲಾಗುವುದು. ಮಾದರಿ ಕಾಲನಿಯಾಗಿ ರೂಪುಗೊಳಿಸಬೇಕು ಎಂಬ ಯೋಜನೆಯಿದೆ.
ಜಯಂತಿ ಬಲ್ನಾಡ್‌,
  ಅಧ್ಯಕ್ಷೆ, ಪುತ್ತೂರು ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next